ಕುಡುಕರ ಕಥೆಯಲ್ಲ, ರೈತರ ನೋವು!
ಇಂದಿನ ರೈತನ ತೊಳಲಾಟ ಇಷ್ಟೇ: ಅವನ ಶ್ರಮ ಅವನ ಕೈಗೆ ತಲುಪುವುದಿಲ್ಲ. ಹೊಲದಲ್ಲಿ ಅವನು ಬೀಜ ಬಿತ್ತಿದರೂ, ಮಣ್ಣಿನ ತೇವ ಉಳಿಸಿಕೊಂಡರೂ, ಬಿತ್ತನೆ-ಗೊಬ್ಬರ ಔಷಧಿಯ ವೆಚ್ಚ ಹೊತ್ತರೂ, ಕೊನೆಯಲ್ಲಿ ಲಾಭ ಕಾಣುವವರು ಸಂಗ್ರಹ ಕೇಂದ್ರ, ವ್ಯಾಪಾರಿ, ಬೃಹತ್ ಕಂಪೆನಿಗಳು. ರೈತನ ಕೈಗೆ ಬರುವುದು ಕುಡುಕರಂತೆ ಸೊರಗಿದ ಮಡಿಕೆಯಂಥ ದುಗುಡ.
ಈಜನಪದ ಕಥೆ ತುಂಬಾ ಚೆನ್ನಾಗಿದೆ. ಎಲ್ಲೂ ಕೇಳಿದ ಓದಿದ ಕಥೆಯೊಂದನ್ನು ಮನಸ್ಸಿಗೆ ಮಾಡಿಕೊಂಡು ಮತ್ತೆ ನಿರೂಪಿಸಿದ್ದೇನೆ. ಅವರಿಬ್ಬರೂ ಭಯಂಕರ ಹೆಂಡಕುಡುಕರು. ಇಪ್ಪತ್ನಾಲ್ಕು ಗಂಟೆ, ಮುನ್ನೂರ ಅರವತ್ತೈದೂ ದಿನ ಕುಡಿದು ಕುಡಿದು ಅಮಲಿನಲ್ಲೇ ಇರುತ್ತಿದ್ದರು. ಕುಡಿದೇ ಅವರಿಬ್ಬರ ಹತ್ತಿರ ಇದ್ದ ದುಡ್ಡೆಲ್ಲಾ ಖರ್ಚಾಗಿ ಪಾಪರಾದರು. ಮನೆಯ ಪ್ರೀತಿ ಊರ ಘನತೆಯೂ ಬೀದಿಗೆ ಬಿದ್ದಿತ್ತು. ಇವರ ಬ್ಯಾರದಿಂದಲೇ ಹೆಂಡದ ಅಂಗಡಿಯವನು ಶ್ರೀಮಂತನಾದ. ಮನೆಯ ಮೇಲೆ ಮಹಡಿಯೇರಿಸಿದ.
ಹೆಂಡದ ಅಂಗಡಿಯ ಮುಂದೆ ಕೂತು ಕುಡುಕರಿಬ್ಬರೂ ಯೋಚಿಸಿದರು, ತಾವೂ ಹೆಂಡ ಮಾರಿ ಈ ಮಾಲಕನ ಹಾಗೆಯೇ ಯಾಕೆ ಶ್ರೀಮಂತರಾಗಬಾರದು? ಸರಿ, ಊರ ನಡುವಿನ ನಾಲ್ಕಾರು ತಾಳೆ ಮರಗಳನ್ನು ಗುತ್ತಿಗೆಗೆ ಪಡೆದು ಅವುಗಳಿಗೆ ಬಿದಿರ ಗಳ ಕಟ್ಟಿ ಮಡಕೆ ಏರಿಸಿ, ದಿನಾ ಹೆಂಡ ಇಳಿಸಿದರು. ಕೆಲವು ದಿನಗಳಲ್ಲೇ ಒಂದು ದೊಡ್ಡ ಮಣ್ಣಿನ ಮರಾಯಿಯಲ್ಲಿ ಹೆಂಡ ಸಂಗ್ರಹ ಆಯಿತು. ಏನಿಲ್ಲ ಎಂದರೂ ಅದನ್ನು ಮಾರಿದರೆ ತಮಗೆ ಕೊನೇ ಪಕ್ಷ ಸಾವಿರ ರೂಪಾಯಿಯಾದರೂ ಸಿಗುತ್ತದೆ, ಮತ್ತೆ ಹತ್ತು ಬಗನಿ ಮರ ವಹಿಸಿಕೊಂಡು ಅದರಲ್ಲೂ ಶೇಂದಿ ಇಳಿಸಿ ಮಾರಾಟ ಮಾಡಿ ಬಂದ ಹಣವನ್ನು ಸಮಾನವಾಗಿ ಹಂಚಿಕೊಂಡರೆ ಇಬ್ಬರಿಗೂ ತಲಾ ಐನೂರು ರೂಪಾಯಿ ಪಾಲು ಸಿಗುತ್ತದೆ ಎಂದು ಯೋಚಿಸಿ ಇಬ್ಬರೂ ಶೇಂದಿ ಮಡಿಕೆ ಹೊತ್ತುಕೊಂಡು ಬೀದಿ, ಸಂತೆಗೆ ಮಾರಲು ಹೊರಟರು.
ಅದು ಬಹು ದೂರದ ಸಂತೆ. ಶೇಂದಿ ತುಂಬಿದ ಮಡಿಕೆ ಹೊತ್ತು ಸಾಗಬೇಕಾದರೆ ಇಬ್ಬರಿಗೂ ಸಾಕು ಬೇಕಾಯಿತು. ಅದರಲ್ಲಿ ಒಬ್ಬನಿಗೆ ಬಾಯಾರಿಕೆ ತಡೆಯಲಾಗಲಿಲ್ಲ. ಅವನು ಇನ್ನೊಬ್ಬನಿಗೆ ‘‘ಇಲ್ಲೆಲ್ಲೂ ನೀರಿಲ್ಲ, ಸ್ವಲ್ಪ ಶೇಂದಿ ಕುಡಿಯಬಹುದೇ?’’ ಎಂದು ಕೇಳಿದ. ಅದಕ್ಕೆ ಇನ್ನೊಬ್ಬ, ‘‘ನೋಡು ನಾವು ಶೇಂದಿ ಮಾರಿ ಹಣ ಸಂಪಾದನೆ ಮಾಡಿ ಧನಿಕರಾಗಲು ಹೊರಟಿರೋದು. ಆದ್ದರಿಂದ ನಾವು ನಾವೇ ಕುಡಿದು ವ್ಯಯ ಮಾಡುವುದು ಸರಿಯಲ್ಲ’’ ಎಂದ. ಅದಕ್ಕೆ ಮೊದಲಿನವ ಹೇಳಿದ ‘‘ನಾವು ಹಣ ಸಂಪಾದನೆ ಮಾಡುವುದೇತಕ್ಕೆ? ಶೇಂದಿಗೆ ದುಡ್ಡಿಲ್ಲ ಎಂದು ತಾನೆ. ಅದಕ್ಕೆ ಸಂತೆಗೆ ಶೇಂದಿ ಹೊತ್ತುಕೊಂಡು ಹೋಗಿ ಮಾರಿ ಆ ಹಣದಲ್ಲಿ ಹೆಂಡ ತಗೊಂಡು ಕುಡಿಯಬೇಕು ಎಂದರೆ ಇದು ದ್ರಾವಿಡ ಪ್ರಾಣಾಯಾಮದ ರೀತಿ ಸುತ್ತಿದಂತಾಯ್ತು’’ ಎಂದ.
ಆದರೂ ಎರಡನೆಯವನಿಗೆ ಸಮಾಧಾನ ಆಗಲಿಲ್ಲ. ಅವನು ಶೇಂದಿ ಅಂಗಡಿಯ ಮಾಲಕನ ಉದಾಹರಣೆ ಕೊಟ್ಟು ‘‘ಅವನು ಲೀಟರಿಗೆ ಎರಡು ರೂಪಾಯಿ ತೆಗೆದುಕೊಂಡು ಶೇಂದಿ ಅಳೆದುಕೊಡುತ್ತಿರುವುದು ನೋಡಿಲ್ಲವ? ನಾವೂ ಹಾಗೆ ಮಾಡಿದರೇ ಶ್ರೀಮಂತರಾಗೋದು. ಆದ್ದರಿಂದ ನೀನು ಬೇಕಾದರೆ ಕುಡಿ, ಆದರೆ ಎರಡು ರೂಪಾಯಿ ಕೊಟ್ಟೇ ಕುಡಿಯಬೇಕು’’ ಎಂದು ಕಟ್ಟುನಿಟ್ಟಾಗಿ ಹೇಳಿದ..
ಬಾಯಾರಿಕೆಯಾದ ಮೊದಲನೆಯವನ ಬಳಿ ಒಂದು ಹಳೇ ಎರಡು ರೂಪಾಯಿ ಪಾವಲಿ ಇತ್ತು. ಅವನು ಅದನ್ನು ಜೇಬಿನಿಂದ ತೆಗೆದು ಎರಡನೆಯವನ ಕೈಗೆ ಕೊಟ್ಟು ಮಡಕೆಯಿಂದ ಒಂದು ಲೀಟರ್ ಹೆಂಡ ತಗೊಂಡು ಬಾಯಾರಿಕೆ ತಣಿಸಿಕೊಂಡ. ಮತ್ತೆ, ಇಬ್ಬರೂ ಸಂತೆ ಕಡೆಗೆ ಮುಂದುವರಿಯತೊಡಗಿದರು.
ಆದರೆ ಕೊಂಚ ದೂರ ಹೋಗುವುದರೊಳಗೇ ಎರಡನೆಯವನಿಗೆ ದಣಿವು ಹೆಚ್ಚಾಗಿ ಬಾಯಾರಿಕೆ ಶುರುವಾಯಿತು. ಎಂತಿದ್ದರೂ ಅವನ ಜೇಬಿನೊಳಗೆ ಮೊದಲಿನವ ಕೊಟ್ಟಿದ್ದ ಎರಡು ರೂಪಾಯಿ ಇತ್ತಲ್ಲ. ಅದನ್ನು ಮೊದಲನೆಯವನ ಜೇಬಿಗೆ ವರ್ಗಾಯಿಸಿದ. ಇವನೂ ಒಂದು ಲೀಟರ್ ಅಳೆದುಕೊಂಡು ಶೇಂದಿ ಕುಡಿದ. ಆದರೆ ಕೇವಲ ಒಂದು ಮೈಲು ಹೆಂಡದ ಮಡಕೆ ಹೊರುವುದರೊಳಗೇ ಮೊದಲನೆಯವನಿಗೆ ಮತ್ತೆ ದಾಹ ಶುರುವಾಯ್ತು. ಗತ್ಯಂತರವಿಲ್ಲದೆ ತನ್ನ ಜೇಬಿನಲ್ಲಿದ್ದ ಎರಡು ರೂಪಾಯಿ ಎರಡನೆಯವನಿಗೆ ಕೊಟ್ಟು ತಾನೂ ಒಂದು ಲೀಟರು ಅಳೆದುಕೊಂಡು ಕುಡಿದ.
ಹೀಗೇ ದಾರಿ ಸಾಗಿತು. ಸಂತೆ ಹತ್ತಿರಾಗುತ್ತಾ ಹೋದಂತೆ ಶೇಂದಿ ಮಡಕೆ ಹಗುರಾಗುತ್ತಾ ಹೋಯ್ತು. ಎರಡು ರೂಪಾಯಿ ಒಂದು ಸಾರಿ ಇವನ ಜೇಬಿಗೂ, ಇನ್ನೊಂದು ಸಾರಿ ಅವನ ಜೇಬಿಗೂ ಎಂದು ಅನೇಕ ಬಾರಿ ಕಿಸೆ ಬದಲಾಯಿತು. ಕುಡುಕರಿಬ್ಬರಿಗೂ ಸಂತೋಷವೋ ಸಂತೋಷ. ಒಂದು ಕಡೆ ತಲೆಗೇರಿದ ಅಮಲು, ಇನ್ನೊಂದೆಡೆ ಹಗುರವಾದ ಮಡಿಕೆ, ಸಂತೆಯ ಅಂಗಳದಲ್ಲಿ ತೇಲುತ್ತಿದ್ದರು. ಇದಕ್ಕೆ ಇನ್ನೊಂದು ಕಾರಣ ಅವರಿಬ್ಬರ ನಿಯತ್ತು, ತಾವಿಬ್ಬರೂ ಹಣ ಕೊಟ್ಟೇ ಕುಡಿಯುತ್ತಿದ್ದೇವೆ. ಜೊತೆಗೆ ತಮಗೆ ಬಾಯಾರಿಸಿಕೊಳ್ಳಲು ಶೇಂದಿಯೇ ಸಿಗುತ್ತಿದೆ. ಇನ್ನೇನು ಸ್ವಲ್ಪ ಉಳಿದಿದ್ದರೆ ಒಂದೋ ಅದನ್ನು ಮಾರಾಟ ಮಾಡಬಹುದು, ಇಲ್ಲವೋ ಹೀಗೆ ನಾವೇ ಹಣ ಕೊಟ್ಟು ಖರೀದಿಸಿ ಕುಡಿಯಬಹುದು, ಕೊನೆಗೆ ಎಲ್ಲ ಮಾರಾಟ ಆದನಂತರ ದುಡ್ಡು ಎಣಿಸಿ ಫಿಫ್ಟಿ ಫಿಫ್ಟಿ ತಗೊಂಡರೆ ಎಲ್ಲವೂ ಚುಕ್ತಾ ಎಂದು ಯೋಚಿಸಿದರು.
ಬೇರೆಯವರಿಗೆ ಮಾರುವುದೆಲ್ಲಿ? ಸಂತೆಕಟ್ಟೆಯಲ್ಲಿ ಮಡಿಕೆ ಇಳಿಸುವ ಹೊತ್ತಿಗೆ ಶೇಂದಿ ಸಂಪೂರ್ಣ ಖಾಲಿಯಾಗಿತ್ತು. ಎರಡು ರೂಪಾಯಿ ಮೊದಲು ಯಾವನ ಜೇಬಿನಲ್ಲಿತ್ತೋ ಅವನ ಬಳಿಯೇ ಸೇರಿತ್ತು.!
ಇಬ್ಬರೂ ತಮ್ಮ ತಲೆಯ ಅಮಲು ಇಳಿದ ಮೇಲೆ ಸಂತೆಕಟ್ಟೆಯ ಆಲದ ಮರದಡಿಯಲ್ಲಿ ಕುಳಿತುಕೊಂಡು ಹಣ ಹಂಚಲು ಸಿದ್ದರಾದರು. ಅಯ್ಯೋ ದೇವರೇ ಕಿಸೆ ನೋಡಿಕೊಂಡರೆ ಬರೀ ಎರಡೇ ರೂಪಾಯಿ! ಬಗನಿ ಹೆಂಡ ಪೂರ್ತಿ ಖಾಲಿಯಾಗಿದೆ. ಮಡಿಕೆ ತಳ ಹಿಡಿದಿದೆ. ಅಯ್ಯೋ ನಿರಂತರ ದುಡ್ಡು ಕೊಟ್ಟೇ ನಾವಿಬ್ಬರೂ ಕುಡಿದರೂ ಲಾಭ ಯಾಕೆ ಆಗಲಿಲ್ಲ? ಎಂದು ಲೆಕ್ಕಕ್ಕಿಂತ ಗಂಭೀರವಾಗಿಯೇ ಚಿಂತಿಸಿದರು.
ಬೇರೆ ಯಾವುದೋ ಒಂದು ಸನ್ನಿವೇಶ ಸಂದರ್ಭಕ್ಕೆ ಒಪ್ಪುವ ರೀತಿ ಈ ಮೇಲಿನ ಜನಪದ ಕಥೆಯನ್ನು ನಿನ್ನೆ ನಮ್ಮನೆಯ ಅಜ್ಜನ ಜಗಲಿಯಲ್ಲಿ ಕೂತ ಆ ಮೂಲೆಮನೆ ಸುಬ್ರಾಯ ಗೌಡರೆದುರು ಹೇಳಿದೆ. ಅವರು ಜಗಲಿಯಲ್ಲಿ ಒಂದರೇ ನಿಮಿಷ ಧ್ಯಾನಸ್ಥರಾಗಿ ‘‘ಇದು ನನ್ನದೇ ಕಥೆ’’ ಎನ್ನಬೇಕೆ? ನನಗೆ ಕಾರ್ಯ ಕಾರಣ ಸಂಬಂಧವೇ ಗೊತ್ತಾಗಲಿಲ್ಲ. ‘‘ಆ ಇಬ್ಬರು ನಿಪುಣರಲ್ಲಿ ಒಬ್ಬ ಹೆಂಡವನ್ನು ತಲೆಗೇರಿಸುತ್ತಿದ್ದನಲ್ಲ ಹಾಗೆಯೇ ನಾನು ಅನ್ನವನ್ನು ಹೊಟ್ಟೆಗೆ ಇಳಿಸುತ್ತಿದ್ದೆ. ನನ್ನಂತ ಸಣ್ಣ ಹಿಡುವಳಿದಾರ ಕೃಷಿಕ ಕೊನೆಗೆ ಇದೇ ರೀತಿ ಉಳಿತಾಯದ ಲೆಕ್ಕಕ್ಕೆ ಕೂತರೆ ಚೀಲದೊಳಗಡೆ ಚುಗುಡಿ ಬಿಟ್ಟರೆ ಬೇರೇನು ಕಾಸು ವಗೈರೆ ಉಳಿಯುವುದೇ ಇಲ್ಲ. ಈ ಬಾರಿ ಅಂತೂ ಮೂರು ಸಲ ಸಿಂಗಾರಕ್ಕೆ, ನಾಲ್ಕು ಸಲ ಕೊಳೆರೋಗಕ್ಕೆ, ಮೂರು ಸಲ ಎಲೆಚುಕ್ಕಿಗೆ, ಏನಾದ್ರೂ ಅಡಿಕೆ ಉಳಿದರೆ ಕೊಯ್ಲಿಗೆ ಮೂರು ಸಲ... ಹೀಗೆ 13 ಸಲ ಬರೀ ಅಡಿಕೆಮರ ಹತ್ತಿ ಇಳಿದಿದ್ದಕ್ಕೆ ನಾನು ಕೊಟ್ಟ ಕೂಲಿಗೇ ಸಾಲ ಮಾಡಬೇಕಾದೀತು. ದುಡ್ಡು ನಾನು ಎಲ್ಲಿಂದ ತರಲಿ? ಎಲ್ಲಿಂದ ತಿನ್ನಲಿ ಮಣ್ಣು’’ ಎಂದು ಗೌಡರು ಈ ಬಾರಿಯ ಕೃಷಿ ವ್ಯಥೆ ಕಥೆಯನ್ನು ಬೇರೆ ರೀತಿಯಲ್ಲಿ ಸಾದರ ಪಡಿಸಿದರು. ಅವರು ನಿಟ್ಟುಸಿರು ಬಿಡುವಾಗ ನಾನು ಮೌನವಾದೆ. ನಾನು ಹೇಳಿದ ಕಥೆಗೂ ಸುಬ್ರಾಯ ಗೌಡರ ವ್ಯಥೆಗೂ ಹೇಗೆ ಸಂಬಂಧ ಅನ್ನೋದು ನನಗೆ ಇನ್ನೂ ಅರ್ಥವಾಗಿರಲಿಲ್ಲ ಸತತ ನಾಲ್ಕುವರೆ ತಿಂಗಳು ಈ ಭೂಮಿ ಮೇಲೆ ಈ ವರ್ಷ ಆಳೆತ್ತರದ ಮಳೆ ಬಿತ್ತು. ಸುಮಾರು ನೂರು ದಿನ ಭೂಮಿ ಬಿಸಿಲು ನೋಡಲಿಲ್ಲ. ಈಗ ಮಳೆ ಬಿಟ್ಟಿದೆ. ಕೊಳೆರೋಗ ಬಂದ ಅಡಿಕೆ ಮರಗಳೆಲ್ಲ ವಾರದಲ್ಲಿ ಹಳದಿಯಾಗಿ ಕುಬೆ ರಟ್ಟುತ್ತಿದೆ, ಅದರ ಬುಡದಲ್ಲಿ ನೆಟ್ಟ ಎಡೆಗಿಡಕ್ಕೆ ಅದೇನೋ ಕೊಳೆತು ಸಾಯುವ ಸೀಕು. ಎಲೆ ಚುಕ್ಕಿಯದ್ದು ಬೇರೆಯೇ ವ್ಯಥೆ. ಹಂದಿ, ಆನೆ, ಜಿಂಕೆ, ಮಂಗ, ನವಿಲು ಅವುಗಳ ಪಾಲು ಬೇರೆ. ಹೆಂಡ ಕುಡಿದವರಿಗೆ ಕಡೆಗೆ ಕಿಸೆಯಲ್ಲಿದ್ದ ಎರಡು ರೂಪಾಯಿಯಾದರೂ ಉಳಿದಿತ್ತು. ನನ್ನ ಗತಿ ಏನು? ಸುಬ್ರಾಯಗೌಡರ ನೋವು ಎಲ್ಲರ ನೋವೂ ಆಗಿತ್ತು.
ಕಳೆದ ಅನೇಕ ವರ್ಷಗಳಿಂದ ಕೃಷಿಯ ಸುಖದ ಬಗ್ಗೆ ಬರೆಯುವ ಚಾಳಿಯನ್ನು ಬೆಳೆಸಿಕೊಂಡಿದ್ದೆ. ಹಳ್ಳಿ, ನಗರ, ಉದ್ಯೋಗ, ಉದ್ಯಮ, ಕೃಷಿ... ಎಲ್ಲವನ್ನು ಗಮನಿಸುತ್ತಾ, ಗಮನಿಸುತ್ತಾ ಹಸಿರು ಲೋಕದ ಸುಖವನ್ನು ಪಟ್ಟಿ ಮಾಡಿದ್ದೆ. ಪೇಟೆಯ ರಂಗು, ಕಿಸೆ ತುಂಬ ವೇತನದ ಕಾಸು ತ್ಯಾಗ ಮಾಡಿ ಕೃಷಿಗೆ ಬಂದ ಟೆಕ್ಕಿಗಳ ಬಗ್ಗೆ ಪರಿಚಯಿಸಿದ್ದೆ. ‘‘ನಿನ್ನದು ಸ್ವಲ್ಪ ಅತಿಯಾಯಿತು’’ ಎಂದು ಕೃಷಿಯಲ್ಲಿ ಮೈನಸ್ ಆದ ಗೆಳೆಯರು ನನ್ನನ್ನು ನೇರವಾಗಿ ಟೀಕಿಸಿದ್ದರು. ದಯವಿಟ್ಟು ಹೊಸ ಕೃಷಿಕರಲ್ಲಿ ಬರೀ ನೆಗೆಟಿವ್ ಅಂಶಗಳನ್ನೇ ತುಂಬಿಸಬೇಡಿ. ಕೊರತೆ ಇಲ್ಲದ ಕ್ಷೇತ್ರ ಯಾವುದಿದೆ? ಹಳ್ಳಿಯಲ್ಲಿ ದುಡ್ಡು ಸುರಿಯದಿದ್ದರೂ ಪೇಟೆಗಿಂತ ಹೆಚ್ಚು ನೆಮ್ಮದಿ ಸಿಗಬಹುದೆಂದು, ಹೊಸ ಯುವಕರಲ್ಲಿ ಪೊಸಿಟಿವ್ ತುಂಬುವ ಎಂದು ಹೇಳಿದ್ದೆ. ಬರೀ ಅಸುಖಗಳ ಸರಮಾಲೆಯನ್ನೇ ಹೊಸ ತಲೆಮಾರಿನವರ ತಲೆಯಲ್ಲಿ ತುಂಬಿ ಅವರನ್ನು ಹಳ್ಳಿ ಬಿಡಿಸುವ ಹಿರಿಯರ ಮನಸ್ಥಿತಿ ಒಂದಾದರೆ, ಈಗಿನದು ಪ್ರಕೃತಿಯೇ ಮನುಷ್ಯನನ್ನು ಕೃಷಿಯಿಂದ ಓಡಿಸುವುದು. ಈ ವರ್ಷದ ಕಾಲಮಾನ ಬರೀ ಕರಾವಳಿ, ಮಲೆನಾಡು ಅಷ್ಟೇ ಅಲ್ಲ, ದೇಶದಾದ್ಯಂತ ಭೂಮಿ ಮೇಲೆಯೇ ಅಂಟಿ ನಿಂತ ಕೃಷಿಕರನ್ನು ಯೋಚಿಸುವ ಹಾಗೆ ಮಾಡಿದ್ದು ಮಾತ್ರ ಸತ್ಯ.
ಕುಡುಕರು ಸಂತೆಗೆ ತೆರಳುವಷ್ಟರಲ್ಲಿ ಒಬ್ಬನಿಗೆ ತಾಳ್ಮೆ ಕಳೆದು ‘‘ನಾನು ಸ್ವಲ್ಪ ಕುಡಿದುಕೊಳ್ಳುತ್ತೇನೆ’’ ಎಂದು ಹೇಳಿದ. ಅದೇ ರೀತಿಯಾಗಿ ರೈತನಿಗೂ ಮಾರುಕಟ್ಟೆ ತಲುಪುವ ಮೊದಲು ಸಾವಿರ ರೀತಿಯ ಬಾಯಾರಿಕೆಗಳು ಎದುರಾಗುತ್ತವೆ. ಹೊಲದಲ್ಲಿ ಬೆಳೆ ನಿಂತಿದೆಯಾದರೂ ಸಾಲದ ನೋಟಿಸ್ ಮನೆ ಬಾಗಿಲಿಗೆ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ, ಆಸ್ಪತ್ರೆಗೆ ತಕ್ಷಣದ ಹಣ ಬೇಕಾಗುತ್ತದೆ. ಆಗ ರೈತನ ಮನಸ್ಸು, ಬೆಳೆ ಇನ್ನೂ ಮಾರುಕಟ್ಟೆಗೆ ಹೋಗಿಲ್ಲ, ಆದರೆ ಸಾಲ ಕೊಡುವ ಸಹಕಾರಿಯಿಂದ ಅಥವಾ ಮಧ್ಯವರ್ತಿಯಿಂದ ಮುಂಗಡವಾಗಿ ಸ್ವಲ್ಪ ಹಣ ತೆಗೆದುಕೊಂಡರೆ ಹೇಗೆ? ಎಂದು ಕೇಳಿಕೊಳ್ಳುತ್ತದೆ.
ಇದೊಂದು ರೀತಿ ಕುಡುಕರಲ್ಲೊಬ್ಬ ‘‘ಹಣ ಬಂದ ಮೇಲೆ ಕುಡಿಯೋಣ, ಈಗ ಕುಡಿದರೆ ಶ್ರೀಮಂತಿಕೆ ಕನಸು ಕಾಣೋದು ವ್ಯರ್ಥ’’ ಎಂದು ನುಡಿದಂತೆ, ರೈತನೂ ಕೆಲವೊಮ್ಮೆ ಇನ್ನೂ ಸ್ವಲ್ಪ ಕಾಯೋಣ, ಬೆಳೆ ಹೊಲದಿಂದ ಬಾರದ ತನಕ ಸಾಲ ತೆಗೆದುಕೊಳ್ಳಬೇಡ ಎಂದು ತನಗೆ ತಾನೇ ಸಮಾಧಾನಪಡಿಸಿಕೊಳ್ಳುತ್ತಾನೆ. ಆದರೆ ಹೊಟ್ಟೆಯ ಹಸಿವು, ಬದುಕಿನ ಅವಶ್ಯಕತೆಗಳು ಕಾಯುವುದಿಲ್ಲ. ಹೀಗಾಗಿ ರೈತನು ತನ್ನ ಬೆಳೆ ಮಾರಾಟಕ್ಕಿಂತ ಮೊದಲು, ಅದರ ಮೇಲೆ ಮಧ್ಯವರ್ತಿಗೆ ಹಕ್ಕು ಕೊಟ್ಟುಬಿಡುತ್ತಾನೆ.
ಕುಡುಕರ ಹೆಂಡದ ಅಂಗಡಿಯ ಮಾಲಕನಂತೆಯೇ ರೈತನ ಕಣ್ಣೆದುರೇ ಮಧ್ಯವರ್ತಿ ದೊಡ್ಡ ಶ್ರೀಮಂತನಾಗುತ್ತಾನೆ. ರೈತನಿಗೆ ಪ್ರತೀ ಕ್ವಿಂಟಲ್ ಭತ್ತ, ರಾಗಿ, ಜೋಳ, ಬಾಳೆ, ಅಡಿಕೆ ಇವುಗಳಿಗೆಲ್ಲ ಅರ್ಧದಷ್ಟೇ ಬೆಲೆ ಸಿಗುತ್ತದೆ, ಆದರೆ ಮಾರುಕಟ್ಟೆ ತಲುಪಿದ ಮೇಲೆ ಅದೇ ಮಾಲನ್ನು ದ್ವಿಗುಣ ಬೆಳೆಗೆ ರೈತನ ಕಣ್ಣೆದುರೇ ಆತ ಮಾರುತ್ತಾನೆ. ಲಾಭದ ಹಾಲನ್ನು ಹೀರುವವನು ರೈತನಲ್ಲ, ಆಂಗಡಿಯವ. ರೈತ ತನ್ನ ಬೆಳೆ ಹೊತ್ತು ಮಾರುಕಟ್ಟೆಗೆ ಹೋಗುವಷ್ಟರಲ್ಲಿ, ನಷ್ಟಕ್ಕೆ ಒಳಗಾದಂತೆ ನಿರಾಶೆಯ ಕುಡಿತದಲ್ಲೇ ಮುಳುಗುತ್ತಾನೆ.
ಕುಡುಕರು ಸಂತೆ ತಲುಪುವ ತನಕ ಹಗಲು-ರಾತ್ರಿ ಹೆಂಡ ಹೊತ್ತು ತೊಂದರೆ ಅನುಭವಿಸಿದಂತೆ, ರೈತನು ಬೆಳೆ ಬೆಳೆಸುವ ಹೊತ್ತಿಗೆ ಹಗಲು-ರಾತ್ರಿ ಶ್ರಮ ಪಡುತ್ತಾನೆ. ಆದರೆ ಕೊನೆಯಲ್ಲಿ ಕುಡುಕರಿಗೆ ಐವತ್ತು ರೂಪಾಯಿ ಪಾಲು ಸಿಗಲಿಲ್ಲವಲ್ಲ ಹಾಗೆಯೇ ರೈತನಿಗೂ ತನ್ನ ಬೆವರಿನ ನಿಜವಾದ ಬೆಲೆ ಸಿಗುವುದಿಲ್ಲ.
ಇಂದಿನ ರೈತನ ತೊಳಲಾಟ ಇಷ್ಟೇ: ಅವನ ಶ್ರಮ ಅವನ ಕೈಗೆ ತಲುಪುವುದಿಲ್ಲ. ಹೊಲದಲ್ಲಿ ಅವನು ಬೀಜ ಬಿತ್ತಿದರೂ, ಮಣ್ಣಿನ ತೇವ ಉಳಿಸಿಕೊಂಡರೂ, ಬಿತ್ತನೆ-ಗೊಬ್ಬರ ಔಷಧಿಯ ವೆಚ್ಚ ಹೊತ್ತರೂ, ಕೊನೆಯಲ್ಲಿ ಲಾಭ ಕಾಣುವವರು ಸಂಗ್ರಹ ಕೇಂದ್ರ, ವ್ಯಾಪಾರಿ, ಬೃಹತ್ ಕಂಪೆನಿಗಳು. ರೈತನ ಕೈಗೆ ಬರುವುದು ಕುಡುಕರಂತೆ ಸೊರಗಿದ ಮಡಿಕೆಯಂಥ ದುಗುಡ. ರೈತನು ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸುವಲ್ಲಿ ಆತ ಕುಡಿದು ಕುಡಿದು ಖಾಲಿಯಾಗದಂತೆ ಎಚ್ಚರಿಕೆ ಇರಬೇಕು. ತನ್ನ ಉತ್ಪನ್ನಕ್ಕೆ ನೇರ ಮಾರುಕಟ್ಟೆ ದೊರಕಬೇಕು, ಅವನ ಶ್ರಮಕ್ಕೆ ಅವನೇ ಮಾಲಕನಾಗಬೇಕು. ಇಲ್ಲದಿದ್ದರೆ, ಕುಡುಕರ ಕಥೆಯಂತಲ್ಲ; ರೈತನ ಬದುಕು ಬರೀ ಕಣ್ಣೀರು ತುಂಬಿದ ದುರಂತವಾಗಿ ಉಳಿಯುತ್ತದೆ.
ಇಷ್ಟಾದರೂ ಕೃಷಿ ಬೇಕು, ಕೃಷಿ ಭೂಮಿ ಬೇಕು. ಕಾರಣ ಸಾಲಮನ್ನಕ್ಕೆ. ಬೆಳೆ ವಿಮೆಗೆ. ಬಡ್ಡಿ ರೈತ ಸಾಲಕ್ಕೆ. ಇವೆಲ್ಲ ಸಿಗಬೇಕಾದರೆ ಪಹಣಿಯಲ್ಲಿ ಕೃಷಿ ಭೂಮಿ ಎಂದು ಕಾಣಿಸಬೇಕು. ಭೂಮಿ ಮೇಲೆ ಬೆಳೆ ಸತ್ತಿದೆಯೋ ಬದುಕಿದೆಯೋ ಎಂಬುದಕ್ಕಿಂತ ಆರ್‌ಟಿಸಿ ಎಂಬ ಕಾಗದದ ಮೇಲೆ ಅವು ಜೀವಂತ ಇರಬೇಕು!