ಪ್ರಧಾನಿ ಮೋದಿ ಅವರ ʼಅಚ್ಚೇ ದಿನ್ʼ 10 ವರ್ಷ ಕಳೆದರೂ ಭಾರತೀಯರಿಗೆ ಬಂದಿಲ್ಲ : ಸಿಎಂ ಸಿದ್ದರಾಮಯ್ಯ

Update: 2024-04-17 11:01 GMT

Photo : x/@siddaramaiah

ಮಂಡ್ಯ : ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದೂ ಅಷ್ಟೇ ಸತ್ಯ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಶಾಸಕರು. ಅವರು ಅಲ್ಲೇ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಬಹುದಿತ್ತು. ಆದರೆ ಸೋಲಿನ ಭಯದಿಂದ ಇಲ್ಲಿಗೆ ಬಂದು ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನಮ್ಮ ಈ ಕಾರ್ಯಕ್ರಮಕ್ಕೆ ವ್ಯಕ್ತವಾಗಿರುವ ಅಭೂತಪೂರ್ವ ಸ್ಪಂದನೆಯೇ ಅವರನ್ನು ಸೋಲಿಸಲು ಮಂಡ್ಯ ಜಿಲ್ಲೆಯ ಜನತೆ ನಿರ್ಧರಿಸಿದ್ದಾರೆ ಎಂಬುದನ್ನು ಹೇಳುತ್ತದೆ. ಹೀಗಾಗಿ ಕುಮಾರಸ್ವಾಮಿಗೆ ಸೋಲು ಕಟ್ಟಿಟ್ಟ ಬುತ್ತಿ" ಎಂದು ಹೇಳಿದರು.

ರಾಜ್ಯದ ಜನತೆಗೆ ಅಚ್ಚೇ ದಿನ್ ಕಾಣಿಸಿಯೇ ಇಲ್ಲ

"ನರೇಂದ್ರ ಮೋದಿ ಅವರ ಅಚ್ಚೇ ದಿನ್ 10 ವರ್ಷ ಕಳೆದರೂ ಭಾರತೀಯರಿಗೆ ಬಂದಿಲ್ಲ. ರಾಜ್ಯದ ಜನತೆಗೆ ಅಚ್ಚೇ ದಿನ್ ಕಾಣಿಸಿಯೇ ಇಲ್ಲ. ಮೋದಿಯವರ ಕಾರಣದಿಂದ ಏರಿಕೆಯಾಗಿದ್ದ ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ-ಕಾಳು, ಅಡುಗೆ ಎಣ್ಣೆ ಸೇರಿ ಎಲ್ಲದರ ಬೆಲೆ ಏರಿಕೆ ನೀತಿಯಿಂದ ಹೈರಾಣಾಗಿದ್ದ ರಾಜ್ಯದ ಜನರ ಬದುಕಿನ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು " ಎಂದು ತಿಳಿಸಿದರು.

ರಾಜ್ಯದ ಜನರಿಗೆ ಅನ್ನಭಾಗ್ಯದ ಅಕ್ಕಿ ಕೊಡದಂತೆ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ತೊಂದರೆ ಕೊಟ್ಟರೂ ಕೂಡ ನಾವು ಅಕ್ಕಿ ಜೊತೆಗೆ ಹಣವನ್ನೂ ನಮ್ಮ ಜನರ ಬದುಕಿಗೆ ಕೊಡುತ್ತಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡವರು ಯಾರು ಎನ್ನುವುದನ್ನು ನಿಮ್ಮ ಹೃದಯಕ್ಕೆ ಕೇಳಿಕೊಳ್ಳಿ. ಅವರಿಗೆ ಮಾತ್ರ ನಿಮ್ಮ ಮತ ನೀಡಿ. ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದ ಗೆದ್ದ 27 ಸಂಸದರು ರಾಜ್ಯದ ಸಮಸ್ಯೆಗಳ ಬಗ್ಗೆ ನೆಪಕ್ಕೂ ಧ್ವನಿ ಎತ್ತದೆ ರಾಜ್ಯದ ಜನರಿಂದ ಪಡೆದ ಮತಕ್ಕೆ ಅವಮಾನ ಮಾಡಿದರು. ಈ ಅವಮಾನಕ್ಕೆ ತಕ್ಕ ಉತ್ತರ ನೀಡಿ ರಾಜ್ಯದ ಜನತೆಯ ಪರವಾಗಿ ಧ್ವನಿ ಎತ್ತುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ಮಂಡ್ಯ ಜನತೆಯ ಸ್ವಾಭಿಮಾನದ ತಾಕತ್ತನ್ನು ತೋರಿಸಿ ಎಂದು ಮನವಿ ಮಾಡಿದರು.

ಭಾರತೀಯರ ಭಾವನೆಗಳನ್ನು ಭಾವನಾತ್ಮಕವಾಗಿ ಕೆರಳಿಸಿ, ನಮ್ಮ ಬದುಕಿಗೆ ವಂಚಿಸುವವರಿಗೆ ಮಾನ್ಯತೆ ಕೊಡಬೇಡಿ. ಜನರ ಕಷ್ಟಗಳಿಗೆ ಸ್ಪಂದಿಸುವ ನಮಗೆ ಶಕ್ತಿ ಕೊಡಿ. ನೀವು ಕೊಟ್ಟ ಶಕ್ತಿ ನಿಮ್ಮ ಮನೆ ಬಾಗಿಲಿಗೇ ಉತ್ತಮ ಕಾರ್ಯಕ್ರಮಗಳ ರೂಪದಲ್ಲಿ ವಾಪಾಸ್ ಬರುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News