×
Ad

ರಸ್ತೆಗಳಲ್ಲ, ಅಗಲವಾಗಬೇಕಾದದ್ದು ಮನುಷ್ಯನ ಮನಸ್ಸು!

Update: 2025-11-30 10:13 IST

ಯಾರ ತಪ್ಪೆಂದು ಹೇಳಬೇಕಾದಷ್ಟು ಸ್ಪಷ್ಟವಾದ ವ್ಯವಸ್ಥೆಗಳು ನಮ್ಮಲ್ಲಿದ್ದರೂ, ಜನರಿಗೆ ಕಾನೂನಿಗಿಂತ ತಮ್ಮ ಭಾವನೆ, ಬುದ್ಧಿ, ಸಮ್ಮತಿ ಇವೇ ಹೆಚ್ಚು ಸತ್ಯವಾದಂತೆ ಕಾಣಿಸಲಾರಂಭಿಸುತ್ತದೆ. ಇದನ್ನು ಬದಲಿಸುವುದು ರಸ್ತೆಗಿಂತ ದೊಡ್ಡ ಕೆಲಸ. ಈ ಮೊಂಡು ವಾದ ಹಠಮಾರಿತನ ತಾನೇ ಗೆಲ್ಲಬೇಕೆನ್ನುವ ಪ್ರವೃತ್ತಿ ಇದನ್ನೆಲ್ಲ ನೋಡುವಾಗ ಅನೇಕ ಬಾರಿ ಬದುಕಿನ ಬೇರೆ ಕ್ಷೇತ್ರಗಳೂ ನೆನಪಿಗೆ ಬರುತ್ತವೆ. ನಮ್ಮ ಸುತ್ತಲಿನ ಪ್ರತಿಯೊಂದು ತಕರಾರಿಗೂ ಇದೇ ತರ್ಕಗಳು ಕಾರಣವಾಗುತ್ತವೆ.

ದಿಲ್ಲಿಯೇ ಬೇಕಾಗಿಲ್ಲ, ಹಳ್ಳಿಯಾದರೂ ಸರಿ, ನಿಮ್ಮ ಊರನ್ನು ಸೀಳಿಕೊಂಡು ಸಾಗುವ ರಸ್ತೆಯ ಮೇಲೆ ಎರಡು ಗಾಡಿಗಳು ಪರಸ್ಪರ ಢಿಕ್ಕಿಯಾದರೆ, ಅದೇ ಹೊತ್ತಿಗೆ ಅದೇ ರಸ್ತೆಯಲ್ಲಿ ಅದೇ ಜಾಗದಲ್ಲಿ ನೀವೂ ಅಲ್ಲಿದ್ದರೆ ಆನಂತರ ನಡೆಯುವ ಗುಂಪು ತರ್ಕವನ್ನು ಒಬ್ಬ ಪ್ರೇಕ್ಷಕರಾಗಿ ಕಣ್ಣು ಕಿವಿ ತೆರೆದಿಟ್ಟು ನೋಡುತ್ತಾ ಇರಿ. ಎರಡೂ ಗಾಡಿಗಳಲ್ಲಿದ್ದ ಚಾಲಕರಿಗೆ ಗಾಯಗಳಾಗದೆ ಬರೀ ಗಾಡಿಗಳಷ್ಟೇ ನುಜ್ಜುಗುಜ್ಜಾಗಿದ್ದರೆ ಮುಂದೆ ಅವರಿಬ್ಬರ ಮಾತುಗಳು ಹೇಗೆ ಸಾಗುತ್ತವೆ ಎಂಬುದನ್ನು ನಾನು ಪ್ರತ್ಯೇಕ ವಿವರಿಸಬೇಕಾದ ಅಗತ್ಯವಿಲ್ಲ.

ಮೊನ್ನೆ ಮೊನ್ನೆ ರಾಷ್ಟ್ರೀಯ ಹೆದ್ದಾರಿ ಒಂದರಲ್ಲಿ ಅಂತಹ ಒಂದು ಅಪಘಾತದ ಸಮೀಪದರ್ಶಿಯಾಗಿ ಅಲ್ಲಿಯ ವಿಸಂಗತಿಗಳನ್ನು ಸ್ವಲ್ಪ ಕುತೂಹಲದಿಂದಲೇ ಗಮನಿಸಬೇಕಾಯಿತು. ಕಾರು ಮತ್ತು ಆಟೊರಿಕ್ಷಾದ ಮುಖಮೂತಿಗಳಷ್ಟೇ ಸ್ವಲ್ಪ ಜಜ್ಜಿ ಹೋಗಿತ್ತು. ತಪ್ಪು ಯಾರದ್ದೆಂಬುವುದು ಆ ಇಬ್ಬರಲ್ಲಿ ಒಬ್ಬರಿಗೆ ಖಂಡಿತವಾಗಿಯೂ ಗೊತ್ತಿರುವುದು ಬಿಟ್ಟರೆ ಆ ಕ್ಷಣಕ್ಕೆ ಅಲ್ಲಿ ಸೇರಿದ್ದ ಬೇರೆ ಯಾರಿಗೂ ಗೊತ್ತಿರಲಿಲ್ಲ.

ಗುದ್ದಿದವ ಎದ್ದು ಬಂದು ತಪ್ಪು ತನ್ನದೇ ಎಂದು ರಾಜಿಯಾಗುತ್ತಿದ್ದರೆ ಅಷ್ಟರಲ್ಲೇ ಅಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನ ನಿಲ್ಲುವ ಅಗತ್ಯವೇ ಇರಲಿಲ್ಲ. ಅವರಿಬ್ಬರೂ ಪರಸ್ಪರ ಒಮ್ಮತಕ್ಕೆ ಬರಲಿಲ್ಲ, ರಾಜಿಯ ಮಾತೇ ಇಬ್ಬರಿಂದಲೂ ಇಲ್ಲ.ಮುಂದಿನದ್ದು ಇನ್ನೂ ರೋಚಕ, ರೋಮಾಂಚಕ. ಗುದ್ದಿಕೊಂಡಾಗ ಇಲ್ಲಿದ್ದದ್ದು ಇಬ್ಬರೇ ಅಲ್ವಾ? ಈಗ ಎದುರು ಬದುರು ವಾಹನಗಳ ಸಾಲು ಸಾಲು ಚಾಲಕರು ಪ್ರಯಾಣಿಕರು ತಮ್ಮ ತಮ್ಮ ವಾಹನದಿಂದ ಇಳಿದು ಆ ಘಟನೆಯ ಸುತ್ತ ಜಮಾವಣೆಗೊಳ್ಳಲಾರಂಭಿಸಿದರು ಘಟನೆಯ ನೇರ ಸಾಕ್ಷಿಗಳಾಗಿ ವಾದಿಸಲಾರಂಭಿಸಿದರು.

ನಾನು ಪ್ರತ್ಯಕ್ಷ ನೋಡಿದ್ದೇನೆ ಎನ್ನುವ ರೀತಿಯಲ್ಲೇ ಕೆಲವರು ‘ಇವನದ್ದು ಸರಿ, ಅವನದ್ದು ತಪ್ಪು’ ಎಂದು ಮಾತನಾಡುತ್ತಿದ್ದರೇ ಹೊರತು ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುವತ್ತ ಯಾರೂ ಪ್ರಯತ್ನ ಪಡುತ್ತಿರಲಿಲ್ಲ. ಅನೇಕರು ಇಂತಹ ಅಪಘಾತ ಸಂಘರ್ಷಗಳನ್ನು ಪರಿಹರಿಸುವುದಕ್ಕೇ ಹುಟ್ಟಿಕೊಂಡ ತಜ್ಞ ಗೃಹಸ್ಥರ ಹಾಗೆ ಆ ಕ್ಷಣಕ್ಕೆ ಅಲ್ಲಿ ಪ್ರತ್ಯಕ್ಷರಾಗಿ ರಾಜಿ ಸೂತ್ರಗಳನ್ನು ಯೋಜಿಸುತ್ತಿದ್ದರು. ಗುದ್ದಿದ ಕಾರಿನ ಹಿಂಬದಿಯ ಸೀಟಲ್ಲಿದ್ದ ಯುವತಿಯರಿಬ್ಬರ ಗಮನ ಸೆಳೆಯುವ ಉದ್ದೇಶದಿಂದಲೋ ಒಬ್ಬನಂತೂ 15 ನಿಮಿಷದ ನಂತರ ಕಾಣಿಸಿಕೊಂಡು ರಿಕ್ಷಾದವನದ್ದೇ ತಪ್ಪೆಂದು ವಾದಿಸತೊಡಗಿದ. ಇನ್ನು ಕೆಲವರು ಆಕ್ಸಿಡೆಂಟ್ ಮಾಡಿಕೊಂಡ ಚಾಲಕರಿಬ್ಬರ ಜಾತಿ ಧರ್ಮ ಯಾವುದಿರಬಹುದೆಂದು ಸಂಶೋಧನೆ ಮಾಡುತ್ತಿದ್ದರು. ಆ ವಾಹನದಲ್ಲಿದ್ದ ಪೂಜಾ ಮೂರ್ತಿ ದೇವರ ಫೋಟೊ ಇತ್ಯಾದಿಗಳ ಬಗ್ಗೆ ಕೆಲವರಿಗೆ ಕುತೂಹಲವಿದ್ದರೆ, ಚಾಲಕನಿಗಿದ್ದ ಗಡ್ಡದ ಬಗ್ಗೆ ಮತ್ತೊಬ್ಬನಿಗೆ ಆಸಕ್ತಿ ಮೂಡುತ್ತಿತ್ತು. ಪೊಲೀಸರು ಆ ಜಾಗಕ್ಕೆ ಬರುವುದು ತಡವಾಗುತ್ತಾ ಹೋದ ಹಾಗೆ ಕೂಡುಪ್ರೇಕ್ಷಕರಿಂದ ಕುತೂಹಲ, ಅಡ್ಡ ಮಾತು, ತೀರ್ಪು ತೀರ್ಮಾನಗಳು ಒಂದೇ ಸಮನೆ ಹುಟ್ಟುತ್ತಲೇ ಇದ್ದವು. ಒಂದೇ ಒಂದು ಸಣ್ಣ ಅಪಘಾತ ನಡೆದು ನೂರಾರು ವಾದಗಳು, ವಾದಿಗಳು, ತರ್ಕ-ಕುತರ್ಕ, ವಿತಂಡವಾದಗಳು ಅಲ್ಲಿ ಸೃಷ್ಟಿಗೊಂಡದ್ದನ್ನು ಗಮನಿಸುವ ಮೂಕ ಸ್ಥಿತಿ ಮಾತ್ರ ನನ್ನದಾಯಿತು.

ಈಗ ನಿಮ್ಮ ಮನಸ್ಸಿನ ಕ್ಯಾಮರಾ ಹಾಗೆಯೇ ಅಮೆರಿಕದ ಕಡೆಗೆ ಒಮ್ಮೆ ತಿರುಗಲಿ. ಆ ದೇಶದಲ್ಲಿ ಇಂಥದ್ದೇ ಒಂದು ಅಪಘಾತವಾದಾಗ ಏನಾಯಿತು ಅನ್ನುವುದನ್ನು ಇತ್ತೀಚೆಗೆ ಗೆಳೆಯನೊಬ್ಬ ವಿವರಿಸಿದ್ದ. ನಿಂತಲ್ಲಿಂದ ತೆಗೆಯುವಾಗ ಕಾರೊಂದು ಇನ್ನೊಂದು ಕಾರಿಗೆ ತಾಗಿ ಪೆನ್ಸಿಲಿನ ಮೊನೆಯಷ್ಟೇ ಅಗಲ ಗೀಚೊಂದು ಸೃಷ್ಟಿಯಾಗಿತ್ತಂತೆ. ತಕ್ಷಣ ಎರಡೂ ಕಾರಿನ ಚಾಲಕರು ಎದ್ದೋಬಿದ್ದೋ ಎನ್ನುವ ರೀತಿಯಲ್ಲಿ ಕಾರಿನಿಂದ ಹೊರಗಡೆ ನೆಗೆದು ‘‘ಸಾರಿ, ನನ್ನಿಂದಲೇ ತಪ್ಪಾಯಿತು’’ ಎಂದು ಪರಸ್ಪರ ಕ್ಷಮಿಸುವುದಕ್ಕೆ ಮುಗಿದಿದ್ದ ದೃಶ್ಯವೊಂದನ್ನು ಭಾರತದ ಇಂತಹದ್ದೇ ಸಂದರ್ಭ ಒಂದಕ್ಕೆ ಆ ಗೆಳೆಯ ತಾಳೆ ಹಾಕುತ್ತಿದ್ದ.

‘‘ನನ್ನದೇ ತಪ್ಪಾಗಿರಬಹುದು, ನಿಮ್ಮದಲ್ಲ’’ ಎಂದು ಪರಸ್ಪರ ಒಳಗೊಳ್ಳುವ ಒಮ್ಮತದಿಂದ ಆ ಸಮಸ್ಯೆಯನ್ನು ಪರಿಹರಿಸಿಕೊಂಡ ಪರಿ, ಆ ದೇಶದ ಕಟ್ಟುನಿಟ್ಟಿನ ಸಾರಿಗೆ ನಿಯಮಗಳಿಗಿಂತಲೂ ಹೆಚ್ಚು, ಮನುಷ್ಯನಲ್ಲಿ ಸಹಜವಾಗಿ ಬೆರೆತು ಬಂದ ಸಾರ್ವಜನಿಕ ಸಮನ್ವಯ ಜೀವನ ವಿನ್ಯಾಸವನ್ನು ತೋರಿಸುತ್ತಿತ್ತು. ಅಲ್ಲಿಯ ಸಾರ್ವಜನಿಕ ಮನಸ್ಥಿತಿ ಆ ದೇಶದ ಕಾನೂನನ್ನು ಗೌರವಿಸುವ ಪಾಠವನ್ನು ಜಾಹೀರು ಮಾಡುತ್ತಿತ್ತು.

ಇಂಥ ಮನಸ್ಥಿತಿ ನಮ್ಮ ದೇಶದ ಮಾಲಕ-ಚಾಲಕರಲ್ಲೂ ಇರಬಹುದೋ ಏನೋ? ಆದರೆ ಎಷ್ಟೋ ಬಾರಿ ಆ ಕ್ಷಣಕ್ಕೆ ಅಲ್ಲಿ ಹಾಜರಾಗುವ, ಆ ಸಂದರ್ಭದ ಸ್ಪಷ್ಟ ಅರಿವಿಲ್ಲದ ಗುಂಪು ಮನಸ್ಥಿತಿ ಸಮಸ್ಯೆಯನ್ನು ಬಿಗಡಾಯಿಸುತ್ತದೆ. ಇದು ಕೇವಲ ಒಂದು ಆಕ್ಸಿಡೆಂಟ್‌ನ ಕಥೆಯಲ್ಲ. ಎಷ್ಟೋ ಬಾರಿ ಇದು ನಮ್ಮ ದೇಶದ ಬರೀ ರಸ್ತೆಯೊಂದರ ಸಮಸ್ಯೆಯಲ್ಲ. ಈ ದೇಶದ ಸಾವಿರಾರು ಬೀದಿ, ಮನೆ, ಅಂಗಳದ ಸಮಸ್ಯೆಯೂ ಹೀಗೆಯೇ ಆಗಿಬಿಡುತ್ತದೆ.

ಹಳ್ಳಿ-ನಗರ ಯಾವ ಕಡೆ ನೋಡಿದರೂ ನಮ್ಮ ದೇಶದ ರಸ್ತೆಗಳು ಕೆಲವೊಮ್ಮೆ ಕೇವಲ ದಾರಿಯಲ್ಲ; ಮಾನವನ ಒಳಲೋಕದ ಮಾನಸಿಕ ನಕ್ಷೆ ತೆರೆದಿಡುವ ಬೃಹತ್ ಪರದೆಗಳು. ಆ ಪರದೆ ಮೇಲೆ ದಿನವೂ ಎದ್ದು ಕಾಣಿಸುವ ದೃಶ್ಯ ಒಂದೇ. ಎರಡು ವಾಹನಗಳ ಮುಖಾಮುಖಿ ಗುದ್ದಾಟ ಮತ್ತು ಅದನ್ನು ನೋಡಿದ ಕೂಡಲೇ ಉಚ್ಛ್ವಾಸ-ನಿಶ್ಶ್ವಾಸ ಬದಲಾಯಿಸುವ ಜನರ ತಕ್ಷಣದ ನ್ಯಾಯಸಭೆ.

ಯಾವುದೇ ರಸ್ತೆಯಲ್ಲಿ ವಾಹನಗಳ ಮುಖಾಮುಖಿ ಢಿಕ್ಕಿ, ಸಾವು ನೋವುಗಳು ಆಗುವುದು ಹೊಸ ವಿಷಯವೇನೂ ಅಲ್ಲ. ಆದರೆ ಆ ಢಿಕ್ಕಿ ಆದ ಮೇಲೆ ನಡೆಯುವುದು ಇದೆಯಲ್ಲ, ಅದೇ ನಮ್ಮ ಸಮಾಜದ ಮನಸ್ಸಿನ ಅಳತೆ. ಬೈಕ್-ಸ್ಕೂಟರ್ ಪರಸ್ಪರ ಬಡಿದರೂ, ದೊಡ್ಡ ಬಸ್ ಸಣ್ಣ ಕಾರಿಗೆ ತಗುಲಿದರೂ, ಢಿಕ್ಕಿಯ ಗಂಭೀರತೆಗೂ ಅಲ್ಲಿ ನಂತರ ಸೇರುವ ಜನರ ಗಂಭೀರತೆಗೂ ಸಂಬಂಧವೇನೂ ಇರುವುದಿಲ್ಲ.

ಜನರು ಸೇರುವ ವೇಗ ನೋಡಿದರೆ ಅಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸಕ್ಕಿಂತ ಬಹುಜನರ ಕುತೂಹಲ ಬೇರೆಯೇ, ಅದು ಬಹು ದೊಡ್ಡದು ಎಂಬುವುದು ಗೊತ್ತಾಗುತ್ತದೆ. ಅಲ್ಲಿ ನೋಡಿದವರೂ ಇಲ್ಲ, ಕೇಳಿದವರೂ ಕೂಡ ಇಲ್ಲ; ಆದರೆ ಬಹುಮಂದಿಯ ನಿಲುವು ಮಾತ್ರ ಸ್ಪಷ್ಟ.

ರಸ್ತೆ ಮೇಲೆ ಬಿದ್ದಿರುವ ವಾಹನಗಳನ್ನು ಬದಿಗೆ ಸರಿಸಿ ದಾರಿ ಮಾಡಿ ಕೊಡುವುದಕ್ಕಿಂತ ಮುಂಚೆ, ಅವರಿಗೆಲ್ಲ ಬಾಯಿ ಬಿಚ್ಚುವ ಉತ್ಸಾಹವೇ ಮೊದಲು ಬರುತ್ತದೆ. ಅದರಲ್ಲೂ ಹಳ್ಳಿಯಲ್ಲಿದ್ದರೆ ಬೇರೆಯೇ ಸ್ವಾದ. ಮೊದಲಿಗೆ ಓಡೋದು ಚಾಲಕನತ್ತ ಅಲ್ಲ, ಗದ್ದಲದತ್ತ. ‘‘ಇವನದ್ದೇ ತಪ್ಪಪ್ಪ’’ ಎಂದು ಹೇಳುವನೊಬ್ಬ, ‘‘ಅಯ್ಯೋ, ನಿನ್ನೆ ಇದೇ ವೇಗದಲ್ಲಿ ಇಲ್ಲೇ ಹೋಗ್ತಿದ್ರು’’ ಎಂದು ಸೇರಿಸುವವ ಮತ್ತೊಬ್ಬ. ಸತ್ಯಕ್ಕಿಂತ ಇಲ್ಲಿ ಗುಂಪು ತೀರ್ಮಾನವೇ ಜಾಸ್ತಿ ಬಲವಾಗಿರುತ್ತದೆ.ಅಪರೂಪಕ್ಕೆ ಗಾಯಗೊಂಡವರನ್ನು ಚಿಕಿತ್ಸೆಗೆ ಎತ್ತಿ ಸಾಗಿಸುವ ಪರೋಪಕಾರಿಗಳೂ ಅಲ್ಲಿ ಇದ್ದೇ ಇರುತ್ತಾರೆ.

ನಗರದ ಚಿತ್ರ ಬೇರೇನೂ ಅಲ್ಲ, ಬದಲಾವಣೆ ಅಂದರೆ, ಅಲ್ಲಿ ಬರುವವರು ಪ್ರಜ್ಞಾವಂತರು; ಮಾತು ಮಾತ್ರ ದೊಡ್ಡದು, ಅರ್ಥ ಸಣ್ಣದು. ‘‘ಸಿಗ್ನಲ್ ಕಟ್ ಮಾಡಿದ್ರಪ್ಪ’’ ಅಂತ ಹೇಳುವವನು ದಿಕ್ಕೇ ನೋಡಿರೋದಿಲ್ಲ. ಅಮೆರಿಕವೂ ಸೇರಿ ಮುಂದುವರಿದ ದೇಶಗಳಲ್ಲಿ ಹೀಗಿಲ್ಲ. ಅಲ್ಲಿ ಅಪಘಾತ ನೋಡಿದರೆ ಜನ ನಿಂತುಕೊಳ್ಳುವುದಿಲ್ಲ. ರಸ್ತೆ ಸುರಕ್ಷಿತ ವಿಭಾಗಕ್ಕೆ ಕರೆ ಮಾಡಿ ದೂರ ಸರಿಯುತ್ತಾರೆ. ಕಾನೂನು ವರ್ಷನ್ ಕೊಡುವುದು ಅಲ್ಲಿ ಅಪರಾಧಕ್ಕೇ ಹತ್ತಿರ. ನಮ್ಮಲ್ಲಿ ಗದ್ದಲವೇ ಸತ್ಯ, ಅಲ್ಲಿ ಮೌನವೇ ಸಾಕ್ಷಿ. ನಮ್ಮಲ್ಲಿ ಆಕ್ಸಿಡೆಂಟ್‌ಗಿಂತ ನಂತರದ ಜಾತ್ರೆಯೇ ದೊಡ್ಡದು. ಪ್ರಶ್ನೆಗಳ ಗದ್ದಲ, ಅಭಿಪ್ರಾಯಗಳ ಒತ್ತಡ. ಪ್ರತಿಯೊಬ್ಬರೂ ತಮ್ಮ ವರ್ಷನ್ ಹೇಳಿಕೊಂಡು ಹೋದರೆ ಯಾವ ಅಧಿಕಾರಿ ತಾನೇ ಸತ್ಯ ಹೊರತೆಗೆಯುತ್ತಾನೆ?

ಬಹುಪಾಲು ಇಂತಹ ಸಂದರ್ಭಗಳಲ್ಲಿ ಪ್ರಾಮಾಣಿಕವಾಗಿ ಒಂದು ತಪ್ಪನ್ನು ಒಪ್ಪಿಕೊಳ್ಳುವುದು ಆತ್ಮಗೌರವಕ್ಕೇ ಧಕ್ಕೆ ಎನ್ನುವ ಭಾವನೆಯೇ ಜನರಲ್ಲಿ ಹೆಚ್ಚಾಗಿರುತ್ತದೆ. ಚಿಕ್ಕ ತಪ್ಪಾದರೂ ಅದು ಒಪ್ಪಿಕೊಂಡರೆ ತಕ್ಷಣ ಮನಸ್ಸಿನ ಒಳಗೆ ‘ತಾನು ಸೋತವ’ ಎಂಬ ಕಲ್ಪನೆ ಮೂಡುತ್ತದೆ. ಶಿಸ್ತಾದ ಸಮಾಜದಲ್ಲಿ ಸೋಲು ಎಂಬುದು ಜವಾಬ್ದಾರಿಯ ಒಂದು ಭಾಗವಾಗಬೇಕು. ‘‘ಸೋತರೆ ನಿನ್ನ ಗೌರವ ಹೋಯಿತು’’ ಎಂಬ ಸಮಾಜದ ನೋಟ ಬದಲಾಗಬೇಕು.

ಮಧ್ಯಪ್ರವೇಶಕ್ಕೆ ಪರ ತುಡಿತ, ಅತಿಕಾಳಜಿ ಈ ದೇಶದ ಮಿತಿಯೂ ಹೌದು, ಅತಿಯೂ ಹೌದು. ವಿವಾಹವಾಗಲಿ, ಜಗಳವಾಗಲಿ, ಅಪಘಾತವಾಗಲಿ-ಮೂರು ನಿಮಿಷದೊಳಗೆ ಸಂದಾನ ಮಂಡಳಿ ತಾನಾಗಿಯೇ ನಿರ್ಮಾಣವಾಗುತ್ತದೆ. ಮೂರೂ ಜನರ ರಸ್ತೆಯ ಸಮಸ್ಯೆ, ಕೆಲವೊಮ್ಮೆ ಮೂವತ್ತು ಮಂದಿಯ ಪರಿಷತ್ ಆಗಿಬಿಡುತ್ತದೆ. ಮಧ್ಯೆ ನಿಲ್ಲುವವರು ಪರಿಹರಿಸುವ ಬದಲು ಮನಸ್ಸಿನ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಾರೆ.

ಯಾರ ತಪ್ಪೆಂದು ಹೇಳಬೇಕಾದಷ್ಟು ಸ್ಪಷ್ಟವಾದ ವ್ಯವಸ್ಥೆಗಳು ನಮ್ಮಲ್ಲಿದ್ದರೂ, ಜನರಿಗೆ ಕಾನೂನಿಗಿಂತ ತಮ್ಮ ಭಾವನೆ, ಬುದ್ಧಿ, ಸಮ್ಮತಿ ಇವೇ ಹೆಚ್ಚು ಸತ್ಯವಾದಂತೆ ಕಾಣಿಸಲಾರಂಭಿಸುತ್ತದೆ. ಇದನ್ನು ಬದಲಿಸುವುದು ರಸ್ತೆಗಿಂತ ದೊಡ್ಡ ಕೆಲಸ. ಈ ಮೊಂಡು ವಾದ ಹಠಮಾರಿತನ ತಾನೇ ಗೆಲ್ಲಬೇಕೆನ್ನುವ ಪ್ರವೃತ್ತಿ ಇದನ್ನೆಲ್ಲ ನೋಡುವಾಗ ಅನೇಕ ಬಾರಿ ಬದುಕಿನ ಬೇರೆ ಕ್ಷೇತ್ರಗಳೂ ನೆನಪಿಗೆ ಬರುತ್ತವೆ. ನಮ್ಮ ಸುತ್ತಲಿನ ಪ್ರತಿಯೊಂದು ತಕರಾರಿಗೂ ಇದೇ ತರ್ಕಗಳು ಕಾರಣವಾಗುತ್ತವೆ. ‘‘ನಾನು ಸರಿ, ನೀನು ತಪ್ಪು!’’ ಎಂಬ ಜಗಳದ ಬೀಜ ಸೃಷ್ಟಿಯಾಗುವುದು. ಮನೆತನದಲ್ಲಿ ಸಹೋದರರು, ವ್ಯವಹಾರದಲ್ಲಿ ಪಾಲುದಾರರು, ರಾಜಕೀಯದಲ್ಲಿ ಪಕ್ಷ ವಿರೋಧಿಗಳು, ಜೊತೆಗೆ ಹಳ್ಳಿಯ ಹಿಡುವಳಿಯ ಪಾಲು ಸಮಸ್ಯೆಗಳು.. ಹೀಗೆ ಎಲ್ಲೆಡೆ ಒಪ್ಪಿಕೊಳ್ಳದ ಮನಸ್ಥಿತಿ ಎಂಬ ಒಂದೇ ಮೂಲ ಸಮಸ್ಯೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

ದಿನೇ ದಿನೇ ರಾಜಿ ಎಂಬ ಮಾತು ನಮ್ಮ ಮನಸ್ಸಿನಲ್ಲಿ ಬಲಹೀನತೆ ಎಂಬ ಅರ್ಥಕ್ಕೆ ಬದಲಾಗುತ್ತಿದೆ. ಆದರೆ ವ್ಯಾವಹಾರಿಕ ಜ್ಞಾನದಲ್ಲಿ, ಸಮಾಜದ ನಡೆಯಲ್ಲಿ, ನವೀನ ದೇಶಗಳ ಜೀವನಶೈಲಿಯಲ್ಲಿ ಇಂಥ ಸಮನ್ವಯ ರಾಜಿಯೇ ಪ್ರಗತಿಯ ಮೊದಲ ಹೆಜ್ಜೆಯಾಗುತ್ತದೆ.

ನಾನು ಕಂಡ ಆ ಹೆದ್ದಾರಿಯ ಅಪಘಾತ- ಸಂಘರ್ಷದಿಂದ ಹೊರಬರುವುದಕ್ಕೇ ಒಂದು ಗಂಟೆಗೆ ಹೆಚ್ಚು ಸಮಯ ಬೇಡಿತು. ಇಬ್ಬರಲ್ಲಿ ಒಬ್ಬರು ನಗು ಮುಖದಿಂದ ‘‘ಏನ್ರಿ, ಸಣ್ಣ ಗಿಚ್ಚು ಆಯ್ತು ಹೋಗ್ಲಿ’’ ಎಂದಿದ್ದರೆ, ಅಲ್ಲಿದ್ದ ಎಲ್ಲರಿಗೂ ಅದರಿಂದ ಒಂದು ಪಾಠವಾಗುತ್ತಿತ್ತು. ಸಂದೇಶ ಬಿತ್ತರವಾಗುತ್ತಿತ್ತು. ಆದರೆ ನಾವು ಬೋಧಿಸುವುದೇ ಬೇರೆ. (ಅಪಘಾತಕ್ಕೆ ಕಾರಣವಾಗುವ ಕಾರಣಗಳನ್ನಿಲ್ಲಿ ಬರೆದಿಲ್ಲ, ಅದು ಬೇರೆಯೇ ಕಥೆ ). ಇಷ್ಟಾದ ಮೇಲೆ ನಾನು ಕೇಳಬೇಕಾದ ಕೊನೆಯ ಪ್ರಶ್ನೆ, ನಮ್ಮ ರಸ್ತೆಗಳು ಅಗಲವಾಗಬೇಕು ಎಂದು ನಾವು ನೆನೆಸಿಕೊಳ್ಳುತ್ತೇವೆ. ಹೋರಾಟ ಮಾಡುತ್ತೇವೆ. ಆದರೆ ಎಷ್ಟೋ ಬಾರಿ ರಸ್ತೆಗಳಿಗಿಂತ ಮೊದಲು ಅಗಲವಾಗಬೇಕಾದದ್ದು ಅಲ್ಲಿ ಓಡಾಡುವ ಜನರ ಮನಸ್ಸು!

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News