ಜನತಾ ನ್ಯಾಯಾಲಯ-ಒಳಗುಟ್ಟಿನ ಮೌನ!
ಆಶೆ ಸತ್ತಿಲ್ಲ. ಏಕೆಂದರೆ ಈ ಮೌನದ ಪೀಳಿಗೆಯೊಳಗೇ ಒಂದು ನಿಸ್ಸತ್ವದ ಕಳಕಳಿ ಇದೆ. ಯುವಕರ ಕಣ್ಣಲ್ಲಿ ಇಂದಿಗೂ ಕೋಪವಿದೆ. ಅದು ಮಾತಾಗಬೇಕಷ್ಟೇ. ರೈತನ ಹೃದಯದಲ್ಲಿ ಇಂದಿಗೂ ನೋವಿದೆ. ಅದು ಧ್ವನಿಯಾಗಬೇಕಷ್ಟೇ. ಸಮಾಜದಲ್ಲಿ ಹಕ್ಕಿಗಾಗಿ ಹೋರಾಡುವವರನ್ನು ಹುಚ್ಚರು, ಬೇರೆ ಕೆಲಸ ಇಲ್ಲದವರು, ಪೇಪರ್ ಹುಲಿಗಳು, ಮೂರ್ಖರು ಎಂದೆಲ್ಲ ಕರೆಯುವ ಸಮಯ ಬದಲಾಗಬೇಕು. ಹಕ್ಕು ಕೇಳುವುದು ಅಪರಾಧವಲ್ಲ ಅದು ನಮ್ಮೆಲ್ಲರ ಬದುಕಿನ ಘೋಷಣೆ. ಆ ದಿನ ಈ ದೇಶದ ರೈತ, ಯುವಕ, ಕಾರ್ಮಿಕ, ಮಹಿಳೆ, ವಿದ್ಯಾರ್ಥಿ ಎಲ್ಲರೂ ಒಂದೇ ಸಾಲಿನಲ್ಲಿ ನಿಲ್ಲುತ್ತಾರೆ.
ಪ್ರಜಾಪ್ರಭುತ್ವದಲ್ಲಿ ಜನ ನ್ಯಾಯಾಲಯವು ಪ್ರಜೆಗಳೇ ಕಟ್ಟಿದ ಅಲಿಖಿತ ನ್ಯಾಯಾಲಯ. ಊರ ನಡುವಿನ ಅರಳಿಕಟ್ಟೆಯೋ, ದೇವಸ್ಥಾನದ ಜಗಲಿಯೋ, ಪಟೇಲ- ಗೌಡರ ಗುತ್ತುಮನೆಯ ಚಾವಡಿಯೋ ಎಷ್ಟೋ ಬಾರಿ ಇಲ್ಲೇ ಊರಿನ ವೈಯಕ್ತಿಕ ಮತ್ತು ಗುಂಪು ಸಂಘರ್ಷಗಳು ಸ್ಥಳೀಯವಾಗಿಯೇ ರಾಜಿಯಲ್ಲಿ ಮುಗಿಯುವುದನ್ನು ನಾವು ಕಂಡವರು. ಅಲ್ಲಿ ತೀರ್ಪು ಕೊಡುವವರು, ವಾದಿ- ಪ್ರತಿವಾದಿಗಳು, ಬೆಂಬಲಿಸುವವರು, ಶಿಕ್ಷೆ ಅನುಭವಿಸುವವರು ಎಲ್ಲರೂ ಒಂದೇ ಊರಿನವರು. ದಿನಾ ಮುಖ ಮುಖ ನೋಡುವವರು.
ಇವತ್ತಿಗೂ ಎಷ್ಟೋ ಹಳ್ಳಿ ಲಡಾಯಿಗಳು, ಕೌಟುಂಬಿಕ ಭೂ ವ್ಯಾಜ್ಯ ತಗಾದೆಗಳು ಈ ದೇಶದ ಕೋರ್ಟುಗಳ ಹತ್ತಿರ ಸುಳಿಯದೆ ಗ್ರಾಮದ ಹಂತದಲ್ಲೇ ತೀರ್ಮಾನವಾಗುತ್ತವೆ. ಕಾನೂನು ಓದದ, ಕೋರ್ಟು ಕಲಾಪಗಳ ಅರಿವಿಲ್ಲದ ಆದರೆ ಸರಿಪಡಿಸುವಿಕೆ ನ್ಯಾಯದ ಕೌಶಲವುಳ್ಳ ನಾಟಿ ನ್ಯಾಯಾಧಿಪತಿಗಳು ಭಾರತದ ಹಳ್ಳಿಗಳಲ್ಲಿ ಈಗಲೂ ಇದ್ದಾರೆ. ಒಂದೊಮ್ಮೆ ಇಂಥ ಜನನ್ಯಾಯಾಲಯಗಳಲ್ಲಿ ನ್ಯಾಯ ಸಿಗದಿದ್ದರೂ, ಜನರ ಮಧ್ಯೆ ಮಾತು ಹರಿದರೆ ತಪ್ಪು ಮಾಡಿದವನ ನಿದ್ದೆ ಕಳೆದುಹೋಗುತ್ತಿತ್ತು. ಸಮಾಜದ ಮುಂದೆ ತಲೆ ತಗ್ಗಿಸುವಂಥ ನೈತಿಕ ಒತ್ತಡ ಹುಟ್ಟುತ್ತದೆ. ಇದು ಕಾನೂನು ಪುಸ್ತಕದಲ್ಲಿಲ್ಲದ, ಆದರೆ ಮಾನವ ಸಂವೇದನೆಯ ಅತ್ಯುನ್ನತ ನ್ಯಾಯಾಲಯ.
ಆದರೆ ಜನತಾ ನ್ಯಾಯಾಲಯ ಯಾವತ್ತೂ ಜನ ನ್ಯಾಯಾಲಯಕ್ಕಿಂತ ದೊಡ್ಡದು. ಗುತ್ತು, ಗೌಡರ ಮನೆ, ಅರಳಿ ಕಟ್ಟೆಗಿಂತ ಮಿಗಿಲಾದುದು. ಅಲ್ಲಿ ಒಬ್ಬನಾದರೆ ಇಲ್ಲಿ ಸಾವಿರಾರು ಜನ ತೀರ್ಪುಗಾರರು. ಸಮೂಹ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ. ರಾಜಕಾರಣಿಯೊಬ್ಬ ಬಹಿರಂಗವಾಗಿ ನಾನು ಚುನಾವಣೆಗೆ ಹೋಗುತ್ತೇನೆ, ‘ಜನತಾ ನ್ಯಾಯಾಲಯ’ದ ತೀರ್ಪಿಗೆ ಶರಣಾಗುತ್ತೇನೆ ಎಂದಾಗ ಅಲ್ಲಿ ಬರುವ ನ್ಯಾಯಾಲಯ ದೊಡ್ಡ ತೀರ್ಪುಗಾರರ ಗುಂಪನ್ನು ಪ್ರತಿಬಿಂಬಿಸುತ್ತದೆ. ಸಾವಿರ, ಲಕ್ಷ, ಕೋಟಿ ಜನ ಅಲ್ಲಿ ಒಬ್ಬನ ಪರ ಮತ್ತು ವಿರುದ್ಧದ ತೀರ್ಪಿನಲ್ಲಿ ಭಾಗಿಯಾಗುತ್ತಾರೆ. ರಾಜಕೀಯೇತರ ನೆಲೆಯಲ್ಲೂ ಇಂತಹ ಜನತಾ ನ್ಯಾಯಾಲಯದಲ್ಲಿ ಅಭಿಪ್ರಾಯ ಮಂಡನೆಗೆ ಅವಕಾಶ ಇದೆ.
ಆದರೆ ಇಂದು, ಆ ಜನತಾ ನ್ಯಾಯಾಲಯ ನಿಧಾನವಾಗಿ ಶಿಥಿಲಗೊಳ್ಳುತ್ತಿದೆಯೇ?
ಜನರು ತಮ್ಮೊಳಗೆ ಒಮ್ಮತದಿಂದ ನಿಂತು, ಕೂಡುತೀರ್ಪು ಕೊಡುವ ಧೈರ್ಯವನ್ನು ಕಳೆದುಕೊಂಡಿದ್ದಾರೆಯೇ? ನಮ್ಮ ಕಣ್ಣೆದುರೇ ಏನಾದರೂ ನಡೆಯಲಿ, ನಾವಲ್ಲಿ ಭಾಗಿಗಳಾಗುವ, ಅದನ್ನು ಪ್ರಶ್ನಿಸುವ, ನಿಜವಾಗಿ ಏನು ನಡೆಯುತ್ತಿದೆ ಎಂದು ಅಲ್ಲೇ ನಿಂತು ಸಾಕ್ಷೀಕರಿಸುವ ಮನೋಭಾವನೆ ದೂರವಾಗುತ್ತಿದೆಯೇ? ‘‘ನಮಗೇನು, ನಮಗ್ಯಾಕೆ?’’ ಎನ್ನುವ ಸುರಕ್ಷಿತತನದ ಗೋಡೆಯೊಳಗೆ ಪ್ರತಿಯೊಬ್ಬರೂ ತಾವೇ ಸಿಲುಕಿಕೊಂಡಿದ್ದಾರೆ. ಅನ್ಯಾಯದ ವಿರುದ್ಧ ಮಾತನಾಡುವುದಕ್ಕೂ ಈಗ ರಿಸ್ಕ್ ಎಂಬ ಲೆಕ್ಕಾಚಾರ ಬೆಳೆದಿದೆ. ಯಾರಿಗಾದರೂ ಬೆಂಬಲ ನೀಡುವುದೇ ಮುಂದೆ ಕೋರ್ಟು-ಪೊಲೀಸ್‌ಗಳ ಸುತ್ತಾಟಕ್ಕೆ ಕಾರಣವಾಗಬಹುದು ಎಂಬ ಭಯ ವಿದ್ಯಾವಂತ ಜನರಲ್ಲೇ ಬೇರೂರಿದೆ.
ನ್ಯಾಯವನ್ನು ಹುಡುಕುವ ಬಡವನ ಕಣ್ಣಲ್ಲಿ ಈಗ ವಿಶ್ವಾಸಕ್ಕಿಂತ ಭಯ ಹೆಚ್ಚಾಗಿದೆ. ಏಕೆಂದರೆ ಅವನ ನ್ಯಾಯದ ಧ್ವನಿಯನ್ನು ಕೇಳುವವರು ಕಡಿಮೆ ಮತ್ತು ಕೇಳಿದರೂ ಅವನ ಪರವಾಗಿ ನಿಲ್ಲುವ ಸಮೂಹ ಇನ್ನೂ ಕಡಿಮೆ.
ಹಿಂದೊಮ್ಮೆ ಜನ ಅನ್ಯಾಯ ನೋಡಿದರೆ ಇಡೀ ಊರಿಗೆ ಊರೇ ಕೂಡಿಬಂದು ಮಾತಾಡುತ್ತಿದ್ದರು. ಆದರೆ ಇಂದಿನ ಜನ ಅದು ‘ನಮಗೆ ಸಂಬಂಧಿಸಿದ್ದಲ್ಲ’ ಎನ್ನುವ ಭಯದ ಗೋಡೆಯ ಹಿಂದೆ ತಲೆಮರೆಸಿಕೊಳ್ಳುತ್ತಿದ್ದಾರೆ. ಮೌನ ತಮ್ಮನ್ನು ಹೆಚ್ಚು ಸುರಕ್ಷಿತವಾಗಿ ಇಡುತ್ತದೆ ಎಂಬ ನಂಬಿಕೆ ಬಲವಾಗುತ್ತಿದೆ. ಬರಹಗಾರರು, ಶಿಕ್ಷಕರು, ಅಕ್ಷರವಂತರೇ ನ್ಯಾಯದ ಪರವಾಗಿ ನಿಲ್ಲದೆ ಸುರಕ್ಷಿತ ಗೋಡೆಗಳನ್ನು ಕಟ್ಟಿಕೊಂಡಿದ್ದಾರೆ. ಅನ್ಯಾಯದ ವಿರುದ್ಧ ಮಾತಾಡಿದರೆ ಸಾಮಾಜಿಕ ಮಾಧ್ಯಮದ ದಾಳಿ, ಕಾನೂನಿನ ಕಾಗದದ ಸುತ್ತಾಟ, ರಾಜಕೀಯದ ಬಾಯಲ್ಲಿ ಸಿಲುಕುವ ಸಾಧ್ಯತೆ- ಈ ಎಲ್ಲವೂ ಜನರನ್ನು ಮೌನಗೊಳಿಸಿವೆ. ‘ನ್ಯಾಯ’ ಎಂಬ ಪದಕ್ಕಿಂತ ‘ಸುರಕ್ಷಿತ’ ಎಂಬ ಪದದ ಬೆಲೆ ಈಗ ಹೆಚ್ಚಾಗಿದೆ.
ಕೆಲವು ಅಪವಾದಗಳಿದ್ದರೂ ಬಹಳಷ್ಟು ಪತ್ರಕರ್ತರು ಪ್ರಭಾವಿಗಳ ಧ್ವನಿಯಾಗಿದ್ದಾರೆ. ಅವರಲ್ಲಿ ಅನ್ಯಾಯವನ್ನು ಬಹಿರಂಗಗೊಳಿಸುವ ಶಕ್ತಿಗಿಂತ ಅದನ್ನು ಮರೆಮಾಡುವ ಕೌಶಲ ಬೆಳೆದಿದೆ. ಹೀಗಾಗಿ ಜನರ ನ್ಯಾಯಾಲಯಕ್ಕೆ ಸಾಕ್ಷಿಯಾಗಬೇಕಾದ ಮಾಧ್ಯಮಗಳೇ ಅದಕ್ಕೆ ಗೋಡೆ ಕಟ್ಟಿವೆ. ಜನರು ಮಾಧ್ಯಮದ ನಂಬಿಕೆಯಿಂದ ನ್ಯಾಯ ಹುಡುಕುತ್ತಿದ್ದರೆ, ಇಂದು ಅದೇ ಮಾಧ್ಯಮ ಜನರ ನ್ಯಾಯವನ್ನು ‘ಟಿಆರ್‌ಪಿ ನ್ಯಾಯ’ ಮಾಡಿಕೊಂಡಿದೆ.
ಎದುರಾಳಿ ಬಲಿಷ್ಠನಾದರೆ, ಹಣ, ಹುದ್ದೆ, ಜಾತಿ ಸಮಾಜ ಸಮುದಾಯದ ಪ್ರಭಾವದಿಂದ ಸುತ್ತುವರಿದಿದ್ದರೆ, ಜನತಾ ನ್ಯಾಯಾಲಯದ ಶಕ್ತಿ ಸಹಜವಾಗಿಯೇ ಕುಸಿಯುತ್ತದೆ. ಎಲ್ಲಿ ನಾವು ಧ್ವನಿಯೆತ್ತಿದರೆ, ಬಾಯಿ ಬಿಟ್ಟರೆ ಅವರ ಜೊತೆ ಎದು ರಾಗುತ್ತೇವೆ? ಎನ್ನುವ ಭಯ. ಸಮುದಾಯದ ಒಟ್ಟು ಶಕ್ತಿ ಭ್ರಷ್ಟರ ಮೇಲೆ ಮುಗಿ ಬೀಳುವುದಕ್ಕೆ, ಸಾಂಘಿಕ ನಿರ್ದೇಶನಕ್ಕೆ ಸೂಕ್ತ ನಾಯಕತ್ವ ಬೇಕು. ಬಿಡಿ ಬಿಡಿಯಾಗಿ ಧೈರ್ಯ ತುಂಬುವವರು ಬೇಕು; ಆದರೆ ಆ ಧೈರ್ಯ ಈಗ ಖಾಸಗಿ ಆಸ್ತಿ ಆಗಿದೆ.
ಹೀಗಾಗಿಯೇ ಇಂದಿನ ಜನತಾ ನ್ಯಾಯಾಲಯದ ತೀರ್ಪುಗಳು ಗಾಳಿಯ ಮಾತುಗಳಂತಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳು ಬರುತ್ತವೆ, ಟ್ವೀಟ್‌ಗಳು ಹರಿಯುತ್ತವೆ, ಮೆಮ್‌ಗಳು ಹರಡುತ್ತವೆ - ಆದರೆ ಯಾರೂ ನೈಜವಾಗಿ ನಿಂತು ಮಾತಾಡುವುದಿಲ್ಲ. ನ್ಯಾಯದ ಭಾವನೆ ನಗ್ನ ವ್ಯಂಗ್ಯವಾಗಿ ಪರಿವರ್ತಿತವಾಗಿದೆ.
ಇಷ್ಟಾದರೂ ಜನತಾ ನ್ಯಾಯಾಲಯದ ಮೂಲ ತತ್ವ- ಶಕ್ತಿ ಬದಲಾಗದು. ಅದು ಮೇಲ್ನೋಟಕ್ಕೆ ಶಕ್ತಿ ಕಳೆದುಕೊಂಡಿರಬಹುದಷ್ಟೆ. ಜನರು ಒಟ್ಟಾಗಿ ನಿಂತಾಗ, ಅವರ ಮಾತು ಕಾನೂನಿಗಿಂತ ದೊಡ್ಡ ತೀರ್ಪಾಗುತ್ತದೆ ಎನ್ನುವುದಕ್ಕೆ ಕೆಲವು ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ನಡೆದ ರೈತದಂಗೆ, ಇದೀಗ ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ನಡೆಸುವ ಹೋರಾಟವೇ ಸಾಕ್ಷಿ. ನಮ್ಮ ಸಮಾಜದ ನೈತಿಕ ಅಸ್ತಿತ್ವವೇ ಜನತಾ ನ್ಯಾಯಾಲಯದ ಅಸ್ತಿತ್ವ. ಒಮ್ಮೆ ಆ ನೈತಿಕತೆಯ ಜ್ವಾಲೆ ಜನರ ಮನಸ್ಸಿನಲ್ಲಿ ಎದ್ದರೆ, ಅದು ಸರಕಾರದ ಕಾನೂನಿಗಿಂತ ಹೆಚ್ಚಾಗಿ ಮನುಷ್ಯತ್ವದ ಕಾನೂನನ್ನು ಹುಟ್ಟಿಸುತ್ತದೆ.
ಪ್ರಜಾಪ್ರಭುತ್ವದಲ್ಲಿ ಜನರೇ ಭಾಗಶಃ ಅಂತಿಮ ನ್ಯಾಯಾಧೀಶರು. ಚುನಾವಣೆಗಳು ಅದರ ಒಂದು ಮುಖ, ಆದರೆ ನ್ಯಾಯದ ಅರ್ಥದಲ್ಲಿ ಅದು ಒಂದು ನಿತ್ಯ ಪ್ರಕ್ರಿಯೆ. ಮಗುವೊಂದು ಶಾಲೆಯಲ್ಲಿ ಶಿಕ್ಷೆಗೆ ಒಳಗಾದಾಗ, ಒಬ್ಬ ಮಹಿಳೆ ಕಚೇರಿಯೊಳಗಡೆ ಅತ್ಯಾಚಾರಕ್ಕೆ ಒಳಪಟ್ಟಾಗ, ರೈತ ಬ್ಯಾಂಕಿನ ಮುಂದೆ ಅವಮಾನಕ್ಕೆ ಒಳಗಾದಾಗ ಅವರ ಪರ ನಿಲ್ಲುವ ಸಮುದಾಯವೇ ನಿಜವಾದ ಜನತಾ ನ್ಯಾಯಾಲಯ. ಅದು ಕೇವಲ ಮಾತಿನಲ್ಲಿ ಅಲ್ಲ, ನಡೆಗಳಲ್ಲಿ ನ್ಯಾಯದ ತೀರ್ಪು ನೀಡುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ನಾವು ಕಳೆದುಕೊಳ್ಳುತ್ತಿರುವುದು ನ್ಯಾಯದ ಸಂಸ್ಥೆಗಳನ್ನಲ್ಲ, ನ್ಯಾಯದ ಧೈರ್ಯವನ್ನು. ಸಮಾಜದ ಬಲ ಜನರ ಧ್ವನಿಯಲ್ಲಿದೆ. ಆ ಧ್ವನಿಯೇ ಮೌನಗೊಂಡರೆ ಪ್ರಜಾಪ್ರಭುತ್ವ ಬಣಗುಟ್ಟುತ್ತದೆ. ಹೈಕೋರ್ಟ್ ಸುಪ್ರೀಂ ಕೋರ್ಟ್‌ನಂತಹ ಕಾನೂನು ಕಟ್ಟಡಗಳು ಉಳಿಯಬಹುದು, ಆದರೆ ಮಾನವೀಯತೆ ಸಡಿಲವಾದರೆ ನ್ಯಾಯದ ಮಾನಸಿಕ ಕಟ್ಟಡ ಕುಸಿಯಬಹುದು. ಸಾಮಾಜಿಕ ಸ್ವಾಸ್ಥ್ಯ ಕೆಡಬಹುದು.
ಹೀಗಾಗಿ, ಪ್ರಶ್ನೆ ಇರುವುದು ಸರಕಾರದ್ದಲ್ಲ, ನ್ಯಾಯಾಧೀಶರದ್ದಲ್ಲ, ನಮ್ಮದ್ದೇ: ನಾವು ಮತ್ತೆ ಜನತಾ ನ್ಯಾಯಾಲಯದ ಸದಸ್ಯರಾಗುವೆವೆ? ಅದನ್ನು ಜೀವಂತವಾಗಿ ಇಡುತ್ತೇವೆಯೇ
ಅಥವಾ ಸುರಕ್ಷಿತ ಮೌನದ ಕುರ್ಚಿಯಲ್ಲಿ ಕುಳಿತು, ಮತ್ತೊಬ್ಬನ ಅನ್ಯಾಯದ ಮರಣವನ್ನು ನೋಡುತ್ತಾ ತಲೆ ತಿರುಗಿಸುತ್ತೇವೆಯೇ?
ಇಂದಿನ ಯುವಕರ ಕಣ್ಣುಗಳಲ್ಲೂ ಬೆಂಕಿ ಇದೆ, ಆದರೆ ಆ ಬೆಂಕಿ ಬರೀ ಮೊಬೈಲ್ ಸ್ಕ್ರೀನ್‌ನ ಬೆಳಕಾಗಬಾರದು. ಹೃದಯದಲ್ಲಿ ಕಳವಳ ಇದೆ, ಆದರೆ ಅದು ಕೇವಲ ಸ್ಟೇಟಸ್ ಅಪ್‌ಡೇಟ್‌ನಲ್ಲಿ ಮಾತ್ರ ಕಾಣಿಸಬಾರದು. ಅನ್ಯಾಯ ಕಣ್ಣಿಗೆ ಬೀಳುತ್ತದೆ, ಆದರೆ ಕಾಲು ಮುಂದೆ ಸಾಗುವುದಿಲ್ಲ. ಬೇರೆಯವರ ಪರ ಹೋರಾಟ ದೂರದ ಮಾತೇ ಆಗಿದೆ, ತಮಗೇ ಅನ್ಯಾಯವಾದರೂ ಸಾಕ್ಷಿ ಕೊಡಲು ಯಾರೂ ಮುಂದಾಗುವುದಿಲ್ಲ. ಈ ಮೌನದ ಸಮಾಜದ ಹಿಂದೆ ಇರುವ ಕಾರಣ ಕೇವಲ ಭಯವಲ್ಲ ಅದು ಒಂದು ರೀತಿಯ ಒಳಗುಟ್ಟಿದ ನಿರಾಶೆ.
ಹಿಂದೆ ಹಳ್ಳಿ ರಸ್ತೆಯ ಮಧ್ಯೆ ರೈತ ತನ್ನ ಧ್ವನಿಯನ್ನು ಎತ್ತಿದರೆ ಸಾಕು, ಊರಿಗೆ ಊರೇ ಅವನ ಪರ ನಿಲ್ಲುತ್ತಿತ್ತು. ಇವತ್ತು ಎಲ್ಲರ ಹಕ್ಕಿಗಾಗಿ ತಾನು ಬೀದಿಗೆ ಬಿದ್ದರೆ ತನ್ನ ಅನ್ನದ ಕೃಷಿ -ದಾರಿ ನಷ್ಟವಾಗಬಹುದು ಎಂಬ ಭಯ ಅವನೊಳಗೆ ಬೇರೂರಿದೆ. ಯಾರೋ ಕೊಡುವ ಬಾಡಿಗೆ ಹಸಿರು ಶಾಲನ್ನು ಹೆಗಲಿಗೆ ಹಾಕಲು ಅವನು ಇಷ್ಟಪಡುವುದಿಲ್ಲ. ಯಾಕೆಂದರೆ ಅವನು ತನ್ನ ಹಕ್ಕಿಗಾಗಿ ಮಾತಾಡುವಷ್ಟರಲ್ಲಿ, ಬ್ಯಾಂಕ್ ನೋಟಿಸ್ ಬಾಗಿಲು ತಟ್ಟುತ್ತದೆ. ಹೋರಾಟಕ್ಕಿಂತ ಬದುಕು ಉಳಿಸಿಕೊಳ್ಳುವುದು ದೊಡ್ಡ ಹೊಣೆ ಎಂಬ ಭಾವನೆ ಅವನ ಬದುಕಿನ ನಿಯಮವಾಗಿದೆ.
ಯುವಕರ ವಿಚಾರದಲ್ಲೂ ಅದೇ ಕಥೆ. ಕಾಲೇಜಿನ ಬಾಗಿಲುಗಳು ಸ್ಪರ್ಧೆಯ ಅಂಗಳವಾಗಿದೆ. ಹಕ್ಕು, ನ್ಯಾಯ, ಅನ್ಯಾಯ - ಈ ಪದಗಳು ‘ಕರೆಂಟ್ ಅಫೇರ್ಸ್’ ಬರೀ ಪುಸ್ತಕದ ವಿಷಯ. ಆದರೆ ನೈಜ ಜೀವನದಲ್ಲಿ ಆ ಪದಗಳು ಅಸೌಕರ್ಯದ ಮಾತುಗಳೇ. ‘‘ನಾಳೆ ಉದ್ಯೋಗ ಸಿಗಬೇಕಲ್ಲ?’’ ಎಂಬ ಭಯ ಧೈರ್ಯಕ್ಕಿಂತ ದೊಡ್ಡ ಪಾಠವಾಗಿ ಬಿಟ್ಟಿದೆ. ಹೋರಾಡುವುದು ಸಿದ್ಧಾಂತದ ವಿಷಯವಲ್ಲ, ಸೆಲೆಬಲ್ ವಿಷಯವಾಗಬೇಕು ಎನ್ನುವ ಮೌಲ್ಯ ಬಂದಾಗ ಯುವ ಸಮುದಾಯ ಬದಲಾಗಬಹುದೋ ಏನೋ.
ನಾವೀಗ ನ್ಯಾಯವನ್ನು ಹುಡುಕುವುದಿಲ್ಲ, ಸುದ್ದಿಯನ್ನು ಹುಡುಕುತ್ತೇವೆ. ಯಾರು ಹೋರಾಡಿದರು, ಯಾರು ಯಾರನ್ನು ಹೊಡೆದರು, ಯಾರು ಅರೆಸ್ಟ್ ಆದರು - ಈ ಎಲ್ಲವೂ ಮನರಂಜನೆಯ ವಿಷಯಗಳಾಗಿವೆ. ಹೋರಾಟವೂ ಲೈವ್ ಸ್ಟ್ರೀಮ್ ಆಗಿದೆ. ಪರಿವರ್ತನೆಯ ಉದ್ದೇಶಕ್ಕಿಂತ ಚರ್ಚೆಯ ಶಬ್ದ ದೊಡ್ಡದಾಗಿದೆ. ‘‘ಈಗ ನಾವೂ ತೊಡಗಿದ್ದರೆ ನಾಳೆ ಯಾರು ಕಾಪಾಡುತ್ತಾರೆ?’’ ಎನ್ನುವ ಪ್ರಶ್ನೆ ತಲೆಮಾರುಗಳ ಧೈರ್ಯವನ್ನು ಬಲಿ ಮಾಡಿದೆ. ಹಕ್ಕಿಗಾಗಿ ಹೋರಾಟ ಈಗ ವೈಯಕ್ತಿಕ ನಷ್ಟದ ಲೆಕ್ಕಾಚಾರದಲ್ಲಿ ಕಳೆದುಹೋಗಿದೆ.
ಆದರೂ ಆಶೆ ಸತ್ತಿಲ್ಲ. ಏಕೆಂದರೆ ಈ ಮೌನದ ಪೀಳಿಗೆಯೊಳಗೇ ಒಂದು ನಿಸ್ಸತ್ವದ ಕಳಕಳಿ ಇದೆ. ಯುವಕರ ಕಣ್ಣಲ್ಲಿ ಇಂದಿಗೂ ಕೋಪವಿದೆ. ಅದು ಮಾತಾಗಬೇಕಷ್ಟೇ. ರೈತನ ಹೃದಯದಲ್ಲಿ ಇಂದಿಗೂ ನೋವಿದೆ. ಅದು ಧ್ವನಿಯಾಗಬೇಕಷ್ಟೇ. ಸಮಾಜದಲ್ಲಿ ಹಕ್ಕಿಗಾಗಿ ಹೋರಾಡುವವರನ್ನು ಹುಚ್ಚರು, ಬೇರೆ ಕೆಲಸ ಇಲ್ಲದವರು, ಪೇಪರ್ ಹುಲಿಗಳು, ಮೂರ್ಖರು ಎಂದೆಲ್ಲ ಕರೆಯುವ ಸಮಯ ಬದಲಾಗಬೇಕು. ಹಕ್ಕು ಕೇಳುವುದು ಅಪರಾಧವಲ್ಲ ಅದು ನಮ್ಮೆಲ್ಲರ ಬದುಕಿನ ಘೋಷಣೆ. ಆ ದಿನ ಈ ದೇಶದ ರೈತ, ಯುವಕ, ಕಾರ್ಮಿಕ, ಮಹಿಳೆ, ವಿದ್ಯಾರ್ಥಿ ಎಲ್ಲರೂ ಒಂದೇ ಸಾಲಿನಲ್ಲಿ ನಿಲ್ಲುತ್ತಾರೆ.