×
Ad

ಎಲ್ಲಾ ಸರಕಾರಗಳಲ್ಲೂ ಫೋನ್ ಕದ್ದಾಲಿಕೆ ಆಗುವುದು ಸರ್ವೆ ಸಾಮಾನ್ಯ : ಎಚ್.ಡಿ.ಕುಮಾರಸ್ವಾಮಿ

"ಸಿಎಂ, ಕುರ್ಚಿ ಉಳಿಸಿಕೊಳ್ಳಲು ತಮ್ಮದೇ ಶಾಸಕರ ಬಗ್ಗೆ ದೊಡ್ಡಮಟ್ಟದಲ್ಲಿ ಗುಪ್ತಚರ ಮೂಲಕ ಮಾಹಿತಿ ಸಂಗ್ರಹಿಸುತ್ತಿರುವುದು ಇದೇ ಮೊದಲು"

Update: 2026-03-02 19:26 IST

ಎಚ್.ಡಿ.ಕುಮಾರಸ್ವಾಮಿ

ಮೈಸೂರು : ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ತಮ್ಮದೇ ಪಕ್ಷದ ಶಾಸಕರು, ನಾಯಕರುಗಳ ಬಗ್ಗೆ ಗುಪ್ತಚರ ಇಲಾಖೆ ಮೂಲಕ ಮಾಹಿತಿ ಸಂಗ್ರಹ ಮಾಡುತ್ತಿರುವುದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಪ್ರಾರಂಭ ಆಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡೂ ಕಡೆಗಳಿಂದಲೂ ಗುಪ್ತಚರ ನಡೆಯುತ್ತಿದೆ. ಒಂದು ಗುಂಪು ಮುಖ್ಯಮಂತ್ರಿ ಮಾಡಬೇಕು ಕುರ್ಚಿ ಕೊಡಿ ಎನ್ನುವ ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದು ಗುಂಪು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕು ಎನ್ನುವ ಪ್ರಯತ್ನ ಮಾಡುತ್ತಿದೆ. ಎರಡೂ ಕಡೆಗಳಿಂದಲೂ ಗುಪ್ತಚರ ಇಲಾಖೆ ಬಳಕೆಯಾಗುತ್ತಿದೆ ಎಂದು ಹೇಳಿದರು.

ಯಾರು ಏನೇ ಹೇಳಿದರೂ ಫೋನ್ ಕದ್ದಾಲಿಕೆ ಎಂಬುದು ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಆಡಳಿತ ನಡೆಸುವ ಎಲ್ಲಾ ಸರಕಾರದಲ್ಲೂ ಫೋನ್ ಕದ್ದಾಲಿಕೆ ನಿರಂತರವಾಗಿ ನಡೆಸುತ್ತಲೇ ಇರುತ್ತಾರೆ. ಆದರೆ ಕೆಲವೊಮ್ಮೆ ತಪ್ಪುಗಳು ನಡೆದು ವಿಷಯಗಳು ಹೊರಗೆ ಬಂದು ತಲೆ ಉರುಳುವಂತಹ ಘಟನೆಗಳನ್ನು ನೋಡಿದ್ದೇವೆ ಎಂದರು.

ನನ್ನ ಅನುಭವದ ಪ್ರಕಾರ ಎಲ್ಲಾ ಸರಕಾರಗಳಲ್ಲೂ ಫೋನ್ ಕದ್ದಾಲಿಕೆ ಆಗೋದು ಸರ್ವೆ ಸಾಮಾನ್ಯ, ಆದರೆ ಕೆಲವರು ಪತೀವ್ರತೆ ತರ ನಡೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.

ಯುದ್ಧ ನಿಲ್ಲುವವರೆಗೂ ಕನ್ನಡಿಗರನ್ನು ಕರೆತರುವುದು ಕಷ್ಟ:

ಇರಾನ್- ಅಮೇರಿಕಾ, ಇಸ್ರೇಲ್ ನಡುವಿನ ಯುದ್ಧ ನಿಲ್ಲುವವರೆಗೂ ಅಲ್ಲಿ ಸಿಲುಕಿರುವ ಕನ್ನಡಿಗರನ್ನು ಭಾರತಕ್ಕೆ ಕರೆತರುವುದು ಕಷ್ಟವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಇಂತಹ ಹಲಾವರು ಸನ್ನಿವೇಶದಲ್ಲಿ ಭಾರತ ಸರಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದೀಗ ಇರಾನ್- ಅಮೇರಿಕಾ, ಇಸ್ರೇಲ್ ನಡುವೆ ದಿಡೀರನೇ ಯುದ್ಧ ಪ್ರಾರಂಭವಾಗಿದೆ. ಇದರಿಂದ ವಿಮಾನಗಳ ಹಾರಾಟ ಕೂಡ ಸ್ಥಗಿತಗೊಂಡಿದೆ. ಪ್ರವಾಸಕ್ಕೆ ಮತ್ತು ಉದ್ಯೋಗಕ್ಕಾಗಿ ತೆರಳಿರುವ ಲಕ್ಷಾಂತರ ಕನ್ನಡಿಗರು ಅಲ್ಲಿನ ವಿಮಾನ ನಿಲ್ದಾಣದಲ್ಲೇ ವಾಸ್ತವ್ಯ ಹೂಡಿದ್ದಾರೆ. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.

ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ಮಾತನಾಡಿದ್ದಾರೆ. ಈ ಬಗ್ಗೆ ನಾನೂ ಪ್ರಯತ್ನ ಮಾಡುತ್ತೇನೆ. ಆದಷ್ಟು ಬೇಗ ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಪ್ರಯತ್ನ‌ ಮಾಡುತ್ತೇವೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂತಹ ಸಂದರ್ಭದಲ್ಲಿ ಹಲವಾರು ತುರ್ತುಕ್ರಮಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ಎಲ್ಲರ ಸುರಕ್ಷತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಯಾರೂ ಆತಂಕ ಪಡುವುದು ಬೇಡ ಎಂದು ಹೇಳಿದರು.

ಸದ್ಯ ಅಲ್ಲಿ ಸಿಲುಕಿರುವ ಕನ್ನಡಿಗರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ನನ್ನ ಹಲವಾರು ಸ್ನೇಹಿತರು ದೂರವಾಣಿ ಮೂಲಕ ನನಗೆ ಮಾಹಿತಿ ನೀಡುತ್ತಿದ್ದಾರೆ. ವಿಧಾನಪರಿಷತ್ ಸದಸ್ಯ ಭೋಜೇಗೌಡರೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.

ತಂಬಾಕಿಗೆ ಸೂಕ್ತ ಬೆಲೆ ನೀಡಲು ಸೂಚನೆ:

ತಂಬಾಕು ಬೆಳೆದ ರೈತರಿಗೆ ಸೂಕ್ತ ಬೆಲೆ ನೀಡಬೇಕು ಎಂದು ತಂಬಾಕು ಮಂಡಳಿ ಅಧಿಕಾರಿಗಳು ಮತ್ತು ಖರೀದಿದಾರರಿಗೆ ಸೂಚನೆ ನೀಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಂಕ್ರಾಂತಿ ನಂತರ ತಂಬಾಕು ಬೆಲೆ ಕುಸಿತಗೊಂಡ ಹಿನ್ನಲೆಯಲ್ಲಿ ತಂಬಾಕು ಬೆಳೆದ ರೈತರು ಆತಂಕಕ್ಕೊಳಗಾಗಿದ್ದರು. ಹಾಗಾಗಿ ರೈತರಿಗೆ ಸೂಕ್ತ ಬೆಲೆ ನಿಗದಿ ಮಾಡುವ ಉದ್ದೇಶದಿಂದ ಇಂದು ತಂಬಾಕು ಮಂಡಳಿ ಅಧಿಕಾರಿಗಳು, ಖರೀದಿದಾರರ ಜೊತೆ ಸಚಿವ ಕೆ.ವೆಂಕಟೇಶ್, ಸಂಸದ ಯದುವೀರ್, ಶಾಸಕರುಗಳಾದ ಎ.ಮಂಜು, ಜಿ.ಡಿ.ಹರೀಶ್ ಗೌಡ, ಡಿ.ರವಿಶಂಕರ್ ಸಭೆ ನಡೆಸಿ ಮಾತನಾಡಿದ್ದೇವೆ ಎಂದರು.

ತಂಬಾಕು ಮಂಡಳಿಯವರಿಗೆ ಖರೀದಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಕೇಂದ್ರ ಹಣಕಾಸು ಸಚಿವರು, ವಾಣಿಜ್ಯ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದೇವೆ. ಒಟ್ಟಾರೆ ನಮಗೆ ರೈತರ ಹಿತ ಮುಖ್ಯವಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News