×
Ad

ಕೇಂದ್ರ, ರಾಜ್ಯ ಸರಕಾರಗಳು ರೈತ ವಿರೋಧಿ : ಬಡಗಲಪುರ ನಾಗೇಂದ್ರ

ಕೆ.ಎಸ್.ಪುಟ್ಟಣ್ಣಯ್ಯ 76ನೇ ಜನ್ಮದಿನಾಚರಣೆ, ರೈತ ಸಮಾವೇಶ

Update: 2025-12-24 00:49 IST

ಮೈಸೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿಯಾಗಿವೆ. ಕರ್ನಾಟಕದಲ್ಲಿ ಆಡಳಿತ ಪಕ್ಷ ರೈತರ ಪರವಾಗಿಲ್ಲ. ವಿರೋಧ ಪಕ್ಷ ಸತ್ತಿದೆ. ರೈತ, ದಲಿತ, ಕಾರ್ಮಿಕ ಸಂಘಟನೆಗಳು ಒಟ್ಟಾಗಬೇಕು. ಹಸಿರು, ನೀಲಿ, ಕೆಂಪು ಬಾವುಟಗಳು ವಿಧಾನಸೌಧಕ್ಕೆ ಹೋಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

ವಿಶ್ವ ರೈತ ದಿನಾಚರಣೆ ಮತ್ತು ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ 76ನೇ ಜನ್ಮದಿನಾಚರಣೆ ಹಾಗೂ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳು ರೈತರನ್ನು ಗುಲಾಮಗಿರಿಗೆ ತಳ್ಳುತ್ತವೆ. ಅಂಬಾನಿ, ಅದಾನಿಗೆ ಅನುಕೂಲ ಮಾಡುತ್ತವೆ. 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಸುಳ್ಳು ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ. ಆಮದು ನೀತಿಗಳು ಕರ್ನಾಟಕದ ಹತ್ತಿಬೆಳೆಗಾರರು ಮತ್ತು ಮೀನು ಬೆಳಗಾರರು, ಹೈನೋದ್ಯಮಕ್ಕೆ ಪೆಟ್ಟು ನೀಡಲಿದೆ ಎಂದು ಎಚ್ಚರಿಸಿದರು.

ಇಲವಾಲದ ಸಂತೇಮೈದಾನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಕೇಂದ್ರ ಸರಕಾರದ ಮೂರು ಕೃಷಿ ಕಾಯಿದೆಗಳನ್ನು ಸುಟ್ಟು ರೈತರು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ರೈತರು ಕೃಷಿ ಕಾಯ್ದೆಗಳ ಪ್ರತಿಯನ್ನು ಸುಟ್ಟರು. ನೆರೆದಿದ್ದ ಸಾವಿರಾರು ರೈತರು ಟವಲ್ ಬೀಸುತ್ತ ಬೆಂಬಲ ವ್ಯಕ್ತಪಡಿಸಿದರು.

ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಸಮಾರಂಭ ಉದ್ಘಾಟಿಸಿದರು. ರೈತ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ ಮಾತ ನಾಡಿದರು. ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸ ರಾಜು ಪ್ರಸ್ತಾವಿಕವಾಗಿ ಮಾತನಾಡಿದರು. 19 ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ದಸಂಸ ಮುಖಂಡರಾದ ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಒಡನಾಡಿ ಸ್ಟ್ಯಾನ್ಲಿ, ರೈತ ಮುಖಂಡರಾದ ವೀರಸಂಗಯ್ಯ, ಮೈದನಹಳ್ಳಿ ಮಹೇಶ್, ವಸಂತಕುಮಾರ್, ಮಹೇಶ್ ಪ್ರಭು, ದಾವಣಗೆರೆ ಹನುಮಂತಪ್ಪ, ಮಂಜುಳಾ ಅಕ್ಕಿ, ರವಿಕಿರಣ್ ಪೂಣಚ್ಚ, ನೇತ್ರಾವತಿ, ಗೋವಿಂದರಾಜು, ಕರಿಬಸಪ್ಪ, ಲಕ್ಷ್ಮೀನಾರಾಯಣರೆಡ್ಡಿ, ವೆಂಕಪ್ಪರಾಯರೆಡ್ಡಿ, ವೆಂಕಪ್ಪ ಕಾರುಭಾರಿ, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ಕಲ್ಲಹಳ್ಳಿ ಕುಮಾರ್ ಮುಂತಾದವರಿದ್ದರು.

"ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಭೂ ಕಳ್ಳರಿದ್ದಾರೆ. ಹಾಗಾಗಿಯೇ ಭೂ ಮಸೂದೆ ಹಿಂಪಡೆಯಲು ಮೀನಮೇಷ ಎಣಿಸುತ್ತಿದ್ದಾರೆ. ಸಮಾಜವಾದಿ, ಪ್ರೊ.ನಂಜುಂಡಸ್ವಾಮಿ ಶಿಷ್ಯರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ರೈತರಿಗೆ ಮಾಕರವಾದ ಭೂ ಸುಧಾರಣೆ, ಜಾನುವಾರ ಹತ್ಯೆ ಕಾಯಿದೆಗಳನ್ನು ಕೂಡಲೇ ಹಿಂಪಡೆಯಬೇಕು"

ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News