ಒಳಮೀಸಲಾತಿಯಲ್ಲೂ ನುಸುಳಿಕೊಂಡ ಮನುಸ್ಮೃತಿ : ಜ್ಞಾನ ಪ್ರಕಾಶ್ ಸ್ವಾಮೀಜಿ
ಮೈಸೂರಿನಲ್ಲಿ ಮನುಸ್ಮೃತಿ ದಹನ ದಿನಾಚರಣೆ
ಮೈಸೂರು : ಮನೆಯಲ್ಲಿ ಮನುವಾದ, ಬಾಯಲ್ಲಿ ಭೀಮವಾದ ವಿಜೃಂಭಿಸುತ್ತಿರುವಾಗ ಮನುಸ್ಮೃತಿ ಹೇಗೆ ನಾಶವಾಗುತ್ತದೆ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ವತಿಯಿಂದ ಗುರುವಾರ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಆಯೋಜಿಸಿದ್ದ 98ನೇ ವರ್ಷದ ಮನುಸ್ಮೃತಿ ದಹನ ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಮನುಸ್ಮೃತಿ ಸುಟ್ಟು 98 ವರ್ಷಗಳು ಕಳೆದರೂ ಮನುಸ್ಮೃತಿ ನಾಶವಾಗಿಲ್ಲ, ನಮ್ಮ ಮನ, ಮನೆಗಳಲ್ಲಿ ಚಿಗುರೊಡೆಯುತ್ತಿದೆ. ಸಂವಿಧಾನ ಬದ್ಧವಾದ ಹಕ್ಕನ್ನು ಮೀರಿ ಮುನ್ನುಗ್ಗುತ್ತಿದೆ. ಒಳಮೀಸಲಾತಿಯಲ್ಲೂ ಮನುಸ್ಮೃತಿ ನುಸುಳಿ ಕೆಲಸ ಮಾಡಿದೆ. ಒಳಮೀಸಲಾತಿಯ ಮರ್ಮವೇ ಮನುಸ್ಮೃತಿ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪಂಗಡ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ ಮಾತನಾಡಿ, ದಲಿತರು ನೊಂದವರ ಪರ ನಿಲ್ಲಬೇಕಾದ ಸಮುದಾಯದ ನಾಯಕರು ಧ್ವನಿ ಎತ್ತದೆ ವಿಮುಖರಾಗುತ್ತಿದ್ದಾರೆ. ನಾವು ಯಾರನ್ನು ಆಶ್ರಯಿಸಬೇಕು ಎಂಬುದೇ ತಿಳಿಯುತ್ತಿಲ್ಲ. ನಮ್ಮ ಪರವಾಗಿ ವಿಧಾನಸಭೆ ಮತ್ತು ಸಂಸತ್‌ನಲ್ಲಿ ಮಾತನಾಡಲು ಎದೆಗಾರಿಕೆ ಇರುವ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಹಿರಿಯ ವೈದ್ಯರಾದ ಡಾ.ರಂಗನಾಥಯ್ಯ, ಹಿರಿಯ ರಂಗಕರ್ಮಿ ಜನಾರ್ಧನ್ (ಜನ್ನಿ), ದಸಂಸ ಹೋರಾಟಗಾರ ಹರಿಹರ ಆನಂದಸ್ವಾಮಿ, ಹಿರಿಯ ವಕೀಲ ತಿಮ್ಮಯ್ಯ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸ ಕಾಳೇಗೌಡ ನಾಗವಾರ ವಹಿಸಿದ್ದರು. ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಂತಕ ಶಿವಸುಂದರ್ ವಿಚಾರ ಮಂಡನೆ ಮಾಡಿದರು. ಎಸ್‌ಸಿ, ಎಸ್‌ಟಿ, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ, ಲೇಖಕ ಸಿ.ಹರಕುಮಾರ್, ಮೈಸೂರು ವಿಶ್ವವಿದ್ಯಾನಿಲಯ ಸಂಶೊಧಕರ ಸಂಘದ ಉಪಾಧ್ಯಕ್ಷ ಮಲ್ಲೇಶ್ ಬಾಚಹಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಲ್ಲಹಳ್ಳಿ ಕುಮಾರ್ ನಿರೂಪಿಸಿದರೆ, ವಕೀಲ ತಿಮ್ಮಯ್ಯ ಸ್ವಾಗತಿಸಿದರು. ವಕೀಲ ಪುಟ್ಟರಸ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಲೇಖಕ ಸಿದ್ಧಸ್ವಾಮಿ, ಪ್ರಾಧ್ಯಾಪಕ ಡಾ.ಡಿ.ಆನಂದ್, ವರಹಳ್ಳಿ ಆನಂದ್, ಹಲವರು ಭಾಗವಹಿಸಿದ್ದರು.
ಮನುಸ್ಮೃತಿ ದಹನವು ಭಾರತೀಯ ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿತು. ಈ ಘಟನೆ ಶೋಷಣೆಗೊಳಗಾದ ಸಮುದಾಯಗಳ ಚಳವಳಿಗೆ ಹೊಸ ಶಕ್ತಿ ನೀಡಿತು ಮತ್ತು ಸಮಾನತೆ, ಸೋದರತ್ವ ಮತ್ತು ನ್ಯಾಯದ ಮಹತ್ವವನ್ನು ಒತ್ತಿ ಹೇಳಿತು.
-ಎನ್.ಭಾಸ್ಕರ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ
ಎಸ್‌ಐಆರ್ ಕೂಡ ಮನುಸ್ಮೃತಿಯ ಭಾಗ : ಶಿವಸುಂದರ್
ʼಅಂಬೇಡ್ಕರ್ ಮನುಸ್ಮೃತಿ ಸುಟ್ಟು 98 ವರ್ಷಗಳು ಕಳೆದರೂ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಮನುಸ್ಮೃತಿ ನಾಶವಾಗಿಲ್ಲ. ಮನುಸ್ಮೃತಿಯ ಭಾಗವೇ ಎಸ್‌ಐಆರ್. ಮನುಸ್ಮೃತಿ ಜೊತೆಗೆ ಎಸ್‌ಐಆರ್ ಅನ್ನೂ ಸುಟ್ಟು ಹಾಕಬೇಕಿದೆ. ಸಮಾನತೆಯನ್ನು ಒಪ್ಪದೆ ಅಸ್ಪೃಶ್ಯರನ್ನು ಕೀಳಾಗಿ ನೋಡುವುದೇ ಧರ್ಮಪಾಲನೆ, ದೈವಾದೇಶ ಮತ್ತು ಮಹಿಳೆಯರನ್ನು ತುಚ್ಛವಾಗಿ ಕಾಣುವುದೇ ಮನುಸ್ಮೃತಿಯ ಉದ್ದೇಶ. ಅಂತಹ ಮನುಸ್ಮೃತಿಯನ್ನು ಅಂಬೇಡ್ಕರ್ ಡಿ.25, 1927ರಂದು ಮಹಾರಾಷ್ಟ್ರದ ಮಹಾಡ್‌ನಲ್ಲಿ ಸುಟ್ಟುಹಾಕಿದರು. ಆದರೆ ಇನ್ನೂ ನಮ್ಮ ಮನೆಗಳಲ್ಲಿ ಮನುಸ್ಮೃತಿ ಆಚರಣೆಯಾಗುತ್ತಿದೆ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ನೇರವಾಗಿ ಮನುಸ್ಮೃತಿ ಜಾರಿ ಮಾಡದಿದ್ದರೂ ಹಿಂಬಾಗಿಲಿನ ಮೂಲಕ ಮನುಸ್ಮೃತಿ ಜಾರಿ ಮಾಡಲಾಗುತ್ತಿದೆʼ ಎಂದು ಚಿಂತಕ ಶಿವಸುಂದರ್ ಹೇಳಿದರು.
ಅಹಿಂದ ಪರ ಹೋರಾಟ ಮಾಡುವವರು ಹಿಂದುಳಿದ ವರ್ಗದ ಸಿಎಂ ಸ್ಥಾನದ ಪರ ಮಾತ್ರ ಹೋರಾಟ ಮಾಡದೆ ಉಳಿದ ವರ್ಗದ ಪರವೂ ಹೋರಾಟ ಮಾಡಬೇಕು. ಹಿಂದುಳಿದ ವರ್ಗದ ಮೂವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಅಲ್ಪಸಂಖ್ಯಾತ ಮತ್ತು ದಲಿತರು ಮುಖ್ಯಮಂತ್ರಿಯಾಗಿಲ್ಲ, ಅವರ ಪರವೂ ಧ್ವನಿ ಎತ್ತಬೇಕಿದೆ.
-ಸಿ.ಹರಕುಮಾರ್, ಲೇಖಕ
ಹುಬ್ಬಳ್ಳಿಯಲ್ಲಿ ಮಾನ್ಯ ಎನ್ನುವ ಹುಡುಗಿ ದಲಿತ ಸಮುದಾಯದ ವಿವೇಕಾನಂದನನ್ನು ವರಿಸಿ ಹಳ್ಳಿಗೆ ವಾಪಸ್ ಬಂದಾಗ ಗರ್ಭಿಣಿ ಮಗಳನ್ನು ತಂದೆ-ಅಮ್ಮ-ಅಣ್ಣಂದಿರೇ ಪೈಶಾಚಿಕವಾಗಿ ಕೊಲೆ ಮಾಡಿದ್ದಾರೆ. ಹೆತ್ತ ಮಗಳನ್ನು ಕೊಲ್ಲುವ ಕ್ರೌರ್ಯ ಇವರಿಗೆ ಎಲ್ಲಿಂದ ಬಂತು. ಇಂತಹ ಘಟನೆ ನಡೆಯುತ್ತಿರುವಾಗ ದೇಶದಲ್ಲಿ ಮನುಸ್ಮೃತಿ ಸತ್ತಿದೆ ಎನ್ನುವುದು ಹೇಗೆ? ಸಂವಿಧಾನದಿಂದ ಮನುಸ್ಮೃತಿಯನ್ನು ಸೋಲಿಸಿದ್ದೇವಾ ಎಂದು ಪ್ರಶ್ನಿಕೊಳ್ಳಬೇಕು.
-ಶಿವಸುಂದರ್, ಚಿಂತಕ.