ಹೊಸ ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆ ಆಗಿಲ್ಲ: ಅಶೋಕ್
ಮೈಸೂರು : 'ಬಿಜೆಪಿಯಲ್ಲಿ ಹೊಸ ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆಯೇ ಆಗಿಲ್ಲ. ದಿಲ್ಲಿಯಲ್ಲಿ ನಾನಿದ್ದಾಗ ಈ ಬಗ್ಗೆ ಚರ್ಚೆಯೇ ಆಗಿಲ್ಲ' ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, 'ದೇಶದ ಇತರ ರಾಜ್ಯಗಳಲ್ಲಿ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ನಮ್ಮ ರಾಜ್ಯದ ಹೊಸ ಅಧ್ಯಕ್ಷರ ಬಗ್ಗೆ ಚರ್ಚೆ ನಡೆದಿಲ್ಲ. ಉತ್ತರ ಪ್ರದೇಶ, ಗುಜರಾಜತ್ ರಾಜ್ಯಾಧ್ಯಕ್ಷರ ನೇಮಕವಾಗುವಾಗ ನಮ್ಮದು ಆಗಲಿದೆ. ನನಗೆ ಮೂರು ತಿಂಗಳಿಗೊಮ್ಮೆ ರಾಜ್ಯದ ವರದಿ ಕೊಡಲು ವರಿಷ್ಠರು ಹೇಳಿದ್ದಾರೆ. ಹೀಗಾಗಿ ದಿಲ್ಲಿಗೆ ತೆರಳಿ ವರದಿ ನೀಡುತ್ತಿದ್ದೇನೆ' ಎಂದರು.
ಸಿಎಂ ಬದಲಾವಣೆ ಖಚಿತ:
ರಾಜ್ಯದಲ್ಲಿ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾಗುವುದು ಖಚಿತ. ಈ ಬಗ್ಗೆ ನಾನು ವಿಧಾನಸಭೆಯಲ್ಲೇ ಹೇಳಿದ್ದೇನೆ. ಅವರ ಬದಲಾವಣೆ ಬಗ್ಗೆ ಅಗ್ರಿಮೆಂಟ್ ಆಗಿದೆ. ಈ ಬಗ್ಗೆ ಅವರ ಸಚಿವರೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆಯಾಗಲಿದೆ, ಹೊಸ ಕ್ರಾಂತಿಯಾಗಲಿದೆ ಎಂದು ಒಬ್ಬ ಸಚಿವರು ಹೇಳಿದರೆ, ಮತ್ತೊಬ್ಬರು ಸ್ವಲ್ಪ ಕ್ರಾಂತಿ ಆಗಲಿದೆ ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ. ದಸರಾ ಉದ್ಘಾಟನೆಯನ್ನು ಹೊಸ ಮುಖ್ಯಮಂತ್ರಿ ಮಾಡಲಿದ್ದಾರೆ ಎಂದು ಅಶೋಕ್ ಹೇಳಿದರು.