ವಸಂತ ಗಿಳಿಯಾರ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್
ವಸಂತ ಗಿಳಿಯಾರ್
ಮೈಸೂರು: ವಸಂತ ಗಿಳಿಯಾರ್ ವಿರುದ್ಧ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ ದೂರು ನೀಡಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಾನು ಒಡನಾಡಿ ಸೇವಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ನಿರ್ದೇಶಕರಲ್ಲಿ ಒಬ್ಬನಾಗಿದ್ದು, 35 ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಕಾನೂನು ಬದ್ಧವಾಗಿ ಸರಕಾರಿ ಇಲಾಖೆಗಳ ಜತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಧರ್ಮಸ್ಥಳ ಗ್ರಾಮದಲ್ಲಿ ಸೌಜನ್ಯಾ ಎಂಬ ಹುಡುಗಿಯ ಅಪಹರಣ, ಅತ್ಯಾಚಾರ, ಕೊಲೆಗೆ ಯಾವುದೇ ನ್ಯಾಯ ಸಿಗದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಸ್ವಾಭಾವಿಕವಾಗಿ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಒಡನಾಡಿ ಸೇವಾ ಸಂಸ್ಥೆಯ ನಾನು ಸಂವಿಧಾನಬದ್ಧವಾಗಿ ಹೋರಾಟ ಮಾಡುತ್ತಿದ್ದೇನೆ. ಉಡುಪಿ ಜಿಲ್ಲೆಯ ವಸಂತ ಗಿಳಿಯಾರ್(38) ಎಂಬ ವ್ಯಕ್ತಿ, ನನ್ನನ್ನು ಕ್ರೈಸ್ತ ಧರ್ಮದವನೆಂದು ಗುರುತಿಸಿ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹಿಂದೂ ಧರ್ಮ ಹಾಗೂ ದೇವಾಲಯ ಒಡೆಯಲು ಬಂದವನು ಎಂದು ಆರೋಪ ಮಾಡಿದ್ದಾರೆ. ತನ್ನ ಆಧಾರ ರಹಿತ ಭಾಷಣಗಳ ಮೂಲಕ ಧರ್ಮ ಧರ್ಮಗಳ ನಡುವೆ ಅಶಾಂತಿ ಉಂಟು ಮಾಡುತ್ತಿರುವ ಮತ್ತು ನನ್ನ ವೈಯುಕ್ತಿಕ ಚಾರಿತ್ರ್ಯವಧೆ ಮಾಡುತ್ತಿರುವ ವಸಂತ ಗಿಳಿಯಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.