×
Ad

ಮಣಿಪಾಲ: ತಾಯಿಯ ಕತ್ತು ಹಿಸುಕಿ ಕೊಂದ ಮಗ; ಆರೋಪಿಯ ಬಂಧನ

Update: 2025-06-22 14:25 IST

ಪದ್ಮಾಬಾಯಿ(45)/ಈಶ ನಾಯಕ್(26)

ಮಣಿಪಾಲ, ಜೂ.22: ಹಣಕ್ಕಾಗಿ ಮಗ ತನ್ನ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿದ್ದು, ಈ ಸಂಬಂಧ ಆರೋಪಿ ಮಗನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಕೊಲೆಗೀಡಾದವರನ್ನು ಪದ್ಮಾಬಾಯಿ(45) ಎಂದು ಗುರುತಿಸಲಾಗಿದೆ. ಮೃತರ ಮಗ ಈಶ ನಾಯಕ್(26) ಕೊಲೆ ಆರೋಪಿ.

ಜೂ.18ರಂದು ರಾತ್ರಿ ಪದ್ಮಾಬಾಯಿ ಸೊಂಟ ನೋವಿನಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಲಾಗಿದ್ದರು. ಅಂದು ರಾತ್ರಿ ಪದ್ಮಾಬಾಯಿ ಅವರ  ತಂಗಿ ಶಿಲ್ಪಾ ಎಂಬವರಿಗೆ ಕರೆ ಮಾಡಿದ ಈಶ ನಾಯಕ್‌, ತಾಯಿಗೆ ಸೌಖ್ಯವಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಕಳುಹಿಸುವಂತೆ ತಿಳಿಸಿದ್ದನು. ಅದರಂತೆ ಶಿಲ್ಪಾ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದರು. ಜೂ.19ರಂದು ಬೆಳಗ್ಗೆ ಶಿಲ್ಪಾರಿಗೆ ಕರೆ ಮಾಡಿದ ಈಶಾ, ತಾಯಿ ಬೆಳಗ್ಗೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದನು.

ಹಾಗೆ ಶಿಲ್ಪಾ ಆಸ್ಪತ್ರೆಗೆ ಬಂದು ನೋಡಿದಾಗ ಪದ್ಮಬಾಯಿ ಅವರ ಕುತ್ತಿಗೆ ಬಳಿ ಕೆಂಪಾಗಿದ್ದು ಕುತ್ತಿಗೆಯನ್ನು ಒತ್ತಿದ ರೀತಿ ಕಂಡುಬಂದಿದೆ. ಅವರ ಮರಣದಲ್ಲಿ ಸಂಶಯ ಇರುವುದಾಗಿ ಶಿಲ್ಪಾ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯಲ್ಲಿ ಕೊಲೆ ಸಾಬೀತು: ಮಣಿಪಾಲ ಆಸ್ಪತ್ರೆಯ ಶವಾಗಾರದಲ್ಲಿ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ವೈದ್ಯಕೀಯ ಶವ ಮರಣೋತ್ತರ ಪರೀಕ್ಷೆ ನಡೆಸಿದರು.

ಜೂ.21ರಂದು ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿ ಯವರು ಮೃತ ಪದ್ಮಾಬಾಯಿ ಅವರ ಮರಣದ ಬಗ್ಗೆ ಪ್ರಾಥಮಿಕ ವರದಿ ನೀಡಿದರು. ಅದರಲ್ಲಿ ಪದ್ಮಾಬಾಯಿ ಅವರನ್ನು ಯಾರೋ ದುಷ್ಕರ್ಮಿಗಳು ಜೂ.18ರಂದು ರಾತ್ರಿಯಿಂದ ಜೂ.19ರ ಬೆಳಗಿನ ನಡುವೆ ಕೊಲೆ ಮಾಡಿರುವುದಾಗಿ ದೃಢಪಟ್ಟಿದೆ. ಅದರಂತೆ ಮಣಿಪಾಲ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.

ನಂತರದ ತನಿಖೆಯಲ್ಲಿ ಪದ್ಮಾಬಾಯಿ ಅವರನ್ನು ಅವರ ಮಗ ಈಶ ನಾಯ್ಕ್ ಹಣಕ್ಕಾಗಿ ಹಾಗೂ ಕೌಟುಂಬಿಕ ಕಲಹದಿಂದ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಅದರಂತೆ ಪೊಲೀಸರು ಆರೋಪಿ ಈಶ ನಾಯಕ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News