ಮೈಸೂರು ವಿಶ್ವವಿದ್ಯಾನಿಲಯ 106ನೇ ಘಟಿಕೋತ್ಸವ
ಪಿಂಚಣಿ ಕೊಡಲಾಗದಂತಹ ಸ್ಥಿತಿಗೆ ಮೈಸೂರು ವಿವಿ ಬಂದಿರುವುದು ನೋವಿನ ಸಂಗತಿ : ಡಾ.ಎಂ.ಸಿ.ಸುಧಾಕರ್
ಮೈಸೂರು : ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದ 106 ಘಟಿಕೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ಸಂಭ್ರಮಿಸಿದ್ದಾರೆ.
ಕ್ರಾಫರ್ಡ್ ಭವನದಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ಹಿರಿಯ ಚಿತ್ರ ನಿರ್ದೇಶಕ ಎಸ್. ವಿ.ರಾಜೇಂದ್ರ ಸಿಂಗ್ ಬಾಬು, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ. ಶಾಮ್ ಭಟ್ ಹಾಗೂ ಶಿಕ್ಷಣ ತಜ್ಞ ಮತ್ತು ಪರಿಸರವಾದಿ ಪಿ. ಜಯಚಂದ್ರ ರಾಜು ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವದಲ್ಲಿ ಈ ಸಲವೂ ಚಿನ್ನದ ಪದಕ ಬೇಟೆಯಲ್ಲಿ ವನಿತೆಯರು ಪಾರುಪತ್ಯ ಮೆರೆದರು. ಪ್ರತಿ ವರ್ಷವೂ ಮಹಿಳೆಯರು ಚಿನ್ನದ ಪದಕ ನಗದು ಬಹುಮಾನ ಗಳಿಸಿ ಮೇಲುಗೈ ಸಾಧಿಸುತ್ತಿದ್ದರು. ಅದು ಈ ವರ್ಷವೂ ಮುಂದುವರಿಯಿತು. ಒಟ್ಟು 30,966 ಅಭ್ಯರ್ಥಿಗಳು ವಿವಿಧ ವಿಷಯಗಳಲ್ಲಿ ಪದವಿ ಪ್ರದಾನವಾಯಿತು. ಅವರಲ್ಲಿ 18, 612 ಮಹಿಳೆಯರು ಮತ್ತು 12,354 ಪುರುಷರು.
452 ಅಭ್ಯರ್ಥಿಗಳು ಪಿಎಚ್‌ಡಿ ಪದವಿ ಪಡೆದರು. 449 ಪದಕಗಳು ಮತ್ತು 197 ಬಹುಮಾನಗಳನ್ನು 213 ಅಭ್ಯರ್ಥಿಗಳು ಪಡೆದುಕೊಂಡರು. ಇದರಲ್ಲಿ 161 ಮಹಿಳೆಯರೇ ಪಾರುಪತ್ಯ ಸಾಧಿಸಿದರು. 5,796 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಮತ್ತು 24,721 ಸ್ನಾತಕ ಪದವಿ ಪಡೆದರು.
ಪದವಿ ಪ್ರಧಾನ ಬಳಿಕ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಪಿಂಚಣಿ ಕೊಡಲಾಗದಂತಹ ದುಸ್ಥಿತಿಗೆ ಮೈಸೂರು ವಿಶ್ವವಿದ್ಯಾಲಯ ಬಂದಿರುವುದು ನೋವಿನ ಸಂಗತಿ. ರಾಜ್ಯದ ಮೊದಲ ವಿಶ್ವವಿದ್ಯಾನಿಲಯ ಎಂಬ ಹಿರಿಮೆ ಹೊಂದಿರುವ ಮೈಸೂರು ವಿವಿ, ಹಾಸನ, ಮಂಡ್ಯ, ಚಾಮರಾಜನಗರದಲ್ಲಿ ಹೊಸ ವಿಶ್ವವಿದ್ಯಾನಿಲಯ ಮಾಡುವ ಮೂಲಕ ಹರಿದುಹಂಚಿಹೋಗಿದೆ. ಜತೆಗೆ, ಪಾಶ್ಚಿಮಾತ್ಯದ ಅನುಕರಣೆ, ವಿವಿ ಸ್ಥಿತಿಗತಿ, ಶುಲ್ಕ ಸಂಗ್ರಹ ಸೇರಿದಂತೆ ವಿವಿಧ ಸಂಗತಿಗಳನ್ನು ಯಾವುದನ್ನೂ ಗಮನಿಸದೆ, ಕೇವಲ ಪ್ರಚಾರ ಮತ್ತು ಭಾವನೆ ಆಧಾರದಲ್ಲಿ ಹೊಸ ವಿಶ್ವವಿದ್ಯಾನಿಲಯ ರಚನೆ ಮಾಡಲಾಗಿದೆ ಎಂದು ಹಿಂದಿನ ಬಿಜೆಪಿ ಸರಕಾರದ ಕ್ರಮದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಆರ್ಥಿಕ ಸಂಕಷ್ಟಕ್ಕೆ ಮೈಸೂರು ವಿವಿಯೊಂದಿಗೆ ಧಾರವಾಡದ ಕರ್ನಾಟಕ ವಿವಿ, ಮಂಗಳೂರು ವಿವಿ, ಇದೀಗ ಶಿವಮೊಗ್ಗದ ಕುವೆಂಪು ವಿವಿ ಸಹ ಸೇರ್ಪಡೆಗೊಂಡಿದೆ. ಸಾರ್ವಜನಿಕ ವಿವಿಗಳು ಯಾರಿಗೆ ಸೇವೆ ಕೊಡುತ್ತಿವೆ ಎಂಬದನ್ನು ಮೊದಲು ಅರ್ಥ ಮಾಡಿಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ. ಮೈಸೂರು ವಿವಿ ಪಿಂಚಣಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ವಿವಿ ಉಳಿಸಲು ಸಹ ಸರಕಾರ ಸಕಾರಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಿದೆ. ಇದಕ್ಕೆ ಬೆಂಬಲ ಕೊಡಬೇಕು ಎಂದೂ ಕೋರಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಲ್ಲೋಟ್ ಪದವಿ ಪ್ರದಾನ ಮಾಡಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಎಸ್.ಸೋಮನಾಥ್ ಘಟಿಕೋತ್ಸವ ಭಾಷಣ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವರಾದ ಎಂ.ಕೆ.ಸವಿತಾ, ಪ್ರೊ.ಎನ್. ನಾಗರಾಜು ಹಾಜರಿದ್ದರು.