ನಮ್ಮಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ : ದಿನೇಶ್ ಗುಂಡೂರಾವ್
ಮೈಸೂರು : ನಮ್ಮಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ, ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿರುವಂತೆ ಹೈಕಮಾಂಡ್ ಸೂಚನೆಯಂತೆ ಎಲ್ಲರೂ ನಡೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಅಷ್ಟೇ ಮಾಡುತ್ತಿರುವುದು. ಅಲ್ಲಿ ರಾಜಕೀಯ ಸೇರಿದಂತೆ ಎಲ್ಲಾ ವಿಚಾರವೂ ಚರ್ಚೆಯಾಗಲಿದೆ. ಕೆಲವೊಬ್ಬರ ಹೇಳಿಕೆಗಳು ಬಿಟ್ಟರೆ ನಮ್ಮಲ್ಲಿ ಯಾವುದೇ ಭಿನ್ನಮತ, ಗುಂಪುಗಾರಿಕೆಯಾಗಲಿ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯಾ ಸಮುದಾಯಗಳು ತಮಗೆ ಬೇಕಾದಂತೆ ಹೇಳಬಹುದು. ಅವರ ವೈಯಕ್ತಿಕ ಹೇಳಿಕೆಗಳು ನಮ್ಮ ಪಕ್ಷದ ಮೇಲೆ ಪರಿಣಾಮ ಬೀರಲ್ಲ, ಅಂತಿಮವಾಗಿ ನಮ್ಮ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದರು.
ಕೆಲವರ ಹೇಳಿಕೆಗಳು ಪಕ್ಷಕ್ಕೆ ಮತ್ತು ಸರಕಾರಕ್ಕೆ ಒಳ್ಳೆಯದಲ್ಲ, ಎರಡೂವರೆ ವರ್ಷದಿಂದಲೂ ಅಧಿಕಾರ ಹಂಚಿಕೆ ಗೊಂದಲ ಎಂದು ಹೇಳುತ್ತಲೇ ಇದ್ದಾರೆ. ನವೆಂಬರ್ ಕ್ರಾಂತಿ ಎಂದು ಹೇಳಿದರು. ಆದರೆ ಯಾವುದೇ ಕ್ರಾಂತಿಯೂ ಇಲ್ಲ, ಗೊಂದಲವೂ ಇಲ್ಲ. ಸಿಎಂ, ಡಿಸಿಎಂ ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.