×
Ad

ನೆಲನಡಿಗೆಯ ಅಧ್ಯಾತ್ಮ ಮತ್ತು ನಡೆಯಲಾರದ ಮನುಷ್ಯ!

Update: 2025-10-26 10:35 IST

ಕಾಲುನಡಿಗೆಯೂ ಕಾಲನಡಿಗೆಯೂ ಹೌದು. ಈ ನಡಿಗೆಯಲ್ಲಿ ಸಂತರು ಬರೀ ಪುಸ್ತಕಗಳಿಂದ ದೇವರನ್ನು ಹುಡುಕಲಿಲ್ಲ; ಮಂದಿರ ಗುಡಿ ಗೋಪುರಗಳಲ್ಲಿ ದೇವರನ್ನು ನೋಡಲಿಲ್ಲ. ಅವರು ರೈತರ ಹೊಲ ಗದ್ದೆಗಳಲ್ಲಿ, ದಲಿತರ ಕೇರಿಗಳಲ್ಲಿ, ಬಡವರ ವಿರಾಮದ ಅರಳಿ ಕಟ್ಟೆಗಳಲ್ಲಿ ದೇವರನ್ನು ಕಂಡರು. ಅವರು ಭಾಷೆಯನ್ನು ಸರಳಗೊಳಿಸಿದರು, ಧರ್ಮವನ್ನು ಜನರ ಕೈಗೆ ತಂದರು.

ಬರೀ ನೂರಿನ್ನೂರು ವರ್ಷಗಳ ಹಿಂದೆ ಈ ದೇಶದಲ್ಲಿ ಆಗಿ ಹೋದ ಸಂತರು, ಶರಣರು, ದಾಸರು, ಶರೀಫರು, ಭಿಕ್ಷುಗಳು, ಕಲಾವಿದರು, ತಪಸ್ವಿಗಳು, ರೈತರು ಮೊದಲಾದವರು ಅಡ್ಡಾಡಿದ ದಾರಿಯ ಉದ್ದವೆಷ್ಟಿರಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಸುಗಮ ಹಾದಿಗಳಿಲ್ಲದ, ಹೊಳೆ, ನದಿಗಳಿಗೆ ಸೇತುವೆಗಳಿಲ್ಲದ, ಬೆಟ್ಟ, ಗುಡ್ಡಗಳನ್ನು ಅಡ್ಡಡ್ಡ ಅರೆಬರೆ ಕಡಿದು ಮಾಡಿದ ಕಡಿದಾದ ತಿರುಗು ಏರು ಜಾರು ಹಾದಿಗಳಲ್ಲಿ ಊರಿಂದೂರಿಗೆ ನಡೆದ ಇಂಥ ನೆಲಜಂಗಮರು ನಡೆದದ್ದಕ್ಕೆ ಲೆಕ್ಕವಿಟ್ಟವರಿಲ್ಲ. ಅದು ಕೂಡ ಬಹುತೇಕ ಬರಿಗಾಲಿನ ನಡಿಗೆ. ಕಲ್ಲು, ಮುಳ್ಳು, ಕೆಸರು, ಮಣ್ಣು, ಬಿಸಿಲು, ಮಳೆ, ಗಾಳಿ, ಚಳಿ ಎಲ್ಲವನ್ನು ದಾಟಿಕೊಂಡೇ ಊರಿಂದ ಊರಿಗೆ ಸಾಗಿದವರು. ಹಾದಿಯುದ್ದಕ್ಕೂ ದಣಿವಾದಾಗಲೆಲ್ಲ ಯಾವುದೋ ಮಂದಿರ, ಮಠ, ಶಾಲೆ, ಮರದಡಿಯ ನೆರಳಲ್ಲಿ ಮಲಗಿ ಎದ್ದು ಒಲೆ ಉರಿಸಿ, ಅನ್ನ ಬೇಯಿಸಿ, ರೊಟ್ಟಿ ತಟ್ಟಿ ಉಂಡು ವಿಶ್ರಾಂತಿ ಪಡೆದು ಮತ್ತೆ ನಡೆದು ಮನುಷ್ಯ ಸಂಬಂಧವನ್ನು ಬೆಸೆದುಕೊಂಡವರು.

ಮನುಷ್ಯನ ಸಮ್ಮುಖದ ಮಾತು ಕತೆಯಾಗುವುದು ಇಂಥ ವಿರಾಮದ ನಡಿಗೆಗಳಲ್ಲಿ ಮಾತ್ರ. ನಡಿಗೆ ಅನುಭವವಾಗುವುದು, ಅನುಭವವೇ ಬದುಕಾಗುವುದು ಇಂಥ ದೂರ ದಾರಿಗಳಲ್ಲೇ. ಮುಂಜಾನೆಯ ನಡಿಗೆ, ಮುಸ್ಸಂಜೆಯ ನಡಿಗೆ, ಬೆಳದಿಂಗಳ ನಡಿಗೆ, ಕಗ್ಗತ್ತಲ ನಡಿಗೆ, ಕಾಡಿನ ನಡಿಗೆ, ಭಜನೆಯ ನಡಿಗೆ, ಭಕ್ತಿಯ ನಡಿಗೆ, ಯಾತ್ರೆಯ ನಡಿಗೆ, ಸಂಕೀರ್ತನೆಯ ನಡಿಗೆ, ಗುಂಪು ನಡಿಗೆ, ಏಕಾಂಗಿ ನಡಿಗೆ, ವೃತದ ನಡಿಗೆ, ಧ್ಯಾನದ ನಡಿಗೆ, ಮದುವೆಯ ನಡಿಗೆ, ಮಸಣದ ನಡಿಗೆ..... ಇವತ್ತು ಇಂತಹ ನೂರಾರು ನಡಿಗೆಗಳಿಗೆ ಅರ್ಥವಿಲ್ಲದಂತಾಗಿದೆ.

ಆಶ್ರಮ ಕಟ್ಟಿಕೊಂಡು ದಿನಾ ನೆಲಮುಟ್ಟ ಬೇಕಾದ ಸಂತ ಸನ್ಯಾಸಿಗಳೇ ವಿಮಾನ ಹತ್ತುವ, ಸ್ವಂತ ಹೆಲಿಕಾಪ್ಟರ್ ಇಟ್ಟುಕೊಳ್ಳುವ ಈ ಕಾಲದಲ್ಲಿ ನೆಲ ಸ್ಪರ್ಶಿಸುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇಬ್ಬರೇ ಬದುಕುವ ಮನೆಯ ಮುಂದೆ ಐದಾರು ಗಾಡಿ ನಿಂತಿರುವುದನ್ನು ನಾವೀಗ ಕಾಣುತ್ತಿದ್ದೇವೆ. ಒಂದೇ ಒಂದು ಮಹಡಿ ಇರುವ ಮನೆಗೆ ಲಿಫ್ಟ್ ಇಟ್ಟುಕೊಂಡವರನ್ನೂ ಕಂಡಿದ್ದೇನೆ. ಕೆಲವರು ಕೂತಲ್ಲಿ ನಿಂತಲ್ಲಿ ಮಲಗಿದ್ದಲ್ಲಿ ಸುಸ್ಥಿರವಾಗಿ ದೇಹಾಂಗಗಳಿಗೆ ಸಹಜ ವ್ಯಾಯಾಮವಿಲ್ಲದೆ ಅಡ್ಡಡ್ಡ ಬೆಳೆಯುತ್ತಿದ್ದಾರೆ. ಕೆಲವರು ಯಂತ್ರದ ಮೇಲಿನ ಕೃತಕ ಜಾರುನಡಿಗೆಗಾಗಿ ವ್ಯಾಯಾಮ ಶಾಲೆಗೆ ಹೋಗಿ ಹಣ ಕೊಟ್ಟು ಪಾಠ ಕೇಳಿಸಿಕೊಳ್ಳುತ್ತಿದ್ದಾರೆ.

ವಿಚಿತ್ರವೆಂದರೆ ಇತ್ತೀಚೆಗಂತೂ ನನ್ನೂರಿನ ರೈತರು ಬೆಳಗ್ಗೆ ಸಂಜೆ ಊರನ್ನು ಬಗೆದು ಸಾಗುವ ಡಾಂಬರು ರಸ್ತೆಯ ಮೇಲೆ ವಾಕ್ ಮಾಡುವುದನ್ನು ಕಂಡಿದ್ದೇನೆ. ಬೇರೇನೂ ಬೇಡ, ಅಂಗಳ ದಾಟಿ ಗುಡ್ಡವೇರಿ ರಸ್ತೆಯ ಮೇಲೆ ನಡಿಗೆ ಮಾಡುವ ಇವರೆಲ್ಲ ಅವರದ್ದೇ ಮನೆ ಮುಂದಿನ ತೋಟಕ್ಕೆ ಇಳಿದು ಅರ್ಧಗಂಟೆ ಅಡಿಕೆ ಹೆಕ್ಕಿದ್ದರೆ ದೇಹದ ಅಂಗಾಂಗಗಳಿಗೆ ಬಲ ಬರುತ್ತಿತ್ತೋ ಏನೋ? ಇನ್ನು ಸ್ವಲ್ಪ ಸಮಯದಲ್ಲೇ ನಗರಗಳಲ್ಲಿ ಆಮ್ಲಜನಕ ಮಾರುವ ಅಂಗಡಿಗಳಂತೆಯೇ ‘ನಡಿಗೆಯನ್ನು ಕಲಿಸಿಕೊಡಲಾಗುತ್ತದೆ’ ಎಂಬ ತರಗತಿಗಳು ಆರಂಭಗೊಂಡರೂ ಅಚ್ಚರಿಪಡಬೇಕಾದ ಅಗತ್ಯವಿಲ್ಲ.

ನಮ್ಮ ಕಾಲಿಗೆ ಚಪ್ಪಲಿ ಬಂದದ್ದು ಒಂದು ಕ್ರಾಂತಿ. ಪಲ್ಲಕ್ಕಿ, ಎತ್ತಿನ ಗಾಡಿ, ಕುದುರೆಗಾಡಿ, ಮುಂದೆ ಇಂಧನ ಮೂಲ ವಾಹನಗಳು, ನೀರು ಗಾಳಿಯ ಮೇಲೆ ತೇಲುವ ಹಾರುವ ಸಾಗಾಟಗಳೆಲ್ಲ ಬಂದ ಮೇಲೆ ಮನುಷ್ಯ ನಿಧಾನವಾಗಿ ನಡೆಯುವುದನ್ನೇ ಮರೆಯುತ್ತಿದ್ದಾನೆ. ಇದರ ಪರಿಣಾಮ ಏನಾಗಬಹುದು?

ಬಸವಣ್ಣನು ಬಸವಕಲ್ಯಾಣದಿಂದ ಕೂಡಲಸಂಗಮದವರೆಗೆ, ಅಕ್ಕ ಮಹಾದೇವಿ ಶ್ರೀಶೈಲಂವರೆಗೆ, ಅಲ್ಲಮಪ್ರಭು ಶಿಕಾರಿಪುರದಿಂದ ಅದೇ ಕೂಡಲಸಂಗಮದವರೆಗೆ ನಡೆದೇ ಹೋದವರು. ರಿಕ್ಷಾ ಹತ್ತಿದವರಲ್ಲ, ಬಸ್ಸು ಏರಿದವರಲ್ಲ, ಆಗ ಕುದುರೆಯ ಸಾರೊಟು, ಎತ್ತಿನ ಗಾಡಿ ಇತ್ತೋ ಗೊತ್ತಿಲ್ಲ.

ಕನಕದಾಸರು ಕಾಗಿನೆಲೆಯಿಂದ ಉಡುಪಿಯವರೆಗೆ ಶ್ರೀಕೃಷ್ಣನ ದರ್ಶನಕ್ಕಾಗಿ ಸರಕಾರಿ ಬಸ್ಸಿನಲ್ಲಿ ಬಂದವರಲ್ಲ, ಪುರಂದರ ದಾಸರು ಪಂಡರಾಪುರ, ತಿರುಪತಿ, ಹಂಪಿ, ಶೃಂಗೇರಿ, ಉಡುಪಿ ಎಲ್ಲೆಡೆ ಪಾದಯಾತ್ರೆಯನ್ನೇ ಮಾಡಿದವರು. ವ್ಯಾಸರಾಜ ತೀರ್ಥರು ಕುರುಕ್ಷೇತ್ರದಿಂದ ಹಂಪಿವರೆಗೆ, ರಾಘವೇಂದ್ರ ಸ್ವಾಮಿ ಪಂಡರಾಪುರದಿಂದ ಮಂತ್ರಾಲಯದವರೆಗೆ, ಶಂಕರಾಚಾರ್ಯ ರಾಮಾನುಜಾಚಾರ್ಯ ಎಲ್ಲರದ್ದೂ ಬರೀ ಪಾದಯಾತ್ರೆ. ಬುದ್ಧನ ಉತ್ತರ ಭಾರತದ ವಿಸ್ತಾರ ಯಾತ್ರೆ ಅದು ಬುದ್ಧಗಯದಿಂದ ಸಾರನಾಥ ಕೋಶಲವರೆಗೆ, ಮಧ್ವಾಚಾರ್ಯರು ಉಡುಪಿಯಿಂದ ಬದರಿಕಾಶ್ರಮದವರೆಗೆ... ಗಾಂಧಿ, ನಾರಾಯಣ ಗುರುಗಳು ನೆಲ ನಡಿಗೆಯನ್ನು ಇಷ್ಟಪಡುತ್ತಿದ್ದರು, ಇದು ಕೇವಲ ಕೆಲವು ಮಾದರಿಗಳಷ್ಟೇ. ಲೆಕ್ಕವಿಲ್ಲದಷ್ಟು ಸಂತರು, ಶರೀಫರು, ಪ್ರವಾದಿಗಳು ಬರೀ ನಡಿಗೆಯಲ್ಲಿ ಲೋಕ ಸುತ್ತಿದ್ದಾರೆ. ಒಂದು ಬೆಟ್ಟ ಹತ್ತಿ ಆ ಕಡೆ ಏರಿ ಇಳಿದರೆ, ಒಂದು ದೋಣಿ ಏರಿ ಹೊಳೆ-ನದಿ ದಾಟಿದರೆ ಅವರ ಲೋಕದ ಎಲ್ಲೇ ವಿಸ್ತರಿಸುತ್ತಿತ್ತು. ಹಾಗಂತ ಇವರ್ಯಾರು ಕಳಚಿಕೊಂಡ ಮನೆ, ಊರನ್ನು ಮತ್ತೆ ಸೇರುತ್ತೇನೆ ಎಂಬ ಸುಸ್ಥಿರ ಬದುಕಿನ ಮನೋಭಾವನೆಯನ್ನು ಕಳಚಿ ಲೋಕ ಮುಕ್ತಿಯಾದವರು. ಕೇವಲ ಅವರೊಬ್ಬರೇ ಅಲ್ಲ, ಅವರ ಹಿಂದೆ ಮುಂದೆ ಒಂದಷ್ಟು ಜನ ನಡೆದು ಅವರನ್ನು ಮುಟ್ಟಬೇಕಾದ ಊರಿಗೆ ಮುಟ್ಟಿಸಿ ವಾಪಸು ಆಗಿದ್ದಾರೆ. ಹೊಸ ಊರಿನ ಜನ ಆ ಸಂತ-ಶರಣರನ್ನು ಇನ್ನೊಂದು ಊರಿಗೆ ತಲುಪಿಸುತ್ತಿದ್ದಾರೆ. ಉದ್ದಕ್ಕೂ ನಡೆಯುವವ ಮಾತ್ರ ಒಬ್ಬನೇ. ಗುರಿ ಮುಟ್ಟುವವ, ಸಂತನಾಗುವವ ಅವನೊಬ್ಬನೇ.

ಇವತ್ತಿಗೂ ಭಾರತದ ಆತ್ಮಭಾಗವಾಗಿರುವ ಗ್ರಾಮವೊಂದರಲ್ಲಿ ನೀವು ಸೇರಬೇಕಾದ ಮನೆಯನ್ನು ಗಣಿಸಲು ದಿಕ್ಸೂಚಿಯಾಗಬೇಕಾದ ನಿಮ್ಮ ಗೂಗಲ್ ಮ್ಯಾಪ್ ಕೈ ಕೊಟ್ಟರೆ ಆ ಹಾದಿಯುದ್ಧಕ್ಕೂ ನೀವು ನಿರೀಕ್ಷಿಸುವುದು ದಾರಿ ತೋರಿಸುವ ಯಾವುದಾದರೂ ಮನುಷ್ಯರು ಸಿಗುತ್ತಾರ ಎಂದು. ಅಂತಹವರು ದಾರಿ ತೋರಿಸುವ ಕ್ರಮವೇ ಒಂದು ಹಳ್ಳಿಮುಖಿ ನಾಟಿ ಜೀವಪ್ರಜ್ಞೆ.

‘‘ನೀವು ಸ್ವಲ್ಪ ಮುಂದೆ ಹೋಗಿ. ಅಲ್ಲೊಂದು ಅರಳಿ ಕಟ್ಟೆ ಸಿಗುತ್ತೆ. ಆ ಕಟ್ಟೆಯ ಬಲಭಾಗದಲ್ಲಿ ನೂರು ಅಡಿ ಮುಂದೆ ನಡೆಯಿರಿ. ಎಡಕ್ಕೊಂದು ಭಜನಾ ಮಂದಿರವಿದೆ. ಅಲ್ಲಿ ನೇರ ಮುಂದಕ್ಕೆ ಹೋದರೆ ಬಲಬದಿಯಲ್ಲಿ ಒಂದು ಶಿಲುಬೆ ಇದೆ. ಅಲ್ಲಿ ಎಡಕ್ಕೆ ನೂರು ಅಡಿ ಮುಂದಕ್ಕೆ ಹೋಗಿ. ನೇರ ನಿಮಗೆ ಒಂದು ಮಸೀದಿ ಕಾಣಿಸುತ್ತದೆ. ಅದರ ಎಡದ ಓಣಿಯಲ್ಲಿ ಆ ಮನೆ ಇದೆ. ಹೋಗಿ’’ ಎನ್ನುತ್ತಾರೆ. ದಾರಿ ಸೂಚಕರ ಮಾತು ನಿಮಗೆ ಬೇಕಾದ ಮನೆಯನ್ನಷ್ಟೇ ಅಲ್ಲ, ಇಡೀ ಭಾರತವನ್ನೇ ದರ್ಶಿಸುತ್ತದೆ. ನಮ್ಮ ಹಿರಿಯರೆಲ್ಲ ಇದೇ ದಾರಿಯಲ್ಲಿ ಸಿಕ್ಕಿದವರಲ್ಲೆಲ್ಲ ಮಾತಾಡಿಸಿಕೊಂಡೇ ನಡೆದವರಲ್ಲವೇ?

ಭಾರತದ ಮಣ್ಣಿನ ಈ ನಡಿಗೆಯ ಧ್ವನಿಯೇ ನಿಜವಾದ ಇಲ್ಲಿಯ ಆಧ್ಯಾತ್ಮಿಕ ಇತಿಹಾಸ. ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರೆಲ್ಲರೂ ನಡಿಗೆಯ ಮನುಷ್ಯರೇ. ಅದರಲ್ಲೂ ಸಂತರದ್ದು ಕೇವಲ ದೇಹ ದಂಡನೆಯ ಚಲನೆಯಲ್ಲ, ಅದು ಆತ್ಮಾನುಸಂಧಾನದ ಯಾತ್ರೆ. ಇದ್ದರೂ ಅವರು ಕುದುರೆಗಳ ಮೇಲೂ, ಗಾಡಿಗಳ ಮೇಲೂ, ರಥಗಳ ಮೇಲೂ ಪ್ರಯಾಣಿಸಲಿಲ್ಲ; ನೆಲದ ಮೇಲೆ, ಹಸಿರು ಧೂಳಿನೊಳಗೆ, ಮಣ್ಣಿನ ಬೆವರು ಹಚ್ಚಿಕೊಂಡು ನಡೆದು ಹೋದವರು. ಅವರ ನಡಿಗೆಯ ತೂಕವೇ ಈ ದೇಶದ ಸಾಮಾಜಿಕ ಬದಲಾವಣೆಗೆ ದಿಕ್ಸೂಚಿಯಾಯಿತು. ಹನ್ನೆರಡನೆಯ ಶತಮಾನದ ಎಷ್ಟೋ ಶರಣರು ಇದೇ ಹಾದಿಯಲ್ಲಿ ದೇಗುಲದ ಗೋಡೆಗಳೊಳಗೆ ಸಿಕ್ಕಿಹಾಕಿಕೊಂಡ ದೇವರನ್ನು ಹೊರಗೆ ತೆಗೆದು ಜನರ ಮಧ್ಯೆ ನಿಲ್ಲಿಸಿದರು. ಬಯಲು ಗೊಳಿಸಿದರು.

‘ಕಾಯಕವೇ ಕೈಲಾಸ’ ಎಂದ ಬಸವಣ್ಣನ ನುಡಿ ನಿಜದ ಭೂಮಿಯ ಮೇಲೇ ನಿಂತು ಹೇಳಿದ ಮಾತು. ಅದು ಆಕಾಶದ ಧ್ವನಿ ಅಲ್ಲ, ಬಯಲ ಬಿತ್ತರವಲ್ಲ, ಅದು ರೈತನ, ಕಮ್ಮಾರನ, ಬಡಗಿಯ, ಸಮಗಾರನ, ನೇಕಾರನ, ಕುಂಬಾರನ ಶ್ರಮದ ಚಲನೆಯ ಚಕ್ಕಡಿಯ ಧ್ವನಿ. ಇದೇ ದಾರಿಯಲ್ಲಿ ಅಕ್ಕಮಹಾದೇವಿ ನಗ್ನವಾಗಿ ನಡೆದಳು - ಆ ನಡಿಗೆಯಲ್ಲೇ ಲಜ್ಜೆ ಮುಕ್ತಿ ಪಡೆದಿತ್ತು.

ಕಾಗಿನೆಲೆಯಿಂದ ಉಡುಪಿಗೆ ಬರಿಗಾಲಲ್ಲಿ ನಡೆದ ಕನಕದಾಸನ ನಡಿಗೆಯು ಕೇವಲ ಕೃಷ್ಣ ದರ್ಶನದ ಯಾತ್ರೆಯಲ್ಲ, ಅದು ಸಮಾನತೆಯ ಸಂಗ್ರಾಮವಾಗಿತ್ತು. ಉಡುಪಿಯ ದ್ವಾರ ಮುಚ್ಚಿದಾಗ, ದೇವರು ತಾನೇ ತಿರುಗಿಕೊಂಡು ಅವನತ್ತ ನೋಡಿದ. ಅದು ಸಮಾಜವೇ ತಿರುಗುವ ಕ್ಷಣವಾಗಿತ್ತು. ಉತ್ತರದಲ್ಲಿ ಕಬೀರನ ಕಾಲುಗಳು ಗಂಗೆಯ ತೀರದಲ್ಲಿ ನೆಲ ಮುಟ್ಟಿದಾಗ, ಅವನು ‘‘ಹಿಂದೂ, ಮುಸ್ಲಿಮ್ ಬೇಡ, ಮಾನವನೇ ಸಾಕು’’ ಎಂದ. ಕಬೀರನ ಪಾದಯಾತ್ರೆ ಕೇವಲ ದೈವಿಕ ಆಗಿರಲಿಲ್ಲ. ಅದು ಕೂಡುಪ್ರಜ್ಞೆಯ ಸಾಮಾಜಿಕ ಯಾತ್ರೆ. ಊರು ಊರಿಗೆ ನಡೆದು ಅವನು ಹೇಳಿದ ಸತ್ಯವೆಂದರೆ: ದೇವರನ್ನು ನೋಡಲು ಆಕಾಶಕ್ಕೆ ಮುಖ ಮಾಡಬೇಕಾಗಿಲ್ಲ, ನೆಲದ ಮನುಷ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡು. ಅದೇ ನಡಿಗೆಯ ತತ್ವ. ಮೀರಾಬಾಯಿ ಅರಮನೆ ಬಿಟ್ಟು ಹೊರಟಳು; ಅವಳ ನಡಿಗೆಯೇ ಕ್ರಾಂತಿಯಾಯಿತು. ಬಂಗಾಳದ ಚೈತನ್ಯ ಮಹಾಪ್ರಭು ಜನರ ನಡುವೆ ನೃತ್ಯಮಾಡುತ್ತಾ ನಡೆದರು. ಆ ನಡಿಗೆಯಲ್ಲಿ ಪ್ರೇಮವಿತ್ತು, ಪ್ರಾರ್ಥನೆ ಇತ್ತು, ಪರಮಾತ್ಮನ ಶಕ್ತಿಯ ಚುರುಕು ಚೈತನ್ಯಇತ್ತು.

ಕಾಲುನಡಿಗೆಯೂ ಕಾಲನಡಿಗೆಯೂ ಹೌದು. ಈ ನಡಿಗೆಯಲ್ಲಿ ಸಂತರು ಬರೀ ಪುಸ್ತಕಗಳಿಂದ ದೇವರನ್ನು ಹುಡುಕಲಿಲ್ಲ; ಮಂದಿರ ಗುಡಿ ಗೋಪುರಗಳಲ್ಲಿ ದೇವರನ್ನು ನೋಡಲಿಲ್ಲ. ಅವರು ರೈತರ ಹೊಲ ಗದ್ದೆಗಳಲ್ಲಿ, ದಲಿತರ ಕೇರಿಗಳಲ್ಲಿ, ಬಡವರ ವಿರಾಮದ ಅರಳಿ ಕಟ್ಟೆಗಳಲ್ಲಿ ದೇವರನ್ನು ಕಂಡರು. ಅವರು ಭಾಷೆಯನ್ನು ಸರಳಗೊಳಿಸಿದರು, ಧರ್ಮವನ್ನು ಜನರ ಕೈಗೆ ತಂದರು.

ಇವರ ನಡಿಗೆಯಲ್ಲೇ ಹುಟ್ಟಿದ ಕಾವ್ಯ, ಕೀರ್ತನೆ, ವಚನ, ತತ್ವಪದ ಎಲ್ಲವೂ ಕಣ್ಣೀರು, ಬೆವರು ಇವನ್ನೆಲ್ಲ ಸೇರಿಸಿದ ಪವಿತ್ರ ಸಂಯೋಗ. ಅವರು ಯಾರಿಗೂ ಬರೀ ಪ್ರವಚನ ಕೊಡಲಿಲ್ಲ; ಬದುಕಿ ತೋರಿಸಿದರು. ಅಕ್ಕಮಹಾದೇವಿ ಸ್ತ್ರೀ ಮೌಲ್ಯ ತೋರಿಸಿದಳು, ಕಬೀರ ಸಮಾನತೆ ತೋರಿಸಿದನು, ಬಸವಣ್ಣ ಕಾಯಕದ ಗೌರವ ತೋರಿಸಿದನು, ಕನಕದಾಸ ದೇವರು ಜಾತಿಯ ಬಣ್ಣವನ್ನು ನೋಡುವುದಿಲ್ಲ ಎಂದನು. ಇವರೆಲ್ಲರ ನಡಿಗೆಯು ಮಣ್ಣಿನ ನಡಿಗೆಯಾಗಿ, ಕಾಲದ ನಡಿಗೆಯಾಗಿ ಉಳಿಯಿತು.

ಆ ನಡಿಗೆಯ ಧೂಳು ಇಂದಿಗೂ ಈ ದೇಶದ ಬಡವರ ಪಾದದ ಮೇಲೆ ಇದೆ. ಇಂದಿನ ಯಂತ್ರದ ಯುಗದಲ್ಲಿ, ನಡಿಗೆಯೇ ಮರೆಯಾದ ಕಾಲದಲ್ಲಿ, ಇವರ ನೆನಪು ನಮಗೆ ಒಂದು ಎಚ್ಚರಿಕೆ - ನೆಲದಿಂದ ದೂರವಾದರೆ ದೇವರಿಂದಲೂ ದೂರವಾಗುತ್ತೇವೆ. ಶರಣರ ನಡಿಗೆಯ ಪಾಠವೇ - ಅಧ್ಯಾತ್ಮವು ಕಾಲಿನೊಳಗಿದೆ, ಹೃದಯದೊಳಗಿದೆ, ನೆಲದೊಳಗಿದೆ ಎಂಬುದು.

ನಾವೆಲ್ಲ ಶಾಲೆಗೆ ಹೋಗುವಾಗ ನಾಲ್ಕೈದು ಮೈಲು ಪ್ರತಿದಿನ ನಡೆದವರು. ಶಾಲೆಯ ಪುಸ್ತಕಗಳಿಗಿಂತ ಹೆಚ್ಚು ಆ ನಡಿಗೆ ನಮಗೆ ಪ್ರಕೃತಿಯ ಶಿಕ್ಷಣ ಕೊಟ್ಟಿದೆ. ನಮ್ಮೂರ ಹೊಳೆಯ ಪಾಪು ದಾಟುವ ಸಂದರ್ಭದಲ್ಲಿ ಅದರ ಮೇಲೆ ಕೂತು ಕೆಂಪು ನೀರಿಗೆ ಕಾಲುಕೊಟ್ಟವನು ನಾನು. ಹೊಳೆ ಮೇಲಿನ ಮರದ ಅಡ್ಡ ಹಾಸಿನ ಕೆಳಗಡೆ ಬೀಸು ನೀರಿಗೆ ಅಲ್ಲಾಡುವ ಕಿಸ್ಕಾರದ ಹೂವಿನ ದಂಡೆಯನ್ನು ಪ್ರತಿದಿನ ಗಂಟೆಗಟ್ಟಲೆ ನೋಡಿದವನು. ಬೇಸಿಗೆಯಲ್ಲಿ ತೋಡಿಗಿಳಿದು ಮರಳಿನ ಮನೆ ಕಟ್ಟಿದವನು. ಶಾಲೆಯ ಹಾದಿಯಲ್ಲಿ ಕೇಪುಳು, ಚೂರಿ, ಸರೋಲಿ, ಚೇರೇ, ಕೊಟ್ಟೆ, ಚಾಕೊಟ್ಟೆ... ಹೀಗೆ ಹತ್ತಾರು ಬಗೆಯ ಕಾಡು ಹಣ್ಣುಗಳನ್ನು ಮೆದ್ದು ಕೊಂಡೇ ಹೋದವರು. ಸಿಕ್ಕಿದ ನಾಲ್ಕೈದು ಗೇರು ಬೀಜಗಳನ್ನು ಕಿಸೆಗೇರಿಸಿ ಶಾಲೆ ಪಕ್ಕದ ಅಂಗಡಿಯಲ್ಲಿ ಮಾರಿ ಬದುಕಿನಲ್ಲಿ ಮೊದಲ ಸಲ ಪೈಸೆಯ ಮುಖ ನೋಡಿದವರು.

ನನಗೆ ಅದೇ ನೆಲ ನಡಿಗೆಯಲ್ಲಿ ಮಳೆ, ಮಿಂಚು, ಗುಡುಗು, ಚಳಿ, ಬಿಸಿಲು, ನೆರಳು ಎಲ್ಲದರ ಅನುಭವವಾಗಿದೆ. ಶೀತ, ಜ್ವರ, ಕೆಮ್ಮಿಗೆ ಕ್ಯಾರೇ ಎನ್ನದೆ ಹಾದಿ ಗುಂಟ ನಡೆದವನು. ಆದರೆ ಈಗ ಫರ್ಲಾಂಗ್ ದೂರದ ಶಾಲೆಗೂ ಮನೆ ಮನೆಗಳಿಂದ ರಿಕ್ಷಾ ಓಡುತ್ತದೆ. ಹಳದಿ ಬಸ್ಸು ಬಂದು ಮಕ್ಕಳನ್ನು ಲೋಡು ಮಾಡಿಕೊಂಡು ನಗರ ಮುಖಿಯಾಗುತ್ತದೆ. ಶಾಲೆಯ ಅಂಗಳದಲ್ಲಿ ಆ ಚಾಲಕ ಕಿತ್ತುಕಿತ್ತು ಮಕ್ಕಳನ್ನು ಅನ್ ಲೋಡ್ ಮಾಡುತ್ತಾನೆ. ನೀರು, ಅನ್ನ, ಪುಸ್ತಕದ ಮಣಭಾರದ ಹೊರೆ ಹೊತ್ತುಕೊಂಡು ಮಗು ಏಗುತ್ತಾ ತರಗತಿಗೆ ಮುಟ್ಟುವಾಗ ಅಲ್ಲಿಯ ಶಿಕ್ಷಕಿ ಪುಸ್ತಕ ಬಿಡಿಸಿಟ್ಟು ಚಿತ್ರದ ಬದನೆಕಾಯಿಯನ್ನು ತೋರಿಸುತ್ತಾಳೆ!. ಆದರೆ ನಮಗೆ ನಿತ್ಯ ಮನೆಯಂಗಳದಲ್ಲಿ, ಶಾಲೆಯ ಬದಿಯ ಇನ್ಯಾರದೋ ಕೃಷಿಕರ ಹಾಡಿಯಲ್ಲಿ ನಿಜವಾದ ಬದನೆಯ ಪರಿಚಯವಾಗುತ್ತಿತ್ತು. ಆ ಕಾಲ ಕಲಿಕೆ ಅನುಭವ ಅಧ್ಯಾತ್ಮ ಇನ್ನೆಲ್ಲಿ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News