ಧರ್ಮ, ಜಾತಿ, ಹಣ ಎಲ್ಲವನ್ನು ಮೀರಿದ ಆತ್ಮತೃಪ್ತಿಯ ರಾಜಕಾರಣ ಬೇಕಿದೆ : ದಿನೇಶ್ ಅಮೀನ್ ಮಟ್ಟು
ಮೈಸೂರು : ಧರ್ಮ, ಜಾತಿ, ಹಣ ಇಲ್ಲದೆ ಇವತ್ತು ರಾಜಕೀಯ ಮಾಡಲು ಸಾಧ್ಯವೇ? ಅದೆಲ್ಲವನ್ನು ಮೀರಿದ ಆತ್ಮತೃಪ್ತಿಯ ರಾಜಕಾರಣ ಬೇಕಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ಬನವಾಸಿ ತೋಟದಲ್ಲಿ ರವಿವಾರ ಪ್ರಸ್ತುತ ರಾಜಕೀಯ: ನಮ್ಮ ನಿಲುವು ವಿಚಾರ ಮಂಡನೆ ಮಾಡಿ ಅವರು ಮಾತನಾಡಿದರು.
ದೇಶದ ಕಷ್ಟ ನೋಡಿ ತಮ್ಮ ತಮ್ಮ ಕರಳು ಕಲಕಿದರೆ, ಆ ಕಷ್ಟಕ್ಕೆ ಪರಿಹಾರ ನೀಡುತ್ತೇನೆ ಎಂದು ಅನಿಸಿದರೇ ರಾಜಕೀಯಕ್ಕೆ ಬನ್ನಿ. ಇಲ್ಲ ಅಂದ್ರೆ ರಾಜಕಾರಣಕ್ಕೆ ಬರುವ ಅವಶ್ಯಕತೆ ಯಾರಿಗೂ ಬೇಡ ಎಂದು ಹೇಳಿದರು.
ದಲಿತರ ಮೇಲೆ ನಿಮಿಷಕ್ಕೆ ಹಲ್ಲೆಗಳು ನಡೆಯುತ್ತಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕಷ್ಟಗಳು ಅರ್ಥಮಾಡಿಕೊಳ್ಳುವ ರಾಜಕೀಯ ಮನಸ್ಸು ಬೇಕಾಗಿದೆ. ರಾಜಕೀಯಕ್ಕೆ ಪ್ರವೇಶ ಮಾಡುವವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಜವಹರಲಾಲ್ ನೆಹರೂ, ರಾಜ್ಯದಲ್ಲಿ ದೇವರಾಜು ಅರಸು ಸರಕಾರ ಈಗ ಇದ್ದರೇ ಹೇಗಿರುತ್ತೆ? ಅಂತ ನೆನೆದಾಗ ಬಹಳ ಖುಷಿಯಾಗುತ್ತದೆ. ಭಾರತವನ್ನು ನೈತಿಕವಾಗಿ ನೆಹರೂ ತುತ್ತ ತುದಿಗೆ ತಂದು ನಿಲ್ಲಿಸುತ್ತಿದ್ದರು ಎಂದು ಹೇಳಿದರು.
ಮಂಡಲ್ ಕಮಿಷನ್, ಹೊಸ ಆರ್ಥಿಕ ನೀತಿ, ಬಾಬ್ರಿ ಮಸೀದಿ ಧ್ವಂಸ ಇವುಗಳು ಒಂದರ ನಂತರ ಒಂದು ಬಂದವು. ಇವು ಒಂದರ ಕೈ ಒಂದು ಹಿಡಿದುಕೊಂಡೆ ಬಂದವು. ಇವು ದೇಶಕ್ಕೆ ಮಾರಕ ಆಗಿಬಿಟ್ಟವು. ಬ್ರಾಹ್ಮಣವಾದ, ಬಂಡವಾಳವಾದ, ಕೋಮುವಾದ ಇವು ಅವುಗಳ ಮುಖ್ಯ ಅಜೆಂಡ ಆದವು. ಸಾಂಸ್ಕೃತಿಕ ಬದುಕನ್ನು ನುಚ್ಚುನೂರು ಮಾಡಿದವು ಎಂದರು.
ಸಮಾಜ ಸೇವಕ ಅಹಿಂದ ಜವರಪ್ಪಅವರು ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಸಂವಿಧಾನ ಇದ್ದಾಗೇ ಇದೆ. ಅದರ ಅಸ್ಥಿಪಂಜರದ ರಕ್ತ ಮಾಂಸವನ್ನು ಕಿತ್ತು ತಿನ್ನುತ್ತಿದ್ದಾರೆ. ಇದು ರಾಜಕಾರಣದ ಹೆಸರಲ್ಲಿ ನಡೆಯುತ್ತಿದೆ. 175 ಮಂದಿ ಪಾರ್ಲಿಮೆಂಟ್ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣವಿದೆ. ಇದನ್ನು ಯಾವ ರಾಜಕಾರಣ ಎಂದು ಹೇಳೋಣ. ಇಂದು ಮಾಧ್ಯಮವನ್ನು ಗುಂಡಿಗೆ ತಳ್ಳಿಬಿಟ್ಟಿದ್ದಾರೆ. ಸರಕಾರಗಳ ಜಾಹೀರಾತು ಇಲ್ಲದೆ ಮಾಧ್ಯಮಗಳು ಬದುಕುವುದೇ ಕಷ್ಟ. ಮಾಧ್ಯಮಗಳ ಸ್ಥಿತಿ ಈ ಮಟ್ಟಿಗೆ ತಲುಪಿವೆ. ಚಳವಳಿಗಳು ಶಕ್ತಿಗೊಂಡರೇ ರಾಜಕಾರಣವನ್ನು ನೈತಿಕವಾಗಿ ಬದಲಾಯಿಸಬಹುದು. ಚಳವಳಿಗಳ ದ್ವನಿ ಅಡಗಿ ಹೋದರೇ ಯಾವ ಸಣ್ಣ ಬದಲಾವಣೆಯೂ ಆಗುವುದಿಲ್ಲ.
-ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ