ಹುಣಸೂರು | ಪ್ರಗತಿಪರ ಸಂಘಟನೆಗಳಿಂದ ಮನುಸ್ಮೃತಿ ದಹನ
ಹುಣಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಸಂಸ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಗರ ಸಂವಿಧಾನ ವೃತ್ತದಲ್ಲಿ ಮನುಸ್ಮೃತಿಯನ್ನು ದಹಿಸಲಾಯಿತು.
ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಅಂಬೇಡ್ಕರ್ ಚಿರಾಯುವಾಗಲಿ, ಜೀವ ವಿರೋಧಿ ಮನುಸ್ಮೃತಿಗೆ ಧಿಕ್ಕಾರ. ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಜಯವಾಗಲಿ ಎಂದು ಮುಂತಾದ ಘೋಷಣೆ ಕೂಗಿ ಮನುಸ್ಮೃತಿಯನ್ನು ದಹಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಹಿರಿಯ ಹೋರಾಟಗಾರ ಜೆ.ಮಹದೇವು ಮಾತನಾಡಿ, ಜಾತಿ ವ್ಯವಸ್ಥೆಗೆ ಮತ್ತು ಅಸ್ಪೃಶ್ಯತೆಗೆ ಮುನ್ನುಡಿ ಬರೆದಿದ್ದ ಮನುಸ್ಮೃತಿಯನ್ನು ಬಹುಜನರಿಗೆ ಮಾರಕವಾಗಿದೆ ಎಂದು ಅರಿತ್ತಿದ್ದ ಅಂಬೇಡ್ಕರ್ ಅಂದೇ ಸುಟ್ಟು ಹಾಕಿದ್ದರು. ಆದರೂ ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆ ಅಸ್ಪೃಶ್ಯತೆ, ಪಾಳೇಗಾರಿಕೆ ಸಂಸ್ಕೃತಿ, ಇನ್ನು ಜೀವಂತವಾಗಿದ್ದು ಹೆಚ್ಚು ಹೆಚ್ಚು ಜನಪರ ಸಂಘಟನೆಗಳು ಸಂಘಟಿತರಾಗಿ ಇದನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದರು.
ಜಾತಿ ವ್ಯವಸ್ಥೆ ವಿರುದ್ಧ ಅಂದೇ ಧ್ವನಿ ಎತ್ತಿದ್ದ ಅಂಬೇಡ್ಕರ್ ಸಂವಿಧಾನದ ಮೂಲಕ ಸಮ ಸಮಾಜದ ಕನಸು ಕಂಡಿದ್ದರು. ಆದರೆ, ಇಲ್ಲಿನ ಕೋಮುವಾದಿ ಶಕ್ತಿಗಳು ಮನುಸ್ಮೃತಿಯನ್ನು ಮತ್ತೊಮ್ಮೆ ಸಮಾಜದ ಮೇಲೆ ಏರಲು ಹವಣಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಸಂಸ ತಾಲೂಕು ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಸಿಪಿಐ(ಎಂ) ಮುಖಂಡ ವಿ.ಬಸವರಾಜು ಕಲ್ಕುಣಿಕೆ ಮಾತನಾಡಿದರು.
ದಸಂಸ ನಗರ ಸಂಚಾಲಕ ರಾಜು ಚಿಕ್ಕಹುಣಸೂರು, ತಾಸಂ ಸಂಚಾಲಕ ಮುತ್ತು ರಾಯನ ಹೊಸಳ್ಳಿ ಶಿವರಾಜು, ಜಿಲ್ಲಾ ಸಂಯೋಜಕ ಪ್ರಕಾಶ್, ಖಜಾಂಚಿ ಸಿದ್ದೇಶ್ ಅತ್ತಿಕುಪ್ಪೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೀರನಹಳ್ಳಿ ಬಾಲಸುಂದರ್, ದಸಂಸ ತಾಲೂಕು ಮಹಿಳಾ ಸಂಚಾಲಾಕಿ ರುಕ್ಮಿಣಿ, ಹಳೇಪುರ ಕೃಷ್ಣ, ಚಲುವರಾಜು, ಸೋಮಯ್ಯ ತರಿಕಲ್ಲು ಕಿಟ್ಟಪ್ಪ, ಕೆಇಬಿ ರಾಜಪ್ಪ, ಪ್ರೊ. ಮಹದೇವ್, ಗಿರೀಶ್ ಬಿಳಿಕೆರೆ, ನಾರಾಯಣ, ವಕೀಲ ಅಶೋಕ್, ಪಾಸ್ಟಾರ್ ಸುರೇಶ್ ಕುಮಾರ್ ಕೆಎಂ ವಾಡಿ, ಸುಂದರ್ ಹೊಸಕೋಟೆ ಮುಂತಾದವರಿದ್ದರು. ಸಭೆಯಲ್ಲಿ ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಗರ್ಭಿಣಿ ಮಾನ್ಯ ಪಾಟೀಲ್ ಅವರ ಅಮಾನುಷ ಕೊಲೆಯನ್ನು ತೀವ್ರವಾಗಿ ಖಂಡಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.