ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ಕೊಟ್ಟರೆ ಕೊಡಲಿ: ಸಿಎಂ ಸಿದ್ದರಾಮಯ್ಯ
ಮೈಸೂರು, ಜ.25: ಗಣರಾಜ್ಯೋತ್ಸವ ಸಂದೇಶದಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಬೇಕಾದರೆ ರಾಜ್ಯಪಾಲರು ಬದಲಾಯಿಸಬಹುದು. ಆದರೆ, ಜಂಟಿ ಅಧಿವೇಶನದಲ್ಲಿ ಸರ್ಕಾರ ಏನು ಬರೆದುಕೊಡುತ್ತದೋ ಅದನ್ನು ಸಂವಿಧಾನದ ಧಾರೆಯಾದ 163 ರ ಪ್ರಕಾರ ರಾಜ್ಯಪಾಲರು ಓದಲು ಮಾತ್ರ ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ನೀಡುತ್ತಾರೆ ಎಂದರೆ ಕೊಡಲಿ. ಜಂಟಿ ಅಧಿವೇಶನದಲ್ಲಿ ಏನು ನಡೆಯಿತು ಎಂಬುದನ್ನು ಅವರು ಅರಿತಿರಬೇಕು” ಎಂದರು.
ಸಿದ್ದರಾಮಯ್ಯ ಹೇಳಿದರು, “ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಭಾಷಣದಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಬೇಕಾದರೆ ಅವರು ಬದಲಾಯಿಸಬಹುದು. ಆದರೆ, ಜಂಟಿ ಅಧಿವೇಶನದಲ್ಲಿ ನಾವು ಏನು ಬರೆದುಕೊಡುತ್ತೇವೆ ಅದನ್ನು ಓದಲೇ ಬೇಕಾಗಿತ್ತು. ನಾಳೆ ನಾವು ಬರೆದುಕೊಡುತ್ತೇವೆ; ಬೇಕಾದರೆ ಅವರು ಬದಲಾಯಿಸಿಕೊಳ್ಳಲಿ” ಎಂದರು.
ದೆಹಲಿಯಲ್ಲಿ ನಾಳೆ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕದ ಸ್ಥಬ್ಧ ಚಿತ್ರಕ್ಕೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿರಲಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ “ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೇಂದ್ರದೊಂದಿಗೆ ಪತ್ರವ್ಯವಹಾರ ನಡೆಸಿದೆ. ಅವರು ಅವಕಾಶ ನೀಡದಿದ್ದರೆ, ನಾವು ಏನು ಮಾಡೋದು? ಎಲ್ಲಾ ರಾಜ್ಯಗಳ ಸ್ಥಬ್ಧ ಚಿತ್ರಗಳಿಗೆ ಅವಕಾಶ ಮಾಡಬೇಕಿತ್ತು” ಎಂದು ಹೇಳಿದರು.