ಅಹಿಂದ ಎಂಬುದು ಕೇವಲ ಮತಬ್ಯಾಂಕ್ ಅಲ್ಲ: ಚಿಂತಕ ಶಿವಸುಂದರ್
ಮೈಸೂರು: ಅಹಿಂದ ಎಂಬುದು ಕೇವಲ ಮತಬ್ಯಾಂಕ್, ಅಲ್ಲ, ಅದೊಂದು ತತ್ವ ಮತ್ತು ಆದರ್ಶವಾಗಿದ್ದು, ಅಹಿಂದ ವರ್ಗವನ್ನು ಜಾಗೃತಗೊಳಿಸಬೇಕಿದೆ ಎಂದು ಚಿಂತಕ ಶಿವಸುಂದರ್ ತಿಳಿಸಿದರು.
ನಗರದ ಜೆ ಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಶನಿವಾರ ಅಹಿಂದ ಚಳುವಳಿ ವತಿಯಿಂದ ಅಯೋಜಿಸಿದ್ದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯದ ಜಾಗೃತಿ ಸಭೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಅಹಿಂದ ವರ್ಗವನ್ನು ರಾಜಕೀಯ ಪಕ್ಷಗಳು ಮತ ಬ್ಯಾಂಕ್ ಎಂದುಕೊಂಡಿವೆ. ಆದರೆ ಅಹಿಂದ ಎಂಬುದು ತತ್ವ ಆದರ್ಶ, ಅಹಿಂದ ವರ್ಗ ಗಟ್ಟಿಯಾಗಿ ನಿಂತರೆ ರಾಜಕೀಯ ಬದಲಾವಣೆ ಮಾಡುವ ಶಕ್ತಿಯಿದೆ. ಹಾಗಾಗಿ ಅಹಿಂದ ವರ್ಗವನ್ನು ಜಾಗೃತಗೊಳಿಸಬೇಕಿದೆ ಎಂದು ಹೇಳಿದರು.
ಎಸ್.ಐ.ಆರ್ ಮೂಲಕ ಅಹಿಂದ ವರ್ಗಗಳ ಮತಗಳನ್ನು ಬೇರ್ಪಡಿಸುವ ಷಡ್ಯಂತರ ನಡೆಯುತ್ತಿದೆ. ಎಸ್ ಐ ಆರ್ ಎಂದರೆ ಕೇವಲ ಮತಪಟ್ಟಿಯ ತೀವ್ರ ಪರಿಷ್ಕರಣೆ ಮಾತ್ರವಲ್ಲ, ಅದು ಅಷ್ಟೆ ಆಗಿದ್ದರೆ ಇದಕ್ಕೆ ಯಾರ ವಿರೋಧವೂ ಇರುತ್ತಿರಲಿಲ್ಲ. ಸರ್ಕಾರವೇ ಯಾರು ಮತ ಹಾಕಬೇಕು ಎನ್ನುವುದನ್ನ ಆಯ್ಕೆ ಮಾಡುವ ವಿಕೃತ ಫ್ಯಾಸಿಸ್ಟ್ ಪ್ರಕ್ರಿಯೆ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹೇಳಿದಂತೆ ದೇಶ ಆಳುವ ರಾಜ ಮತಪೆಟ್ಟಿಗೆಯಲ್ಲಿ ಹುಟ್ಟಬೇಕು ಎನ್ನುವುದು ಅವರ ಆಶಯವಾಗಿತ್ತು. ಅದಕ್ಕಾಗಿ ಎಲ್ಲ ನಾಗರೀಕರಿಗೆ ಸಂವಿಧಾನವು ಮತ ಹಾಕುವ ಹಕ್ಕನ್ನು ನೀಡಿರುವುದನ್ನು ನಾವೆಲ್ಲ ಅರಿಯಬೇಕು. ಆರ್ಟಿಕಲ್ 3 ರಿಂದ 12 ರವರೆಗೆ ಹೇಳುವಂತೆ ಈ ದೇಶದಲ್ಲಿ ಹುಟ್ಟಿದ ಎಲ್ಲರೂ ನಾಗರೀಕರು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟ ಜನರಿಗೆ ಸಂವಿಧಾನದಲ್ಲಿ ಮತ ಹಾಕುವುದಕ್ಕೆ ಯಾವ ವಿರೋಧವು ಇಲ್ಲವೆಂಬಂತೆ ದಾಖಲಿಸಲಾಗಿದೆ ಎಂದು ಹೇಳಿದರು.
1960 ರಲ್ಲಿ ಮತದಾರರ ಪಟ್ಟಿ ಸಿದ್ದಪಡಿಸುವ ಪರಿಷ್ಕರಣಾ ನಿಯಮಗಳು ಜಾರಿಗೆ ಬಂದಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಿಷ್ಕರಣೆ ಆರಂಭವಾಯಿತು. ಹದಿನೆಂಟು ವರ್ಷ ತುಂಬಿದ ಬಳಿಕ ಮತದಾನ ಮಾಡುವ ಹಕ್ಕನ್ನು ನೀಡುವಂತದ್ದು ಸರ್ಕಾರದ್ದು ಆಗಿರುತ್ತದೆ ಎಂಬುದನ್ನು ನಾವು ತಿಳಿಯಬೇಕಿದೆ. ಚುನಾವಣಾ ಅಯೋಗ ಮೊದಲ ಹಂತದಲ್ಲಿ ಮ್ಯಾಪಿಂಗ್ ನಡೆಸಲಿದೆ. 2002 ರಲ್ಲಿ ಆಗಿದ್ದ ಪರಿಷ್ಕರಣೆಯಲ್ಲಿ ಮತಪಟ್ಟಿಯಲ್ಲಿ ಹೆಸರು ಇತ್ತು ಎನ್ನುವುದು ಹೋಲಿಕೆ ಆದರೆ ಮಾತ್ರ ಈ ದೇಶದ ನಾಗರೀಕರಾಗಲು ಸಾಧ್ಯ, ಆದರೆ ನಮ್ಮ ಬಳಿ ಹೆಚ್ಚು ದಾಖಲೆ ಇಲ್ಲ , 2002 ರ ನಂತರ ಹುಟ್ಟಿದವರು ತನ್ನ ಅಪ್ಪ ಅಮ್ಮನ ಹೆಸರು ಇರಬೇಕಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಈಗಾಗಲೇ ಮ್ಯಾಪಿಂಗ್ ಕಾರ್ಯ ನಡೆದಿದ್ದು ತಮಿಳುನಾಡಿನ ಎಂಟು ಕೋಟಿ ಮತದಾರರ ಪೈಕಿ 98 ಲಕ್ಷ ಜನರ ಮ್ಯಾಪಿಂಗ್ ಆಗಿಲ್ಲ ಹಾಗೂ ಹೆಸರಿನಲ್ಲಿ ಸ್ವಲ್ಪ ಬದಲಾವಣೆ ಆದರೂ ನಮ್ಮಹೆಸರು ಮ್ಯಾಪ್ ಆಗಿರುವುದಿಲ್ಲ ಎಂದು ತಿಳಿಸಿದರು.
ವಿಧಾನ ಸಭೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿ ಮಾತನಾಡಿ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳು ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿಲ್ಲ, ಈ ವರ್ಗಗಳಲ್ಲಿನ ಬಹುತೇಕರು ಬಡತನ ರೇಖೆಗಿಂತ ಕೆಳಗೆ ಶೋಷಿತ ಸಮುದಾಯವಾಗಿಯೇ ಉಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿಜಯ್ ಕುಮಾರಿ ಅರಸ್, ರಾಜ್ಯ ಜಂಟಿ ಕಾರ್ಯದರ್ಶಿ ವೆಂಕಟೇಶ್ ಗೌಡ, ಮಾಜಿ ಸಚಿವ ಕೋಟೆ ಶಿವಣ್ಣ, ಎಸ್ ಪ್ರತಿಮಾ, ಮುನಿರಾಜ್, ದೇವರಾಜ್ ಪಾಳೇಗಾರ್, ಸುರೇಂದ್ರ,ತಾಜ್ ಪಾಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.