Udupi | ಹಾಸ್ಟೆಲ್‌ನಿಂದ ಓಡಿಹೋದ ಬಾಲಕ ಕಾರವಾರದಲ್ಲಿ ಪತ್ತೆ
ಉಡುಪಿ, ಡಿ.4: ಉಡುಪಿಯ ಬೋರ್ಡಿಂಗ್ ಹಾಸ್ಟೆಲ್ ಒಂದರಿಂದ ಏಕಾಂಗಿಯಾಗಿ ಓಡಿಹೋಗುತಿದ್ದ 13 ವರ್ಷ ಪ್ರಾಯದ ಶಾಲಾ ಬಾಲಕನೊಬ್ಬನನ್ನು ಕೊಂಕಣ ರೈಲ್ವೆಯ ಹೆಡ್ ಟಿಟಿಇ ಕಾರವಾರದಲ್ಲಿ ಪತ್ತೆ ಹಚ್ಚಿ ಮರಳಿ ಉಡುಪಿಗೆ ಕಳುಹಿಸಿದ್ದಾರೆ.
ಬುಧವಾರ ರೈಲು ನಂ.12133 ಮಂಗಳೂರು ಎಕ್ಸ್ಪ್ರೆಸ್ ಕಾರವಾರ ತಲುಪಿದಾಗ, ರೈಲಿನ ಬೋಗಿ ಎಸ್3ಯಲ್ಲಿ ಬಾಲಕನೊಬ್ಬ ಏಕಾಂಗಿಯಾಗಿ ಕುಳಿತಿರುವುದನ್ನು ಅಲ್ಲಿನ ಹೆಡ್ ಟಿಟಿಇ ರಾಘವೇಂದ್ರ ಶೆಟ್ಟಿ ಗಮನಿಸಿ, ಆತನಲ್ಲಿ ಮಾತನಾಡಿ ವಿವರಗಳನ್ನು ಕೇಳಿದರು. ಆತ ಯಾವುದೇ ಪ್ರಶ್ನೆಗೆ ಸರಿಯಾಗಿ ಉತ್ತರಿಸದಿದ್ದಾಗ, ಆತನ ಬ್ಯಾಗ್ ಅನ್ನು ಪರಿಶೀಲಿಸಿದರು. ಅದರಲ್ಲಿ ಶಾಲೆಯ ಐಡಿ ಕಾರ್ಡ್ ಸಿಕ್ಕಿತ್ತು. ಕೂಡಲೇ ರಾಘವೇಂದ್ರ ಶೆಟ್ಟಿ ಅವರು ಸಂಬಂಧಿತ ಶಾಲೆಯ ಅಧಿಕಾರಿಗಳನ್ನು ಸಂಪರ್ಕಿಸಿ ಹುಡುಗನ ಕುರಿತು ವಿಚಾರಿಸಿದರು. ಆಗ ಆತ ಹಾಸ್ಟೆಲ್ನಿಂದ ಓಡಿ ಹೋಗಿರುವುದು ತಿಳಿದುಬಂತು. ಆತ ತಾಯಿಯೊಂದಿಗೆ ವಾಸಿಸುತ್ತಿದ್ದು, ಆಕೆ ಮನೆಗೆಲಸ ಮಾಡಿ ಮಗನನ್ನು ಓದಿಸುತ್ತಿರುವುದು ಸಹ ತಿಳಿದು ಬಂತು.
ತಕ್ಷಣ ತಾಯಿಯನ್ನು ಸಂಪರ್ಕಿಸಿದ ಅವರು ಮಗ ಸುರಕ್ಷಿತವಾಗಿರುವುದನ್ನು ತಿಳಿಸಿದರು. ಬಳಿಕ ಹುಡುಗನನ್ನು ಉಡುಪಿಯ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಪೊಲೀಸರು ಬಾಲಕ ಸುರಕ್ಷಿತವಾಗಿ ಮನೆ ಸೇರುವ ತನಕ ಆತನನ್ನು ಉಡುಪಿಯ ಮಕ್ಕಳ ಪಾಲನಾ ಕೇಂದ್ರದಲ್ಲಿ ಇರಿಸಿದರು.
5,000 ರೂ.ಬಹುಮಾನ :
ಓಡಿಹೋಗುತಿದ್ದ ಬಾಲಕನೊಬ್ಬನನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ತಾಯಿ ಮಡಿಲಿಗೆ ಸೇರಿಸಿದ ರಾಘವೇಂದ್ರ ಶೆಟ್ಟಿ ಅವರ ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸಿದ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ ಕುಮಾರ್ ಝಾ ಅವರು 5,000ರೂ. ನಗದು ಬಹುಮಾನವನ್ನು ಘೋಷಿಸಿದರು.