ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕುಮಾರಸ್ವಾಮಿ ʼದಾರಿತಪ್ಪಿದ ಮಗʼ : ನಟ ಪ್ರಕಾಶ್‍ ರಾಜ್

Update: 2024-04-14 17:51 GMT

ಮಂಡ್ಯ: ಹೆಣ್ಣುಮಕ್ಕಳ ಬಗ್ಗೆ ಇಷ್ಟು ಕೆಳಮಟ್ಟಕ್ಕೆ ಇಳಿದು ಮಾತನಾಡಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲವೇ? ಎಂದು ಬಹುಭಾಷಾ ನಟ ಪ್ರಕಾಶ್‍ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ರೈತಸಭಾಂಗಣದಲ್ಲಿ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟದ ವತಿಯಿಂದ ರವಿವಾರ ನಡೆದ ಶ್ರಮಿಕರ ಸ್ವಾಭಿಮಾನಿ ಗೆಲುವಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಕುಮಾರಸ್ವಾಮಿ ದಾರಿ ತಪ್ಪಿದ ಮಗ ಎಂದು ಟೀಕಿಸಿದರು.

ಕಳೆದ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರನ್ನು ‘ಗಂಡ ಸತ್ತ ಮುಂಡೆ' ಎಂದು ಕರೆದಿದ್ದಕ್ಕೆ ಮಂಡ್ಯ ಜಿಲ್ಲೆಯ ಮಹಿಳೆಯರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದ್ದರು. ಈಗ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಮಗ ಯಾರು? ಎಂದು ತೀರ್ಮಾನಿಸಬೇಕು ಎಂದು ಅವರು ಕರೆ ನೀಡಿದರು.

ಲೋಕಸಭಾ ಚುನಾವಣೆ ಬಂದಿರುವುದರಿಂದ ಮೈಸೂರಿನ ಮಹಾರಾಜರನ್ನು ನೋಡಲು ದಿಲ್ಲಿಯ ಮಹಾಪ್ರಭುಗಳು(ನರೇಂದ್ರ ಮೋದಿ) ಬಂದಿದ್ದಾರೆ. ಮಹಾಪ್ರಭುವಿನ ಕಾರ್ಯಕ್ರಮಕ್ಕೆ ಜನರನ್ನು ಕರೆದುಕೊಂಡು ಬಸ್ಸುಗಳು ಹೊರಟಿವೆ. ಇದರಿಂದ ಬೆಂಗಳೂರು-ಮೈಸೂರು ಹೈವೇನಲ್ಲಿ ಟ್ರಾಫಿಕ್ ಜಾಮ್ ಆಗಿದೆ. ನಮ್ಮ ಮಹಾಪ್ರಭುಗಳು ಕೋವಿಡ್ ಕಾಲದಲ್ಲಿ ಯಾಕೆ ಬರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಕಳೆದ ಸೆಪ್ಟಂಬರ್ ನಲ್ಲಿ ಬರಪರಿಹಾರ ನೀಡಿ ಎಂದು ಕರ್ನಾಟಕ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ, ಎಪ್ರಿಲ್ ಬಂದರೂ ಬರಪರಿಹಾರ ನೀಡಲಿಲ್ಲ. ಇದರಿಂದ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಹೋಗಿದೆ. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರಕ್ಕೆ ನೊಟೀಸ್ ನೀಡಲು ಮುಂದಾದಾಗ, ನೊಟೀಸ್ ನೀಡಬೇಡಿ ಮಾನ ಮರ್ಯಾದೆ ಹೋಗುತ್ತೆ ಎಂದು ಬೇಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ನಾಟಕ ಯಾಕೆ ? ಎಂದು ಪ್ರಶ್ನಿಸಿದರು.

ಪ್ರಗತಿಪರ ಚಿಂತಕ ಡಾ.ವಾಸು ಹಾಗೂ ಭೂಮಿ ಮತ್ತು ವಸತಿ ಹಕ್ಕುಗಳ ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ವಿಚಾರ ಮಂಡನೆ ಮಾಡಿದರು. ಸಿರಿಮನೆ ನಾಗರಾಜು, ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್ ಅಧ್ಯಕತೆ ವಹಿಸಿದ್ದರು. ಕರ್ನಾಟಕ ಜನಶಕ್ತಿ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಕೃಷ್ಣ ಪ್ರಕಾಶ್, ಸಿಐಟಿಯು ಮುಖಂಡರಾದ ಸಿ.ಕುಮಾರಿ, ಪತ್ರಕರ್ತ ಎನ್.ನಾಗೇಶ್, ರೈತಸಂಘದ ಲತಾ ಶಂಕರ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಪೂರ್ಣಿಮ, ಜಗದೀಶ್ ನಗರಕರೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News