×
Ad

ರಾಮನಗರ ಜಿಲ್ಲೆಗೆ ಕುಡಿಯುವ ನೀರು: ಕಾಮಗಾರಿ ಪ್ರಗತಿ ಪರಿಶೀಲನೆ ನೆಡೆಸಿದ ಡಿ.ಕೆ.ಶಿವಕುಮಾರ್

Update: 2025-05-05 20:55 IST

ಮಂಡ್ಯ : ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದ ಸಮೀಪ ಕಾವೇರಿ ನದಿಯ ಸತ್ತೇಗಾಲ ಅಣೆಕಟ್ಟೆಯಿಂದ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಪ್ರಗತಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಪರಿಶೀಲಿಸಿದರು.

ಸತ್ತೇಗಾಲ ಸಮೀಪದ ಅಣೆಕಟ್ಟೆಯಿಂದ ಗುರುತ್ವಾಕರ್ಷಣೆ ಮೂಲಕ ಇಗ್ಗಲೂರಿನ ಎಚ್.ಡಿ.ದೇವೇಗೌಡ ಬ್ಯಾರೇಜಿಗೆ ನೀರನ್ನು ಹರಿಸಿ ಅಲ್ಲಿಂದ ನೀರನ್ನು ಎತ್ತಿ(ಪಂಪಿಂಗ್) ಕಣ್ವಾ, ಮಂಚನಬೆಲೆ ಮತ್ತು ವೈ.ಜಿ.ಗುಡ್ಡ ಜಲಾಶಯಗಳ ಮೂಲಕ ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇಗ್ಗಲೂರು ಬ್ಯಾರೇಜ್‍ನಿಂದ 1.10 ಟಿಎಂಸಿ ನೀರನ್ನು ಶಿಂಷಾ ನದಿಯ ಮೂಲಕ ಹರಿಸಿ ಕನಕಪುರ ತಾಲೂಕಿಗೆ ಹಾಗೂ ಇಗ್ಗಲೂರು ಬ್ಯಾರೇಜ್‍ನಿಂದ ನೀರನ್ನು ಎತ್ತಿ ಚನ್ನಪಟ್ಟಣ ತಾಲೂಕಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಹಾಗೂ ಕಣ್ವ ಜಲಾಶಯ ತುಂಬಿಸಲಾಗುವುದು.

ಈ ಯೋಜನೆಗೆ ಬೇಕಾಗಿರುವ 3.3 ಟಿಎಂಸಿ ನೀರನ್ನು ರಾಷ್ಟ್ರೀಯ ಜಲ ನೀತಿಯ ಅನ್ವಯ ಕುಡಿಯುವ ನೀರಿಗೆ ಆದ್ಯತೆ ನೀಡಿ ಕಾವೇರಿ ಜಲ ವಿವಾದ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಹಂಚಿಕೆಯಾಗಿರುವ ನೀರಿನಲ್ಲಿ ಉಪಯೋಗಿಸಿಕೊಳ್ಳಲು ಸರಕಾರದ ಆದೇಶವಾಗಿದೆ. ಯೋಜನೆಯ ಒಟ್ಟು ಯೋಜನಾ ವೆಚ್ಚ 540 ಕೋಟಿ ರೂ. ಆಗಿದೆ.

26 ಕಿ.ಮೀ. ಉದ್ದದ ಪೈಪ್‍ಲೈನ್ ಅಳವಡಿಸುವ ಜಾಗದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸುಮಾರು 12 ಗ್ರಾಮಗಳ 32 ಎಕರೆ ಜಮೀನಿಗೆ ದಿನಾಂಕ: 10.01.2024ರ ಕರ್ನಾಟಕ ರಾಜ್ಯ ಪತ್ರದಲ್ಲಿ 11(1) ಅಧಿಸೂಚನೆ ಹೊರಡಿಸಲಾಗಿರುತ್ತದೆ. ಮುಂದುವರೆದು ಸದರಿ ಜಮೀನುಗಳ ಜಂಟಿ ಅಳತೆಯು ಪೂರ್ಣಗೊಂಡಿದ್ದು, 19(1) ಅಧಿಸೂಚನೆಯನ್ನು ಹೊರಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಪ್ರಗತಿ ವರದಿಯಲ್ಲಿ ತಿಳಿಸಿಲಾಗಿದೆ.

ಕಾಮಗಾರಿ ಪರಿಶೀಲನೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದಲ್ಲೇ ವಿಶೇಷವಾದ ಯೋಜನೆ ಇದಾಗಿದೆ. ಸದರಿ ಯೋಜನೆಯ ಬಹುತೇಕ ಕಾಮಾಗಾರಿ ಮುಗಿದಿದ್ದು, ಡಿಸೆಂಬರ್‍ಗೆ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ ಎಂದರು.

26 ಕಿ.ಮೀ. ನಾಲೆಯಲ್ಲಿ ಒಟ್ಟು ಸುರಂಗದ ಉದ್ದ 12 ಕಿ.ಮೀ. ಸುರಂಗ ಬರುತ್ತದೆ. ಸುರಂಗ ಕೊರೆಯುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೇವಲ ಅರ್ಧ ಕಿ.ಮೀ. ಕಾಮಗಾರಿ ಉಳಿದಿದೆ. ಲೈನಿಂಗ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.

ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿ ಒಂದೂವರೆ ಎಕರೆ ಸ್ವಾಧೀನ ಸಮಸ್ಯೆ ಇತ್ತು. ಇದೀಗ ಭೂಮಿಯನ್ನು ನೀಡಲು ರೈತರು ಒಪ್ಪಿದ್ದಾರೆ. ಆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದ್ದು, ಸೂಕ್ತ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.

ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಸಿ.ಪಿ.ಯೋಗೇಶ್ವರ್, ಕೆ.ಎಂ.ಉದಯ, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಸುಧಾಮ್ ದಾಸ್, ಮಾಜಿ ಶಾಸಕ ಅಶ್ವಥ್, ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಇತರೆ ಗಣ್ಯರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News