×
Ad

ಮದ್ದೂರು ಗಲಾಟೆಯ ಹಿಂದೆ ಬಿಜೆಪಿಯವರ ಕೈವಾಡವಿದೆ : ಎಂ.ಲಕ್ಷ್ಮಣ್ ಆರೋಪ

► "ಚಾಮುಂಡಿ ಬೆಟ್ಟ ಚಲೋ ನಡೆಸಿ ಮೈಸೂರನ್ನು ಕರಾವಳಿ ಮಾಡಬೇಕು ಎಂಬ ಉದ್ದೇಶ ಬಿಜೆಪಿಯವರಿಗಿತ್ತು" ► "ಪ್ರತಾಪ್ ಸಿಂಹನಿಗೆ ಕ್ಯಾಮರಾ ನೋಡಿದರೆ, ದೆವ್ವ ಬಂದ ಹಾಗೆ ಆಗುತ್ತದೆ"

Update: 2025-09-10 18:35 IST

ಮೈಸೂರು, ಸೆ.10 : ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯ ಹಿಂದೆ ಬಿಜೆಪಿಯವರ ಕೈವಾಡವಿದೆ. ಅದೇ ರೀತಿ ಮೈಸೂರಿನಲ್ಲೂ ʼಚಾಮುಂಡಿ ಬೆಟ್ಟ ಚಲೋʼ ಹೆಸರಿನಲ್ಲಿ ಗಲಾಟೆ ಎಬ್ಬಿಸಲು ಪ್ರಯತ್ನಪಟ್ಟರು, ಅದು ಸಾಧ್ಯವಾಗಲಿಲ್ಲ. ಈ ಎರಡು ಘಟನೆಗಳನ್ನು ಎನ್.ಐ.ಎ ಮತ್ತು ಸಿಬಿಐಗೆ ವಹಿಸಿ ಎಂದು ಬಿಜೆಪಿಯವರು ಒತ್ತಾಯ ಮಾಡುತ್ತಾರಾ? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾಗೆ ಆಹ್ವಾನಿಸಿರುವ ವಿಚಾರದಲ್ಲಿ ಎರಡು ಗುಂಪುಗಳು ಪರ-ವಿರೋಧ ಮಾಡಿದ್ದವು. ಹಿಂದೂ ಜಾಗರಣ ವೇದಿಕೆಯವರು ವಿರೋಧಿಸಿ ʼಚಾಮುಂಡಿ ಬೆಟ್ಟ ಚಲೋʼಗೆ ಕರೆ ನೀಡಿದರೆ, ಬಾನು ಮುಷ್ತಾಕ್ ಪರ ದಲಿತ ಮಹಾಸಭಾದವರು ಚಾಮುಂಡಿ ಬೆಟ್ಟ ನಡಿಗೆ ಏರ್ಪಡಿಸಿದ್ದರು. ಇದಕ್ಕೆ ಪೊಲೀಸರು ಎರಡು ಗುಂಪುಗಳಿಗೂ ಅನುಮತಿ ನಿರಾಕರಿಸಿ, ಯಾಕೆ ನಿರಾಕರಿಸಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟವಾಗಿ ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಆದರೆ ಬಿಜೆಪಿಯ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಮೈಸೂರಿನಲ್ಲಿ ಕೋಮುಗಲಭೆ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಪೊಲೀಸರ ಅನುಮತಿಯನ್ನು ನಿರಾಕರಿಸಿ, ಚಾಮುಂಡಿ ಬೆಟ್ಟ ಚಲೋಗೆ ಮುಂದಾಗಿದ್ದರು. ಮೈಸೂರು ಅಲ್ಲದೆ ಮಂಗಳೂರು, ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಮತ್ತು ಹಾಸನ ಕಡೆಗಳಿಂದ ಬಸ್ಸು, ಕಾರು ಸೇರಿದಂತೆ ಇತರೆ ವಾಹನಗಳಲ್ಲಿ 5 ಸಾವಿರ ಜನರು ಮೈಸೂರಿಗೆ ಬಂದಿದ್ದಾರೆ. ಪೊಲೀಸರು ಇವರನ್ನು ಅರ್ಧದಲ್ಲಿಯೇ ತಡೆದಿದ್ದಾರೆ. ಕೊಮು ಸೌಹಾರ್ದ ಹಾಳು ಮಾಡಬೇಕೆಂದೇ ಬಂದಿದ್ದಾರೆ. ಇವರಲ್ಲಿ ಅನೇಕ ಗೂಂಡಾಗಳು ಬಂದಿದ್ದಾರೆ ಎಂದು ಹೇಳಿದರು.

ಬಿಜೆಪಿ ಮತ್ತು ಹಿಂದುತ್ವ ಕಾರ್ಯಕರ್ತರ ಹೆಸರಿನ ಗೂಂಡಾಗಳು ಚಾಮುಂಡಿ ಬೆಟ್ಟ ಚಲೋ ನಡೆಸಲು ಬಂದಿದ್ದಾರೆ. ಅದರಲ್ಲಿ 46 ಮಂದಿ ಮಾತ್ರ ಮೈಸೂರು ನಗರ ಮತ್ತು ಜಿಲ್ಲೆಗೆ ಸೇರಿದವರು. ಇನ್ನು 412 ಮಂದಿ ಮಡಿಕೇರಿ, ಹಾಸನ, ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ಕಡೆಗಳಿಂದ ಬಂದಿದ್ದವರು. 20 ಜನ ಮಾತ್ರ ಬೆಂಗಳೂರಿನಿಂದ ಬಂದಿದ್ದರು. ಹಾಗಿದ್ದರೆ ಇವರ ಉದ್ದೇಶ ಏನಿತ್ತು. ಗಲಾಟೆ ಎಬ್ಬಿಸಬೇಕು ಎಂದೇ ಇವರು ಮೈಸೂರಿಗೆ ಬಂದಿದ್ದು ಎಂದು ಆರೋಪಿಸಿದರು.

ಚಾಮುಂಡಿ ಬೆಟ್ಟ ಚಲೋ ನಡೆಸಿ ಮೈಸೂರನ್ನು ಕರಾವಳಿ ಮಾಡಬೇಕು ಎಂಬ ಉದ್ದೇಶ ಬಿಜೆಪಿಯವರಿಗಿತ್ತು. ಆದರೆ ನಮ್ಮ ಮೈಸೂರು ಪೊಲೀಸರು ನಾಕಾ ಬಂಧಿ ಹಾಕಿ ಎಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದರು.‌ ಇಲ್ಲದಿದ್ದರೆ ನಿನ್ನೆ ಮೈಸೂರಿನಲ್ಲಿ ದೊಡ್ಡ ಗಲಾಟೆಯನ್ನೇ ಸೃಷ್ಟಿ ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರಿನಲ್ಲಿ ಗಣೇಶ ವಿಸರ್ಜನರ ವೇಳೆ ಗಲಾಟೆ ಎಬ್ಬಿಸಬೇಕು ಎಂದೇ ಗೂಂಡಾಗಳನ್ನು ಕರೆಸಿ ಬಿಜೆಪಿಯವರು ಕುತಂತ್ರ ನಡೆಸಿದ್ದರು. ರಾಮ್ ರಹೀಮ್ ನಗರದ ಮಸೀದಿ ರಸ್ತೆಯನ್ನು 144 ನೇ ಸೆಕ್ಷನ್ ಜಾರಿ ಮಾಡಿದ್ದರು. ಬೇಕು ಎಂದೇ ಅಲ್ಲಿ ಮೆರವಣಿಗೆ ಹೋಗಿ ಗಲಾಟೆ ಎಬ್ಬಿಸಿದ್ದಾರೆ. ಮಸೀದಿಯಿಂದ ಕಲ್ಲು ಹೊಡೆದಿಲ್ಲ ಎಂದು ಐಜಿಪಿ ಬೋರಲಿಂಗಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಕಲ್ಲು ಹೊಡೆದಿರುವುದು ಬಿಜೆಪಿಯವರೇ ಎಂದು ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ಗಣೇಶ ವಿಸರ್ಜನೆಗೂ ಮುನ್ನ ಅಲ್ಲಿಗೆ ಬಂದವರಿಗೆ ಬಿಜೆಪಿಯವರು ಕೇಸರಿ ಶಾಲು, ಒಂದು ಕ್ವಾಟ್ರು ಎಣ್ಣೆ ಮತ್ತು ಬಿರಿಯಾನಿಯನ್ನು ನೀಡಿ ಗೂಂಡಾಗಳನ್ನು ಕರೆಸಿ ಗಲಾಟೆಗೆ ತಯಾರಿ ಮಾಡಿದ್ದಾರೆ. ಅಲ್ಲಿ ಮೆರವಣಿಗೆ ಹೋಗುವ ಸಂದರ್ಭದಲ್ಲಿ ಇವರೇ ಕಲ್ಲನ್ನು ಹೊಡೆದು ಕೋಮು ಗಲಭೆ ಸೃಷ್ಟಿ ಮಾಡಲು ಯತ್ನಿಸಿದ್ದಾರೆ. ಮಂಡ್ಯವನ್ನು ಕಬ್ಜ ಮಾಡಿಕೊಳ್ಳಬೇಕು ಎಂದು ಅಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶ್ರೀರಂಗಪಟ್ಟಣ, ನಾಗಮಂಗಲ, ಈಗ ಮದ್ದೂರು. ಹೀಗೆ ಒಂದೊಂದಾಗಿ ಬಿಜೆಪಿಯವರು ಮಂಡ್ಯದಲ್ಲಿ ಬೇರು ಬಿಡಲು ಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿ ಮಾಡಿದರು ಎಂದು ಮಂಡ್ಯವನ್ನು ಬಿಜೆಪಿಗೆ ಅಡ ಇಟ್ಟು ಬಿಟ್ಟಿದ್ದಾರೆ. ಮುಂದೊಂದು ದಿನ ಇವರು ಜೆಡಿಎಸ್ ಪಕ್ಷವನ್ನೇ ನುಂಗಿ ಬಿಡುತ್ತಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಳ್ಳೆಯ ಆಡಳಿತ ನೀಡಿ ಶಾಂತಿ ಕಾಪಾಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರಾದ ಬಿ.ಎಂ.ರಾಮು, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.

ಮದ್ದೂರಿನಲ್ಲಿ ಮುಸ್ಲಿಮರ ಬಗ್ಗೆ ಅಗೌರವವಾಗಿ ಮಾತನಾಡಿ ಟ್ರೋಲ್‌ಗೆ ಒಳಗಾದ ಮಹಿಳೆಯ  ಹಿನ್ನಲೆ ಏನು ಎಂಬುದನ್ನು ಆಕೆಯೇ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಒಂದು ಕ್ವಾಟ್ರು ಎಣ್ಣೆ, ಎರಡು ಬಿಯರ್ ಎಂದು ಹೇಳಿಕೊಂಡಿದ್ದಾರೆ. ಈಕೆ ಮುಸ್ಲಿಮರ ಬಗ್ಗೆ ಘೋಷಣೆ ಕೂಗಿದ ಹಾಗೆ ಮುಸ್ಲಿಮರು ಹಿಂದೂಗಳ ವಿರುದ್ಧ ಅದೇ ತರಹ ಘೋಷಣೆ ಕೂಗಿದರೆ ಹಿಂದೂಗಳು ಸಹಿಸಿಕೊಳ್ಳುತ್ತಾರಾ?.

-ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ.

ಪತ್ರಕರ್ತನಿಗೆ ನಿಂದನೆ; ಕ್ರಿಮಿನಲ್ ಪ್ರಕರಣ ದಾಖಲಿಸಿ :

ಮೈಸೂರು ಜಿಲ್ಲೆಯ ʼವಾರ್ತಾಭಾರತಿʼ ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಕುಮಾರ್ ಎನ್.ಎಸ್ ಅವರ ಬಗ್ಗೆ ಏಕವಚನದಲ್ಲಿ ನಿಂದಿಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.

ಓರ್ವ ಹಿರಿಯ ಪತ್ರಕರ್ತರ ಬಗ್ಗೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅಲ್ಲಿದ್ದ ಪತ್ರಕರ್ತರು ಅಲ್ಲೇ ಖಂಡಿಸಬೇಕಿತ್ತು. ಅವನು ಆ ರೀತಿ ಮಾತನಾಡಿದರೂ, ಇತರೆ ಪತ್ರಕರ್ತರು ಸುಮ್ಮನಿದ್ದದ್ದು ನೋವುಂಟು ಮಾಡಿದೆ ಎಂದು ಹೇಳಿದರು.

ಘಟನೆ ಖಂಡಿಸಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅವರು ಮಾದ್ಯಮ‌ ಹೇಳಿಕೆ ನೀಡಿದ್ದಾರೆ. ಅವರ ಎಲ್ಲಾ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.

2013ರಲ್ಲಿ ದೇಶಾದ್ಯಂತ ಮೋದಿ ಅಲೆ ಇತ್ತು. ಕಜ್ಜಿ ನಾಯಿ ನಿಂತಿದ್ದರೂ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ, ಇದಕ್ಕೆ ನನ್ನ ಸಂಪೂರ್ಣ ಸಹಮತ ಇದೆ. ಈ ಕಜ್ಜಿ ನಾಯಿ ಈಗ ಎಲ್ಲರನ್ನು ಕಚ್ಚುತ್ತಿದೆ. ಎಲ್ಲರನ್ನೂ ಬೈಯ್ಯುವುದನ್ನೇ ವೃತ್ತಿ ಮಾಡಿಕೊಂಡಿರುವ ಮೂರ್ಖ ಅವಿವೇಕಿ ಈ ಮಾಜಿ ಸಂಸದ ಎಂದು ವಾಗ್ದಾಳಿ ನಡೆಸಿದರು.

ಪ್ರತಾಪ್ ಸಿಂಹನಿಗೆ ಕ್ಯಾಮೆರಾ ನೋಡಿದರೆ, ದೆವ್ವ ಬಂದ ಹಾಗೆ ಆಗುತ್ತದೆ. ಅವನು ಮಾತ್ರ ಎಲ್ಲರನ್ನು ಬೈಯ್ಯುತ್ತಾನೆ. ಬೇರೆಯವರು ಪ್ರಶ್ನೆ ಕೇಳಿದರೆ, ಅದಕ್ಕೆ ಉತ್ತರ ಕೊಡುವ ಯೋಗ್ಯತೆ ಇಲ್ಲ. ಮೈಸೂರಿನ ಜನರು ಬಹಳ ತಾಳ್ಮೆಯಿಂದ ಇದ್ದಾರೆ. ತಾಳ್ಮೆ ಕಳೆದರೆ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News