ಜಿ.ಟಿ. ದೇವೇಗೌಡರಿಗೆ ನಿಯತ್ತೂ ಇಲ್ಲ, ಪಕ್ಷನಿಷ್ಠೆಯೂ ಇಲ್ಲ : ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ
ಮೈಸೂರು, ಫೆ. 8: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರಿಗೆ ನಿಯತ್ತೂ ಇಲ್ಲ, ಪಕ್ಷನಿಷ್ಠೆಯೂ ಇಲ್ಲ. ಅವರು ಜೆಡಿಎಸ್ ಜೊತೆಯೂ ಇಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಟಿ. ದೇವೇಗೌಡರು ಬೇರೆ ಬೇರೆ ಮಹಾನ್ ನಾಯಕರ ಜೊತೆಗೆ ಇದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದೂ ಇಲ್ಲದವರನ್ನು ನಾವು ಜೊತೆಯಲ್ಲಿ ಇಟ್ಟುಕೊಳ್ಳಬೇಕೇ? ಎಂದು ಪ್ರಶ್ನಿಸಿದರು.
ಇನ್ನು ಮುಂದೆ ಪದೇ ಪದೇ ಜಿ.ಟಿ. ದೇವೇಗೌಡರ ಹೆಸರನ್ನು ಪ್ರಸ್ತಾಪಿಸಬೇಡಿ. ನನ್ನ ಮನಸ್ಸಿಗೆ ಬಹಳ ನೋವಾಗುವ ಘಟನೆಗಳು ನಡೆದಿವೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಹಳಷ್ಟು ಜನ ಇದ್ದಾರೆ. ಅಲ್ಲಿ ಯಾರೇ ನಿಂತರೂ ಗೆಲ್ಲುತ್ತಾರೆ. ನನಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧವಿದೆ. ಇವರು ಬಹಳಷ್ಟು ಜನರನ್ನು ಮೆರೆಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಈಗ ಯಾರೋ ಒಬ್ಬರನ್ನು ಮೆರೆಸಲು ಹೊರಟಿದ್ದಾರೆ. ಅವರಿಗೆ ನಿಯತ್ತು ಇದೆಯೇ? ಪಕ್ಷದ ಕಾರ್ಯಕರ್ತರಿಗೆ ನೋವಾಗಬಾರದು ಎಂಬ ಕಾರಣಕ್ಕೆ ಈ ವಿಷಯ ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲ 11 ಕ್ಷೇತ್ರಗಳಲ್ಲಿ ಜೆಡಿಎಸ್–ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ಹೇಳಿದರು.
“ರಾಜ್ಯದ ಇಂದಿನ ಪರಿಸ್ಥಿತಿ ನೋಡಿದರೆ ನಾನು ಇಲ್ಲೇ ಇರಬೇಕಿತ್ತು ಎನ್ನಿಸುತ್ತಿದೆ. ಕಾಲ ಬಂದಾಗ ಮತ್ತೆ ರಾಜ್ಯಕ್ಕೆ ಬರುತ್ತೇನೆ.”
- ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ