×
Ad

ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ದ್ವೇಷ ಭಾಷಣ ತಡೆ ಮಸೂದೆಯನ್ನು ವಿರೋಧಿಸುತ್ತಾರೆ: ಸಿದ್ದರಾಮಯ್ಯ

Update: 2025-12-22 16:09 IST

ಮೈಸೂರು, ಡಿ.22: ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ದ್ವೇಷ ಭಾಷಣ ತಡೆ ಮಸೂದೆಯನ್ನು ವಿರೋಧಿಸುತ್ತಾರೆ. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ. ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿರುವುದು ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರಿನ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ ಎಂದು ಬಿಜೆಪಿಯ ಕೆಲವರು ಆರೋಪಿಸುತ್ತಿದ್ದಾರೆ. ಈ ಕಾಯ್ದೆ ಎಲ್ಲ ಪಕ್ಷದವರಿಗೂ ಅನ್ವಯವಾಗುತ್ತದೆ. ಬಿಜೆಪಿ ಮಾತ್ರ ಏಕೆ ವಿರೋಧಿಸುತ್ತದೆ? ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆಯೇ ? ಶಾಂತಿ ಹಾಗೂ ಭಾತೃತ್ವ ಕಾಪಾಡಲು ಈ ಮಸೂದೆ ಜಾರಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸಲೆಂದು ಮಸೂದೆ ರೂಪಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವುದು ಅವರು ದ್ವೇಷ ಭಾಷಣ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ಎಂದು ಹೇಳಿದರು.

ಫೆಬ್ರವರಿ ಮಾರ್ಚ್ ತಿಂಗಳ ಗೃಹ ಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಿಎಂ ಸಿದ್ಧರಾಮಯ್ಯ ಉತ್ತರಿಸಿದರು.

23 ತಿಂಗಳು ಗೃಹಲಕ್ಷ್ಮಿ ಹಣವನ್ನು ನೀಡಲಾಗಿದೆ. ಹಣವಿಲ್ಲದೆ ಕೊಡಲು ಸಾಧ್ಯವಾಗುತ್ತಿತ್ತೇ ? ಗೃಹಲಕ್ಷ್ಮಿ ಹಣವನ್ನು ಲಪಟಾಯಿಸಲಾಗಿದೆ ಎಂಬ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುವಾಗ ಲಪಟಾಯಿಸುವ ಪ್ರಶ್ನೆ ಎಲ್ಲಿಂದ ಉದ್ಭವವಾಗುತ್ತದೆ? ಹಣವನ್ನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅದು ಒಪ್ಪಬೇಕಾದ ವಿಚಾರ. ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News