ಉಡುಪಿ | 108 ಆಂಬುಲೆನ್ಸ್ ಸೇವೆಗೆ ಸಿಬ್ಬಂದಿ ಕೊರತೆ
►18 ಆಂಬುಲೆನ್ಸ್‌ಗಳಲ್ಲಿ ಏಕಕಾಲಕ್ಕೆ 6-7 ಮಾತ್ರ ಸಂಚಾರ ► ತುರ್ತು ಕರೆಗಳಿಗೆ ಸ್ಪಂದಿಸಲು ಪರದಾಟ
ಕುಂದಾಪುರ/ ಉಡುಪಿ, ಡಿ.4: ರಾಜ್ಯ ಸರಕಾರದ ‘108 ಆರೋಗ್ಯ ಕವಚ’ ಯೋಜನೆಯ ಉಡುಪಿ ಜಿಲ್ಲೆಯಲ್ಲಿರುವ ಆಂಬುಲೆನ್ಸ್ಗಳಲ್ಲಿ ಸಿಬ್ಬಂದಿಯ ತೀವ್ರ ಕೊರತೆಯಿದೆ. ಜಿಲ್ಲೆಯಲ್ಲಿರುವ 18 ಆಂಬುಲೆನ್ಸ್ ಗಳ ಪೈಕಿ ಏಕಕಾಲದಲ್ಲಿ ಕೇವಲ 6-7 ಆಂಬುಲೆನ್ಸ್ ಗಳಷ್ಟೇ ಕಾರ್ಯ ನಿರ್ವಹಿಸುವ ಸ್ಥಿತಿ ಎದುರಾಗಿದೆ.
108 ಆಂಬುಲೆನ್ಸ್ ಗಳಲ್ಲಿ ಸಿಬ್ಬಂದಿ ಕೊರತೆ, ಅದರಲ್ಲೂ ಮುಖ್ಯವಾಗಿ ಚಾಲಕರ (ಪೈಲೆಟ್) ಸಂಖ್ಯೆ ಕಡಿಮೆ ಇರುವುದರಿಂದ ಕೆಲವೊಮ್ಮೆ ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲೂಕಿನ ಗ್ರಾಮೀಣ ಭಾಗದಿಂದ ಬರುವ ತುರ್ತು ಕರೆಗಳಿಗೆ ಆಂಬುಲೆನ್ಸ್ ಸೇವೆ ಒದಗಿಸಲು ಸಹ ಸಮಸ್ಯೆಯಾಗುತ್ತಿರುವುದು ಕಂಡುಬಂದಿದೆ.
ಗ್ರಾಮೀಣ ಭಾಗದ ಜನರಿಗೆ ಅತ್ಯುಪಯುಕ್ತವಾಗಿದ್ದ ಈ ಯೋಜನೆ ಪ್ರಾರಂಭಗೊಂಡಾಗ ಉಡುಪಿ ಜಿಲ್ಲೆಯಲ್ಲಿ ಉತ್ತಮ ಸೇವೆ ನೀಡುತಿತ್ತು. ತುರ್ತು ಸಂದರ್ಭದಲ್ಲಿ ಇದರಲ್ಲೇ ಹಲವು ಯಶಸ್ವಿ ಹೆರಿಗೆಗಳೂ ನಡೆದ ಉದಾಹರಣೆಗಳಿದ್ದವು. ಚಾಲಕರು ಹಾಗೂ ಸಿಬ್ಬಂದಿ ತಮ್ಮ ಜನಪ ಪರ ಸೇವೆಗಳ ಮೂಲಕ ಬಡ ಜನರಿಗೆ ಆರೋಗ್ಯ ಸೇವೆ ಸಕಾಲಕ್ಕೆ ಸಿಗುವಂತೆ ನೋಡಿಕೊಳ್ಳುತಿದ್ದರು. ಆದರೆ ಇತ್ತೀಚೆಗೆ ನೌಕರರಿಗೆ ಸಕಾಲದಲ್ಲಿ ಸಿಗದ ಸಂಬಳ, ಸಿಬ್ಬಂದಿ ಕೊರತೆಯು ಸರಕಾರದ ಉತ್ತಮ ಸೇವೆ ಜನತೆಗೆ ಗಗನಕುಸುಮದಂತೆ ಆಗಿದೆ.
ಚಾಲಕರೇ ಆಧಾರ :
ಆರೋಗ್ಯ ಕವಚ ಯೋಜನೆಯ ಮಾನದಂಡದ ಪ್ರಕಾರ, ಒಂದು ಆಂಬುಲೆನ್ಸ್ ನಲ್ಲಿ ಚಾಲಕ ಹಾಗೂ ಸ್ಟಾಫ್ ನರ್ಸ್ ಇರಬೇಕು. ಆದರೆ ಈಗ ಉಡುಪಿ ಜಿಲ್ಲೆಯ ಆಂಬುಲೆನ್ಸ್ಗಳಿಗೆ ಚಾಲಕರೊಬ್ಬರೇ ಆಧಾರವಾಗಿದ್ದಾರೆ. ಅಪಘಾತ ಮತ್ತಿತರ ಪ್ರಕರಣಗಳು ಬಂದಾಗ ಪ್ರಥಮ ಚಿಕಿತ್ಸೆ ನೀಡಲು ಸಹ ಒಬ್ಬ ಸಿಬ್ಬಂದಿ ಇಲ್ಲದ ಪರಿಸ್ಥಿತಿಯಿದೆ ಎಂದು ಸಿಬ್ಬಂದಿಯೊಬ್ಬರು ಬೇಸರದಿಂದ ನುಡಿದರು.
ಜಿಲ್ಲೆಯಲ್ಲಿ ಒಟ್ಟು 18 ಆಂಬುಲೆನ್ಸ್ ವಾಹನಗಳಿವೆ. 23 ಚಾಲಕರಿದ್ದಾರೆ. 13 ಸ್ಟಾಫ್ ನರ್ಸ್ಗಳಿದ್ದಾರೆ. ಮೊದಲು 12 ಗಂಟೆಗಳ ಎರಡು ಪಾಳಿ ಮಾತ್ರವಿದ್ದು, ಜನವರಿಯಿಂದ ಈಚೆಗೆ ದಿನಕ್ಕೆ ತಲಾ ಎಂಟು ಗಂಟೆಗಳ ಮೂರು ಪಾಳಿಗಳಿದ್ದು, ರಜೆ ಮತ್ತಿತರ ಕಾರಣಗಳಿಂದ ಏಕಕಾಲದಲ್ಲಿ 6-7 ಆಂಬುಲೆನ್ಸ್ ಗಳು ಮಾತ್ರ ಸೇವೆಗೆ ಸಿಗುವಂತಾಗಿದೆ.
ಈ ಸೇವೆ ಜಿಲ್ಲೆಯ ಜನತೆಗೆ ಸಮರ್ಪಕ ರೀತಿ ಯಲ್ಲಿ ಸಿಗುವಂತಾಗಬೇಕಿದ್ದರೆ ಇನ್ನೂ ಕನಿಷ್ಠ 40 ಸಿಬ್ಬಂದಿ ಹಾಗೂ 25 ಪೈಲೆಟ್(ಚಾಲಕರು)ಗಳ ಅಗತ್ಯವಿದೆ ಎಂದು ಅವರು ನುಡಿಯುತ್ತಾರೆ.
ಉಡುಪಿ ಜಿಲ್ಲೆಯ ಉಡುಪಿ, ಮಲ್ಪೆ, ಕಾಪು, ಶಿರ್ವ, ಕಾರ್ಕಳ, ಅಜೆಕಾರು, ಹೆಬ್ರಿ, ಪೆರ್ಡೂರು, ಬ್ರಹ್ಮಾವರ, ಕೋಟ, ಕೊಕ್ಕರ್ಣೆ, ಹಾಲಾಡಿ, ಸಿದ್ದಾಪುರ, ಆಲೂರು, ಕೊಲ್ಲೂರು, ಗಂಗೊಳ್ಳಿ, ಬೈಂದೂರು ಹಾಗೂ ಕಿರಿಮಂಜೇಶ್ವರದಲ್ಲಿ ಆಂಬುಲೆನ್ಸ್ ವಾಹನಗಳಿವೆ. ಇದರಲ್ಲಿ ಪ್ರಸಕ್ತ ಪೆರ್ಡೂರಿನ ವಾಹನವೊಂದು ಹಾಳಾಗಿದ್ದು, ದುರಸ್ತಿ ನಡೆಯುತ್ತಿದೆ.
‘ಕಡಿಮೆ ಸಂಬಳವೂ ಸರಿಯಾಗಿ ಸಿಗುತ್ತಿಲ್ಲ!’ :
ಮೊದಲೆಲ್ಲಾ ಎರಡು ಪಾಳಿ ಮಾತ್ರವಿದ್ದು, ಈಗ ಬೆಳಗ್ಗೆ 6ರಿಂದ ಅಪರಾಹ್ನ 2, ಅಪರಾಹ್ನ 2ರಿಂದ ರಾತ್ರಿ 10 ಹಾಗೂ ರಾತ್ರಿ 10ರಿಂದ ಮರುದಿನ ಮುಂಜಾನೆ 6... ಹೀಗೆ ತಲಾ 8 ಗಂಟೆಗಳ ಮೂರು ಪಾಳಿ ಮಾಡಿದ್ದಾರೆ. ಇದರಿಂದ ನಮಗೆ ತೀರಾ ಕಷ್ಟವಾಗುತ್ತಿದೆ ಎಂದು ಚಾಲಕರೊಬ್ಬರು ತಿಳಿಸಿದರು.
ಅನೇಕ ಕಡೆಗಳಲ್ಲಿ ಚಾಲಕರೊಬ್ಬರೇ ತುರ್ತು ಕರೆ ಬಂದಾಗ ಕಾರ್ಯ ನಿರ್ವಹಿಸಬೇಕು. ನರ್ಸ್ ಸಹ ಇರುವುದಿಲ್ಲ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹಾವೇರಿ ಭಾಗದವರೇ ಹೆಚ್ಚಾಗಿ ಚಾಲಕರಾಗಿದ್ದು, ಕಡಿಮೆ ಸಂಬಳದ ಕಾರಣ ನಿಲ್ಲುತ್ತಿಲ್ಲ. ತಿಂಗಳಿಗೆ 12-13 ಸಾವಿರ ರೂ. ಕೊಡುತ್ತಾರೆ. ಅದೂ ಸಕಾಲದಲ್ಲಿ ಸಿಗುತ್ತಿಲ್ಲ. ಆಂಬುಲೆನ್ಸ್ ನಿರ್ವಹಣೆ, ಸಕಾಲದಲ್ಲಿ ವೇತನ ಸಿಗದೇ ಇರುವುದು, ಕಡಿಮೆ ಸಂಬಳ ಇನ್ನಿತರ ಕಾರಣಗಳಿಂದ ಚಾಲಕರು ಹಾಗೂ ಸಿಬ್ಬಂದಿ ಕೆಲಸ ಬಿಟ್ಟು ಹೋಗುತ್ತಿದ್ದಾರೆ ಎಂದು ಈ 108 ಆಂಬುಲೆನ್ಸ್ ಚಾಲಕರು ಅಳಲು ತೋಡಿಕೊಳ್ಳುತ್ತಾರೆ.
108 ಆಂಬುಲೆನ್ಸ್ ಚಾಲಕರು ಹಾಗೂ ಸ್ಟಾಫ್ ನರ್ಸ್ ಕೊರತೆ ಬಗ್ಗೆ, ಅಗತ್ಯವಿರುವ ಸಿಬ್ಬಂದಿ ನೇಮಕಾತಿ ಕುರಿತಂತೆ ಈಗಾಗಲೇ ಜಿಲ್ಲೆಯಿಂದ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರಕಾರದ ಮಟ್ಟದಲ್ಲಿ ಈ ಬಗ್ಗೆ ಮುಂದಿನ ಪ್ರಕ್ರಿಯೆ ಆಗಬೇಕಾಗಿದೆ.
-ಡಾ.ಬಸವರಾಜು ಹುಬ್ಬಳ್ಳಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಡುಪಿ.