×
Ad

ಬಿಜೆಪಿಯದ್ದು ಧರ್ಮಯಾತ್ರೆ ಅಲ್ಲ, ರಾಜಕೀಯ ಯಾತ್ರೆ: ಸಿಎಂ ಸಿದ್ದರಾಮಯ್ಯ

"ಸೌಜನ್ಯಾ ಪ್ರಕರಣದಲ್ಲಿ ಬಿಜೆಪಿಗರು ಯಾರ ಪರ ಇದ್ದಾರೆ?"

Update: 2025-09-02 12:00 IST

ಮೈಸೂರು: ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮ ಯಾತ್ರೆಯಲ್ಲ, ರಾಜಕೀಯ ಯಾತ್ರೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿ ಈಗ ಎನ್ಐಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ ಮೃತದೇಹಗಳು ಸಿಗದೇ ಹೋದಾಗ ಒತ್ತಾಯಿಸುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಸತ್ಯ ಹೊರಬರಲಿ ಎಂದು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ನಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಬೇಕೆಂದಿದ್ದಾರೆ. ಎಸ್ಐಟಿ ತನಿಖೆ ಸ್ವತಂತ್ರವಾಗಿ ಮಾಡುತ್ತಿದ್ದು ನಾವ್ಯಾರು ಅದರಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸತ್ಯ ಹೊರಬರಬೇಕು ಎಂದರು.

ಎಲ್ಲಾ ವಿಷಯಗಳನ್ನೂ ರಾಜಕೀಯವಾಗಿ ಬಳಸಲು ಹೋಗಬಾರದು

ಹೊರದೇಶಗಳಿಂದ ಇದಕ್ಕಾಗಿ ಹಣ ಬಂದಿದೆ ಎಂಬ ಬಿಜೆಪಿ ಆರೋಪದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಬಿಜೆಪಿಯವರಿಗೆ ಹಣ ಬಂದಿದೆ ಎಂದರು. ವಿರೋಧಗಳು ಟೀಕೆಯನ್ನು ಮಾಡಲಿ. ಆದರೆ ಎಲ್ಲಾ ವಿಷಯಗಳನ್ನೂ ರಾಜಕೀಯವಾಗಿ ಬಳಸಲು ಹೋಗಬಾರದು. ಇದರಲ್ಲಿ ಸತ್ಯವಿಲ್ಲ ಎಂದರು.

ಸೌಜನ್ಯಾ ಪ್ರಕರಣ: ಬಿಜೆಪಿಗರು ಯಾರ ಪರ ಇದ್ದಾರೆ?

ಸೌಜನ್ಯಾ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಸಿಬಿಐ ಕೇಂದ್ರ ಸರಕಾರದ ಅಧೀನದಲ್ಲಿದ್ದು, ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯಾ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪವಿದೆ. ಹಾಗಾದರೆ ಬಿಜೆಪಿ ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು. ಒಂದು ಕಡೆ ವೀರೇಂದ್ರ ಹೆಗಡೆಯವರ ಪರ ಎನ್ನುತ್ತಾರೆ ಮತ್ತೊಂದಡೆ ಸೌಜನ್ಯಾ ಪರ ಎನ್ನುತ್ತಾರೆ ಎಂದು ಹೇಳಿದರು.

ಒಂದು ಕಡೆ ವೀರೇಂದ್ರ ಹೆಗ್ಗಡೆಯವರಿಗೆ ಜೈಕಾರ ಹಾಕುತ್ತಾರೆ ಮತ್ತೊಂದು ಕಡೆ ಸೌಜನ್ಯಾ ಪರ ಇರುವುದಾಗಿ ಹೇಳುತ್ತಾರೆ. ನಿಜವಾಗಿಯೂ ಇವರು ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು.

ಅಶೋಕ್ ಸದನದಲ್ಲಿ ಬೇರೆಯೇ ಚರ್ಚೆ ಮಾಡಿದ್ದರು

ಚಿನ್ನಯ್ಯ ಎಂಬ ವ್ಯಕ್ತಿಯನ್ನು ಕರೆತಂದಿರುವುದೇ ಕಾಂಗ್ರೆಸ್ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಸದನದಲ್ಲಿ ಈ ಬಗ್ಗೆ ಚರ್ಚೆಯಾದಾಗ ಬೇರೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಶಾಸಕ ಸುನೀಲ್ ಕುಮಾರ್, ಈಗ ಬೇರೆ ಹೇಳುತ್ತಿದ್ದಾರೆ. ದಿನಕ್ಕೊಂದು ಹೇಳಿಕೆ ಕೊಡಬಾರದು. ಅಸತ್ಯದ ಮೇಲೆ ಚರ್ಚೆ ಮಾಡಿದರೆ ಹೀಗೆ ಆಗುವುದು ಎಂದರು.

ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಅಪರಾಧ

12 ವರ್ಷಗಳ ಹಿಂದೆ ಅಪಹರಣವಾಗಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಎಸ್ಐಟಿಗೆ ಮಹಿಳೆಯೊಬ್ಬರು ದೂರ ನೀಡಿರುವ ಬಗ್ಗೆ ಮಾತನಾಡಿದ ಸಿಎಂ, ಇದನ್ನು ಸಿಬಿಐ ತನಿಖೆ ನಡೆದಾಗ ಏಕೆ ಹೇಳಲಿಲ್ಲ? ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಅಪರಾಧ ಎಂದರು.

ಸೌಜನ್ಯಾ ಪ್ರಕರಣದ ಮರು ತನಿಖೆ: ಸೌಜನ್ಯ ತಾಯಿ ತೀರ್ಮಾನಿಸಬೇಕು

ಸೌಜನ್ಯಾ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪನ್ನು ನೋಡಿಲ್ಲ. ಈ ಬಗ್ಗೆ ಸೌಜನ್ಯಾ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News