×
Ad

ಐಎಡಿ -ಆನೆಕಾಲಿನ ಅಂತ್ಯಗಾಥೆ!

Update: 2025-11-16 10:43 IST

ಆನೆಕಾಲಿನ ಬಗ್ಗೆ ಆಯುರ್ವೇದದಲ್ಲಿ ಶತಮಾನ ಪೂರ್ವದಲ್ಲಿ ಉಲ್ಲೇಖವಿತ್ತು. ಆದರೆ ಅದರ ಕಾರ್ಯಪದ್ಧತಿಗೆ ವೈಜ್ಞಾನಿಕ ದೃಢತೆ ಬೇಕಿತ್ತು. ಅದನ್ನು ಡಾ. ನರಹರಿಯವರು ಅಲೋಪತಿಯ ಪ್ರಯೋಗಶಾಲೆಯ ಕಣ್ಣಿನಿಂದ ಪರಿಶೀಲಿಸಿ, ಆಯುರ್ವೇದದ ಸಿದ್ಧಾಂತದ ಹೃದಯದಿಂದ ಅರ್ಥಮಾಡಿಕೊಂಡರು. ಹೀಗೆ ಹುಟ್ಟಿದ್ದೇ ಐಎಡಿ. ಇದು ನಿಜವಾಗಿಯೂ ಒಂದು ಕ್ಲಿನಿಕ್ ಮಾತ್ರವಲ್ಲ, ಒಂದು ಚಿಂತನೆಯ ವೇದಿಕೆಯೂ ಹೌದು.

ನನ್ನೂರಿನ ಮಾಯಿಲಜ್ಜ ತೀರಿ ಹೋಗಿ ಬಹಳ ವರ್ಷಗಳಾದರೂ ಇವತ್ತಿಗೂ ನನಗೆ ನೆನಪಾಗಿರುವುದು ಅವರ ಗಾಢ ಮೌನ ಮತ್ತು ಮಣಬಾರದ ಆನೆಕಾಲಿನ ಕಾರಣಕ್ಕೆ. ಜೀವನಪೂರ್ತಿ ಆ ಗಂಟುಗಂಟು ಒರಟುಕಾಲನ್ನು ಹೊತ್ತು ಮನೆಮನೆ ತಿರುಗಿ ಹೊಲ ಗದ್ದೆ ತೋಟ ಎಂದೆಲ್ಲ ದುಡಿದು ಸಂಪಾದಿಸಿ ಕುಟುಂಬ ಪೋಷಿಸಿದ ದೇರ್ಲದ ಆ ಅಜ್ಜ ಸಾಯುವವರೆಗೂ ಹೆಚ್ಚು ಮಾತನಾಡದೆ ಮೌನವಾಗಿದ್ದದ್ದು ಅದೇ ದೈಹಿಕ ಬಲಹೀನತೆಗೆ. ದೇಹಭಾರದ ಆ ಕಾಲು ಅವರನ್ನು ಕಾಡಿದ್ದಕ್ಕಿಂತ ಹೆಚ್ಚು, ಜನ ಅವರನ್ನು ಬೆರಳಿಟ್ಟು ‘‘ಆನೆಕಾಲು ಬಂತು ನೋಡಿ’’ ಎಂದು ಪೀಡಿಸುತ್ತಿದ್ದದ್ದೇ ಮಾಯಿಲಜ್ಜ ಮಾತು ಕಡಿಮೆ ಮಾಡಲು ಕಾರಣವಾಗಿರಬೇಕು.

ಮನುಷ್ಯನ ಕಾಲು ಯಾವಾಗಲೂ ಮನುಷ್ಯನ ಕಾಲಿನ ಹಾಗೆಯೇ ಇರಬೇಕು. ಅದು ಆನೆಕಾಲಿನ ಹಾಗೆ ಆಗಿ ಹೋದರೆ ಬರೀ ಎತ್ತಿಡುವುದಕಷ್ಟೇ ಕಷ್ಟವಲ್ಲ, ನೋಡುವರಿಗೂ ಹಿಂಸೆ. ಕಾಲಿನ ಚರ್ಮ ಹಿಗ್ಗಿ, ಮಾಂಸ ಗಂಟುಗಟ್ಟಿ, ಜೀವಂತ ನರಕದಂತೆ ಕಾಣುವ ಆ ರೋಗ ಮನುಷ್ಯನ ದೇಹವನ್ನಷ್ಟೇ ಅಲ್ಲ, ಮನಸ್ಸನ್ನೂ ಪೀಡಿಸುತ್ತದೆ. ಸಮಾಜವೂ ಅವರನ್ನು ಕಣ್ಣಂಚಿನಿಂದಲೇ ನೋಡುತ್ತ ಬಂದಿದೆ. ‘‘ಬಂತು ಬಂತು ಆನೆಕಾಲು!’’ ಎಂಬ ಒಂದು ವಾಕ್ಯದಲ್ಲಿ ಮಾನವನ ಗೌರವವನ್ನೇ ದೂಗಿಬಿಡುತ್ತದೆ.

ವೈದ್ಯಕೀಯವಾಗಿ ಇದನ್ನು ಲಿಂಫ್ಯಾಟಿಕ್ ಫಿಲೇರಿಯಾಸಿಸ್ ಎನ್ನುತ್ತಾರೆ. ಕ್ಯುಲೆಕ್ಸ್ ಸೊಳ್ಳೆ ಕಚ್ಚಿದಾಗ ಹುಳಗಳು ದೇಹದ ಲಿಂಫ್ಯಾಟಿಕ್ ವ್ಯವಸ್ಥೆಯಲ್ಲಿ ನಾಟಿಕೊಂಡು ವರ್ಷಗಳ ಬಳಿಕ ಕಾಲು, ಕೈ, ಅಂಡಕೋಶ ಇತ್ಯಾದಿಗಳನ್ನು ಭಾರವಾಗಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಎಣಿಕೆಯಂತೆ ಜಗತ್ತಿನ 12 ಕೋಟಿ ಜನ ಈ ರೋಗಕ್ಕೆ ಬಲಿಯಾಗಿದ್ದಾರೆ. ಭಾರತದಲ್ಲೇ ಮೂರು ಕೋಟಿ ಜನರ ಕಾಲು, ಜೀವನ, ಆಶೆ ಇವೆಲ್ಲವನ್ನೂ ಇದು ನುಂಗಿದೆ. ಬಿಹಾರದಿಂದ ಕೇರಳದವರೆಗೂ ಇದು ಹರಡಿರುವುದು ನರಕದ ಹೂಳೆ.

ಇಂತಹ ಕತ್ತಲೆಗೆ ಬೆಳಕಿನಂತೆ ಪ್ರತ್ಯಕ್ಷನಾದರು ಡಾ. ನರಹರಿ. ಮೂಲತಃ ಅಲೋಪತಿಕ್ ವೈದ್ಯರಾದ ಇವರು ‘‘ಔಷಧದ ಶಕ್ತಿ ಅಲೋಪತಿಯಲ್ಲಿ ಇದೆ, ಆದರೆ ಮನುಷ್ಯನ ದೇಹದ ಪರಿಪೂರ್ಣತೆ ಆಯುರ್ವೇದದಲ್ಲಿದೆ’’ ಎಂಬ ನಂಬಿಕೆಯಿಂದ ಸಂಯೋಜಿತ ಚಿಕಿತ್ಸೆ ಎಂಬ ಹೊಸ ದಾರಿಯನ್ನು ತೆರೆದರು. ಅಲೋಪತಿ, ಆಯುರ್ವೇದ, ಯೋಗ ಇವುಗಳ ಸಂಯೋಜಿತ ಚಿಕಿತ್ಸಾ ಶಿಲ್ಪವೇ ಈ ರೋಗವಾಸಿ ಧಾತು. ಇದರ ಚಿಕಿತ್ಸೆಗಾಗಿಯೇ ಅವರಿಂದ ಹುಟ್ಟಿದ್ದು ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟಾಲಜಿ (ಐ.ಎ.ಡಿ.).

ಈ ಸಂಸ್ಥೆ ಇಂದು ವಿಶ್ವದ ಗಮನ ಸೆಳೆದಿದೆ. ಇಲ್ಲಿಗೆ ಬಂದ 16 ದೇಶಗಳ ಸಾವಿರಾರು ಆನೆಕಾಲು ರೋಗಿಗಳು ತಮ್ಮ ದೇಹದ ಭಾರವನ್ನಷ್ಟೇ ಅಲ್ಲ, ಜೀವನದ ನಂಬಿಕೆಯನ್ನೂ ಮರಳಿ ಪಡೆದಿದ್ದಾರೆ. ಕಾಲಿನಿಂದಾಗಿ ಮುಖ ತೋರಿಸಲಾಗದವರು ನೈತಿಕ ಬಲ ಪಡೆದಿದ್ದಾರೆ. ಇಲ್ಲಿ ಬಂದವರ ಕಾಲಿನ ಗಾತ್ರ ಸಪೂರಗೊಂಡಿದೆ. ಸಹಜವಾಗಿಯೇ ಮನಸ್ಸು ಅರಳಿದೆ. ಆಶ್ಚರ್ಯವೆಂದರೆ ಈ ಸಂಸ್ಥೆಯ ನಿರ್ದೇಶಕರು, ಸಲಹೆಗಾರರು ಯಾರೂ ಸಂಬಳ ಪಡೆಯುವುದಿಲ್ಲ; ಇದು ಸೇವೆಯೇ ಧ್ಯೇಯವಾದ ತಪೋಸ್ಥಳ. ದಾನಿಗಳ ನೆರವು ಬಿಟ್ಟರೆ ಸರಕಾರದ ವಿಶೇಷ ಅನುದಾನವಿಲ್ಲ, ಕಂಪೆನಿಗಳ ಹಣವಿಲ್ಲ, ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಐಎಡಿಯನ್ನು ‘‘ಜಗತ್ತಿನಲ್ಲಿ ಆನೆಕಾಲು ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ’’ ಎಂದು ಗುರುತಿಸಿದೆ, ಮೆಚ್ಚಿದೆ.

ಈ ಸಾಧನೆಯ ಹಿಂದೆ ಡಾ. ನರಹರಿ ಅವರ ಪತ್ನಿ ಡಾ. ಕೆ.ಎಸ್. ಪ್ರಸನ್ನ ಅವರ ಸಹಯೋಗ, ಬ್ರಿಟನ್‌ನ ತಜ್ಞ ಪ್ರೊ. ಟೆರೆನ್ಸ್ ರೆಯಾನ್ ಅವರ ವೈಜ್ಞಾನಿಕ ಬೆಂಬಲ ಇದೆ. ಅಂದ ಹಾಗೆ, ಬರೀ ನಿಮಗೇಕೆ? ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ವಿಮರ್ಶಕ ಎಸ್.ಆರ್. ವಿಜಯಶಂಕರ್ ಗೊತ್ತೇ ಇರಬೇಕು. ಇವರ ತಮ್ಮನೇ ಈ ನರಹರಿ. ತಂದೆ ಸರವು ರಾಮ ಭಟ್, ವಕೀಲರಾಗಿದ್ದವರು. ‘ಹಣಕ್ಕಿಂತ ಪುಸ್ತಕ ಮುಖ್ಯ’ ಎಂಬ ನಂಬಿಕೆ ಈ ಮನೆಯಲ್ಲಿ ಅವಾಗಲೇ ನೆಲೆಯೂರಿತ್ತು. ಬಾಲ್ಯದಲ್ಲಿ ‘ವಾಯ್ಸ್ ಆಫ್ ಅಮೆರಿಕ’ ಮತ್ತು ಬಿ.ಬಿ.ಸಿ.ಯ ವಿಜ್ಞಾನ ಕಾರ್ಯಕ್ರಮಗಳನ್ನು ಕೇಳುತ್ತಿದ್ದ ಆ ಹುಡುಗನಿಗೆ ಅಲೋಪತಿಯೆಂಬ ನಿಗೂಢ ಲೋಕದತ್ತ ಆಸಕ್ತಿ ಹುಟ್ಟಿತ್ತು. ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದು, ಕಾಸರಗೋಡಿನಲ್ಲಿ ತನ್ನ ಪ್ರಥಮ ಕ್ಲಿನಿಕ್ ಆರಂಭಿಸಿದಾಗ ಯಾರೂ ಊಹಿಸಲಿಲ್ಲ ಈ ಯುವ ವೈದ್ಯನಿಂದ ಮುಂದೊಂದು ದಿನ ವೈದ್ಯಕೀಯ ಇತಿಹಾಸದ ಹೊಸ ಅಧ್ಯಾಯ ಬರೆಯಲ್ಪಡುವುದೆಂದು. ನರಹರಿಯವರ ಮತ್ತೊಬ್ಬ ಸಹೋದರ ಎಸ್.ಆರ್. ರವಿಪ್ರಕಾಶ್, ಬೆಂಗಳೂರಲ್ಲಿ ನ್ಯಾಯವಾದಿಯಾಗಿ ಪ್ರಸಿದ್ಧರು. ಸಹೋದರಿ ಆಶಾ ಮಡಿಕೇರಿಯಲ್ಲಿ ನ್ಯಾಯವಾದಿಯಾಗಿ, ಬರಹಗಾರರಾಗಿ ಪ್ರಸಿದ್ಧಿಯಾಗಿರುವ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಪತ್ನಿ. ಹೀಗೆ ಈ ಇಡೀ ಕುಟುಂಬವೇ ಬಹು ಬಗೆಯಲ್ಲಿ ಗುರುತಿಸಿಕೊಂಡವರು.

ಮನುಷ್ಯನ ಸಹಜ ಕಾಲು ಹಿಗ್ಗಿ ಆನೆಕಾಲಿನಂತೆ ಬದಲಾದರೆ, ಅದರ ಮೇಲೆ ಬದುಕು ನಿಲ್ಲುವುದೇ ಕಷ್ಟ. ಒಂದು ಹಂತದಲ್ಲಿ ಅದಕ್ಕೆ ಮದ್ದಿಲ್ಲವೆಂದು ವೈದ್ಯಕೀಯ ಲೋಕ ಕೈ ಚೆಲ್ಲಿತ್ತು. ಆದರೆ ಡಾ. ನರಹರಿ ಅವರಿಗೆ ಔಷಧದ ಹಿಂದೆ ಇರುವ ಜೀವದ ಪರಿಪೂರ್ಣ ಅರಿವು ಇತ್ತು. ರೋಗಿಯನ್ನೇ ಕೇಂದ್ರಬಿಂದು ಮಾಡಿಕೊಳ್ಳುವ ಮಾನವೀಯ ವೈದ್ಯನ ದೃಷ್ಟಿಕೋನ ಇತ್ತು. ಅವರ ಪ್ರಕಾರ ರೋಗವು ಕೇವಲ ಶರೀರದ ಯಾವುದೋ ಒಂದು ಭಾಗದ ಅಸ್ವಸ್ಥತೆ ಮಾತ್ರವಲ್ಲ ಮನಸ್ಸಿನ ನಿರಾಶೆಯೂ ಆಗಿತ್ತು.

‘ಒಂದು ಪದ್ದತಿ ವಿಫಲವಾದರೆ ಮತ್ತೊಂದು ಪದ್ಧತಿಯನ್ನು ತಳ್ಳಿಬಿಡುವುದೇಕೆ?’ ಈ ಪ್ರಶ್ನೆ ನರಹರಿಯವರ ಮನಸ್ಸನ್ನು ಕೆದಕಿತು. ವೈದ್ಯಕೀಯ ಲೋಕದಲ್ಲಿ ಸ್ಪರ್ಧೆಯ ಬದಲು ಸಹಕಾರ ಬೇಕು ಎಂಬ ಅರಿವು ಅವರಲ್ಲಿ ಬೆಳೆಯಿತು. ಅವರು ಅಲೋಪತಿಯ ಶಕ್ತಿಯನ್ನೂ ಅದರ ದೌರ್ಬಲ್ಯವನ್ನೂ ಕಂಡರು; ಆಯುರ್ವೇದ ತತ್ವದ ಆಳವನ್ನೂ ಅದರ ನಿಧಾನತೆಯ ಮಿತಿಯನ್ನೂ ಗ್ರಹಿಸಿದರು. ಇವುಗಳನ್ನು ಜೋಡಿಸಿ ನವೀನ ತಂತ್ರಜ್ಞಾನ, ಪಾರಂಪರಿಕ ಜ್ಞಾನ ಮತ್ತು ಮಾನವೀಯ ಸ್ಪರ್ಶ ಈ ಮೂರು ತಂತಿಗಳನ್ನು ಮಿಳಿತಗೊಳಿಸಿದರೆ ಅದೇ ನಿಜವಾದ ಚಿಕಿತ್ಸೆ ಎಂದು ನಂಬಿದರು.

ಆನೆಕಾಲಿನ ಬಗ್ಗೆ ಆಯುರ್ವೇದದಲ್ಲಿ ಶತಮಾನ ಪೂರ್ವದಲ್ಲಿ ಉಲ್ಲೇಖವಿತ್ತು. ಆದರೆ ಅದರ ಕಾರ್ಯಪದ್ಧತಿಗೆ ವೈಜ್ಞಾನಿಕ ದೃಢತೆ ಬೇಕಿತ್ತು. ಅದನ್ನು ಡಾ. ನರಹರಿಯವರು ಅಲೋಪತಿಯ ಪ್ರಯೋಗಶಾಲೆಯ ಕಣ್ಣಿನಿಂದ ಪರಿಶೀಲಿಸಿ, ಆಯುರ್ವೇದದ ಸಿದ್ಧಾಂತದ ಹೃದಯದಿಂದ ಅರ್ಥಮಾಡಿಕೊಂಡರು. ಹೀಗೆ ಹುಟ್ಟಿದ್ದೇ ಐಎಡಿ. ಇದು ನಿಜವಾಗಿಯೂ ಒಂದು ಕ್ಲಿನಿಕ್ ಮಾತ್ರವಲ್ಲ, ಒಂದು ಚಿಂತನೆಯ ವೇದಿಕೆಯೂ ಹೌದು.

ಮನೆಮಗಳು ಡಾ. ಪ್ರಸನ್ನ ಅವರ ಸಹಯೋಗ, ಗುರುಗಳಾದ ಪ್ರೊ.ಜೆ.ಎನ್. ಶೆಟ್ಟಿ ಅವರ ಪ್ರೋತ್ಸಾಹ, ಪದ್ಮಶ್ರೀ ಡಾ.ಬಿ.ಎಂ. ಹೆಗ್ಡೆ ಮತ್ತು ಡಾ. ರಾಮಚಂದ್ರ ಶಾಸ್ತ್ರಿ ಮುಂತಾದ ದೇಶ ವಿದೇಶದ ಅನೇಕ ಹಿರಿಯ ತಜ್ಞರ ಸಲಹೆ ಇವೆಲ್ಲ ನರಹರಿಯವರ ಸಂಕಲ್ಪಕ್ಕೆ ಇಂಧನವಾಯಿತು. ಗುಂಪು ಪ್ರಯತ್ನದಿಂದ ಈ ಕಾಯಿಲೆಗೆ ಅಂಕುಶ ಹಾಕಲು ಸಾಧ್ಯವಾಯಿತು. ಕಾಸರಗೋಡಿನ ಹಳ್ಳಿಗಾಡುಗಳ ನೂರಾರು ವೈದ್ಯರೊಂದಿಗೆ ನರಹರಿ ನಿತ್ಯ ಪತ್ರ ವ್ಯವಹಾರ ನಡೆಸಿ ರೋಗಿಗಳ ವಿವರ ಹಂಚಿಕೊಂಡರು. ಅದನ್ನು ಜಾಗತಿಕ ತಜ್ಞರ ಜೊತೆಗೆ ಎತ್ತಿ ಹಾಕಿದರು, ಪರಸ್ಪರ ಚರ್ಚಿಸಿದರು. ಇಂಟರ್ನೆಟ್ ಇಲ್ಲದ ಕಾಲದಲ್ಲಿ ಈ ರೀತಿಯ ಸಂಪರ್ಕವೇ ಬಹುದೊಡ್ಡ ಜ್ಞಾನಜಾಲವಾಯಿತು.

ಅವರು ಹೇಳುತ್ತಾರೆ ‘‘ಅಲೋಪತಿಯ ಬಯಾಪ್ಸಿ ಒಂದು ಸತ್ಯವನ್ನು ತೋರಿಸಬಹುದು. ಆದರೆ ಕೆಲವೊಮ್ಮೆ ಅದೇ ಬಯಾಪ್ಸಿಯ ಫಲವು ಜೀವಚ್ಛವ ತರುತ್ತದೆ. ಅದಕ್ಕಾಗಿಯೇ ವೈದ್ಯರು ತಮ್ಮ ಅಹಂಕಾರದಿಂದ ಹೊರಬಂದು ಪರ್ಯಾಯಗಳತ್ತ ನೋಡಬೇಕು’’ ಇದೇ ಅರಿವು ಅವರ ಒಟ್ಟು ಸಂಯೋಜಿತ ಚಿಕಿತ್ಸೆಯ ಬುನಾದಿ.

ಇಂದು ಐಎಡಿ ವೈದ್ಯಕೀಯ ಲೋಕದಲ್ಲಿ ವಿಶ್ವಮಟ್ಟದ ಮಾನ್ಯತೆ ಪಡೆದಿದೆ. ‘ಗುಣವಾಗದ ಕಾಯಿಲೆ’ ಎಂಬ ಶಾಪದ ಮೇಲೆ ಅವರು ಧೈರ್ಯದಿಂದ ಬಿತ್ತಿದ ಹೊಸ ವ್ಯಾಖ್ಯಾನ, ಕ್ಷಮಿಸಿ ಅದು ಈಗ ಗುಣವಾಗುವ ಕಾಯಿಲೆ ಮತ್ತು ವಿಶ್ವಾಸವಾಗಿ ಬದಲಾಗಿದೆ. ಆನೆಕಾಲಿಗೆ ಅಂಕುಶ ಹಾಕಿದ ಅವರ ಸಂಶೋಧನೆ, ಮಾನವೀಯತೆ ಮತ್ತು ಹೋರಾಟ ಇಂದಿನ ವೈದ್ಯಕೀಯ ಲೋಕಕ್ಕೆ ಒಂದು ಪಾಠ: ಚಿಕಿತ್ಸೆ ಕೇವಲ ಔಷಧವಲ್ಲ, ಅದು ಸಹಾನುಭೂತಿಯ ಕಲೆ ಕೂಡ. ಈ ‘ಇಂಟಗ್ರೇಟೆಡ್ ಮೆಡಿಸಿನ್’ ಸಂಯೋಜಿತ ಚಿಕಿತ್ಸೆಯನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ಹೇಳುವಂತೆ ಇದು ಪಾರಂಪರಿಕ ವೈದ್ಯ ವಿಧಾನಗಳನ್ನೂ, ಆಧುನಿಕ ವೈದ್ಯಶಾಸ್ತ್ರದ ನಿಯಮಗಳನ್ನೂ ಒಟ್ಟುಗೂಡಿಸಿ ಬಳಸುವ ವೈಜ್ಞಾನಿಕ ಕ್ರಮ. ಆದರೆ ಕೇವಲ ಪದದ ಮಟ್ಟದ ಸಂಯೋಜನೆ ಖಂಡಿತ ಅಲ್ಲ. ಇದು ಮನಸ್ಸಿನ ಮಟ್ಟದ, ಮೌಲ್ಯಗಳ ಮಟ್ಟದ ಸಂವಾದ. ಇಲ್ಲಿ ರೋಗಿಯ ಕಾಲನ್ನು ಮಾತ್ರ ಚಿಕಿತ್ಸೆ ಮಾಡುವುದಲ್ಲ, ಅವನ ಮನಸ್ಸನ್ನೂ ಗುಣಪಡಿಸುವ ಪ್ರಯತ್ನ ಇಲ್ಲಿ ನಡೆಯುತ್ತದೆ. ಈ ಚಿಕಿತ್ಸೆಯಲ್ಲಿ ಔಷಧಿ ಮಾತ್ರವಲ್ಲ, ಪ್ರೀತಿ, ಧೈರ್ಯ ಮತ್ತು ನಂಬಿಕೆಗಳೂ ಔಷಧಿಯ ಭಾಗವಾಗುತ್ತವೆ.

ಅಲೋಪತಿಯಲ್ಲಿ ರೋಗದ ಮೂಲವನ್ನು ಹುಡುಕುವುದು, ಪರೀಕ್ಷೆಗಳ ಸರಪಳಿ, ವರದಿಗಳ ವಾಸ್ತವ್ಯ ಇವೆಲ್ಲವೂ ಇಲ್ಲಿಯೂ ಇವೆ. ಜೊತೆಗೆ ಆಯುರ್ವೇದದ ಸುವಾಸನೆಯ ಲೇಪವೂ ಇದೆ ಪ್ರಾಣಶಕ್ತಿಯ ಪುನರುಜ್ಜೀವನ, ದೇಹದ ಸಮತೋಲನ, ಮನಸ್ಸಿನ ಶಾಂತಿ ಸೂತ್ರದ ಅಡಿಯಲ್ಲಿ ಒಂದು ಕೈಯಲ್ಲಿ ಸ್ಟೆತಾಸ್ಕೋಪ್, ಇನ್ನೊಂದು ಕೈಯಲ್ಲಿ ಕಷಾಯದ ಪಾತ್ರೆ ಇವೆರಡನ್ನೂ ಒಂದೇ ತೂಕದಲ್ಲಿ ಹಿಡಿಯುವ ವೈದ್ಯನ ದೃಷ್ಟಿಯೇ ಸಂಯೋಜಿತ ಚಿಕಿತ್ಸೆಯ ಶ್ರೇಷ್ಠತೆ.

ಶತಶತಮಾನಗಳಿಂದ ಆಯುರ್ವೇದ ಬೆಸೆದು ಬೆಳೆದರೂ ಅಲೋಪತಿ ಮಾತ್ರ ಅಧಿಕೃತ ವೈಜ್ಞಾನಿಕ ಎಂದೂ, ಆಯುರ್ವೇದವನ್ನು ಹಳೆಯದ್ದು, ನಿಧಾನ, ಅವೈಜ್ಞಾನಿಕ ಎಂದು ಹೇಳಿಕೊಂಡು ಬಂದ ದೋಷ ನಮಗಿತ್ತು. ಆದರೆ ಇಂದು ವಿಶ್ವವೇ ಹಿಂದಿರುಗಿ ನಮ್ಮ ಮನೆಯ ಬಾಗಿಲು ತಟ್ಟುತ್ತಿದೆ ‘‘ನಿಮ್ಮಲ್ಲಿ ನೆಲಮೂಲದ ಆಳದ ನಾಟಿ ಜ್ಞಾನವಿದೆ’’ ಎಂದು. ಅದಕ್ಕೆ ಸಾಕ್ಷಿ ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು, ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಐಎಡಿಯ ಸಂಶೋಧನೆಗೆ ದೊರೆತ ಮನ್ನಣೆ.

ಡಾ. ನರಹರಿಯವರ ಕಾರ್ಯಪದ್ಧತಿ ಕ್ರಮಬದ್ಧ. ಅವರು ಎಂದೂ ಅಲೋಪತಿ ಮತ್ತು ಆಯುರ್ವೇದ ನಡುವಿನ ವ್ಯತ್ಯಾಸವನ್ನು ವಾದವಾಗಿ ಅಲ್ಲ, ವಾಸ್ತವವಾಗಿ ನೋಡಿದರು. ಪ್ರತಿಯೊಬ್ಬ ರೋಗಿಯ ಆರೋಗ್ಯ ದಾಖಲೆಗಳು, ಚಿಕಿತ್ಸೆಯ ಮೊದಲು-ನಂತರದ ಚಿತ್ರಗಳು, ವೈದ್ಯಕೀಯ ಡೇಟಾ ಇವೆಲ್ಲವನ್ನು ಅವರು ಶಿಸ್ತಿನಿಂದ ಸಂಗ್ರಹಿಸಿದರು. ಇದು ಆಯುರ್ವೇದ ಕ್ಷೇತ್ರದಲ್ಲಿ ಒಂದು ಹೊಸ ಸಂಸ್ಕೃತಿಯನ್ನು ಹುಟ್ಟಿಸಿದೆ. ಸಾಕ್ಷ್ಯಾಧಾರಿತ ಆಯುರ್ವೇದ, ಅದು ಕೇವಲ ಭಾವನೆಯಷ್ಟೇ ಅಲ್ಲ, ಪ್ರಮಾಣದ ಭಾಷೆಯಾಗಿಯೂ ಮಾತನಾಡುತ್ತದೆ.

ಡಾ. ನರಹರಿ ಕಲ್ಪಿತ ಸಂಯೋಜಿತ ಚಿಕಿತ್ಸೆಯ ತಾತ್ಪರ್ಯವೆಂದರೆ ‘‘ಒಬ್ಬ ವೈದ್ಯನು ಎಲ್ಲವನ್ನೂ ತಿಳಿದಿರಬೇಕು’’ ಎಂದಲ್ಲ; ಎಲ್ಲ ವೈದ್ಯರು ಒಟ್ಟಾಗಿ ಒಬ್ಬ ರೋಗಿಯನ್ನು ಅರ್ಥಮಾಡಿಕೊಳ್ಳಬೇಕು ಎಂಬುದು. ಅಲೋಪತಿಯಲ್ಲಿ ಆಯುರ್ವೇದ ವನ್ನು ಅಸಾಧು ಎಂದು, ಆಯುರ್ವೇದದಲ್ಲಿ ಅಲೋಪತಿಯನ್ನು ಅನವಶ್ಯಕ ಎಂದು ನೋಡುವ ಬದಲಾಗಿ, ಇವುಗಳು ಪರಸ್ಪರ ಕೈಹಿಡಿದು ನಡೆಯುವಾಗ ಮಾತ್ರ ‘ಪೂರ್ಣ ಚಿಕಿತ್ಸೆ’ ಸಾಧ್ಯ ಎಂಬುದು. ಐಎಡಿಯು ಕೇವಲ ಆಸ್ಪತ್ರೆ ಅಲ್ಲ ಅದು ಹೊಸ ಚಿಂತನೆಗೆ ಕಣಜ. ‘‘ಮಾನವೀಯತೆ ಮತ್ತು ವಿಜ್ಞಾನ ಒಂದೇ ತಾಯಿಯ ಇಬ್ಬರು ಮಕ್ಕಳು’’ ಎಂಬ ತತ್ವ ಇಲ್ಲಿ ಜೀವಂತವಾಗಿದೆ. ದುಬಾರಿ ಔಷಧಿಗಳ ಬದಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಕಡಿಮೆ ವೆಚ್ಚದಲ್ಲಿ, ಹೆಚ್ಚು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುವ ಹಾದಿ ಇದು.

ಜೊತೆಗೆ ಈಗ ನರಹರಿ ಅವರುಕೇವಲ ರೋಗವನ್ನು ಗುಣಪಡಿಸುತ್ತಿಲ್ಲ, ವೈದ್ಯಶಾಸ್ತ್ರದ ಮನಸ್ಸನ್ನೇ ಗುಣಪಡಿಸುತ್ತಿದ್ದಾರೆ.

ಇಂಥ ವೈದ್ಯಕೀಯದ ಕಠಿಣ ವಿಷಯ- ಯಶೋಮಾರ್ಗವನ್ನು ಮಾನವೀಯ ಕಥೆಯಂತೆ ಸೂಕ್ಷ್ಮವಾಗಿ ಹೆಣೆದ ಲೇಖಕಿ ಪ್ರೊ. ಯು. ಮಹೇಶ್ವರಿ. ಅವರ ಈ ಕೃತಿ ಆನೆಕಾಲಿನಿಂದ ಸೋತು ಸುಣ್ಣವಾದ ಸಾವಿರಾರು ಜನರ ಬದುಕಿಗೆ ನುಡಿದೋಣಿಯಾಗಿದೆ. ಈವರೆಗೆ ವಿಮರ್ಶೆ, ಸ್ತ್ರೀ ವಾದಿ, ಸೃಜನಶೀಲ ದಾರಿಯಲ್ಲೇ ಹೆಚ್ಚು ಕೆಲಸ ಮಾಡಿದ ಮಹೇಶ್ವರಿ ಅವರು ವೈದ್ಯ, ಲೇಖಕ, ಅಪ್ರತಿಮ ಸಂಘಟಕ ಎಲ್ಲವೂ ಆಗಿರುವ ಡಾ. ನಾ ಮೊಗಸಾಲೆ ಅವರ ಒತ್ತಾಸೆಯಿಂದ ಈ ಪುಸ್ತಕವನ್ನು ಬರೆದಿದ್ದಾರೆ. ಈ ನಾಡಿನ ಶ್ರೇಷ್ಠ ಸಾಕ್ಷಿಪ್ರಜ್ಞೆಯಾಗಿರುವ ಮೊಗಸಾಲೆ ಯವರು ಕಟ್ಟಿದ ಕಾಂತಾವರ ಕನ್ನಡ ಸಂಘ ಸಂಸ್ಕೃತಿ ಸಾಹಿತ್ಯೇತರ ಮಾನವೀಯ ನೆಲೆಯಲ್ಲಿ ಇಂತಹ ದೊಂದು ಪುಸ್ತಕವನ್ನು ಪ್ರಕಟಿಸುವುದರ ಮೂಲಕ ನಾಡಿಗೆ ಬಹುಮುಖ್ಯ ಕೊಡುಗೆಯನ್ನು ನೀಡಿದೆ.

ಡಾ. ನರಹರಿ ದಂಪತಿಗೆ, ಲೇಖಕಿ ಮಹೇಶ್ವರಿ ಮತ್ತು ಡಾ. ಮೊಗಸಾಲೆಯವರಿಗೆ, ಸಂಪಾದಕ ಬಿ. ಜನಾರ್ದನ ಭಟ್, ಸುಂದರವಾಗಿ ಮುದ್ರಿಸಿದ ಮಂಗಳೂರಿನ ಆಕೃತಿಗೆ ತುಂಬು ಹೃದಯದ ಅಭಿನಂದನೆಗಳು.(ಮೊ. 9900701666)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News