ನಿಜವಾದ ಸರ್ವಾಧಿಕಾರಿ ಇಂದಿರಾ ಗಾಂಧಿ: ಸಿ.ಟಿ. ರವಿ
ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸುತ್ತಾರೆ. ಆದರೆ, ನಿಜವಾದ ಸರ್ವಾಧಿಕಾರಿ ಇಂದಿರಾ ಗಾಂಧಿ. ರಾಹುಲ್ ಗಾಂಧಿ ಡಿಎನ್‌ಎನಲ್ಲಿ ಸರ್ವಾಧಿಕಾರ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಬಿಜೆಪಿ ಮೈಸೂರು ಮಹಾನಗರ ಮತ್ತು ಗ್ರಾಮಾಂತರ ಜಿಲ್ಲೆ ವತಿಯಿಂದ ನಜರಬಾದ್ ವಿ.ಕೆ. ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿಗಾಗಿ ಭೀಮನೆಡೆ ಅಭಿಯಾನ ಸಂವಿಧಾನ ದುರ್ಬಳಕೆಯ ಕಾಂಗ್ರೆಸ್ ಇತಿಹಾಸ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಇಂದಿರಾ ಗಾಂಧಿ. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಬಾಬು ಜಗಜೀವನ್ ರಾಮ್ ಪಕ್ಷ ಸ್ಥಾಪಿಸಿದರು. ರಾಜ್ಯದ ಎಲ್ಲ ಸರ್ಕಾರಗಳನ್ನು ಉರುಳಿಸಿದರು. ನ್ಯಾಯಾಂಗದ ಪಾವಿತ್ರ‍್ಯಕ್ಕೆ ಧಕ್ಕೆ ತಂದರು. ಸಂವಿಧಾನಕ್ಕೆ ಹೆಚ್ಚಿನ ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ಸರ್ಕಾರವೇ ಎಂದು ಹೇಳಿದರು.
ಸಂವಿಧಾನ ಮತ್ತು ಬಾಬಾ ಸಾಹೇಬ ಬಿ.ಆರ್. ಅಂಬೇಡ್ಕರ್ ಬಗೆಗಿನ ಸತ್ಯ ಏನು ಮತ್ತು ಮಿಥ್ಯೆ ಏನೆಂಬುದನ್ನು ತಿಳಿಸಲು ಅಭಿಯಾನ ಹಮ್ಮಿಕೊಂಡಿದ್ದೇವೆ. ಸಂವಿಧಾನದ ಮೇಲೆ ಮಾಡಬಾರದ ಅಪಚಾರ ಮಾಡಿದ ಪಕ್ಷದವರು ಈಗ ಸಂವಿಧಾನದ ಪ್ರತಿ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
1950ರಲ್ಲಿ ಸಂವಿಧಾನ ಜಾರಿಗೆ ಬಂದಿತು. ಅಲ್ಲಿಂದ 2015ರ ತನಕ ಸಂವಿಧಾನ ಗೌರವಿಸುವ ದಿನವಾಗಿ ಆಚರಿಸುತ್ತಿರಲಿಲ್ಲ. ಕಾನೂನು ದಿನವನ್ನಾಗಿ ಆಚರಿಸುತ್ತಿದ್ದರು. ಮೋದಿಯವರು ಸಂವಿಧಾನ ಗೌರವ್ ದಿವಸ್ ಆಚರಣೆಗೆ ಕರೆಕೊಟ್ಟರು ಎಂದು ತಿಳಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ರಘು ಕೌಟಿಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಟಿ.ಎಸ್. ಶ್ರೀವತ್ಸ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ನಗರ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಕೆ.ಸುಬ್ಬಣ್ಣ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಹರ್ಷವರ್ಧನ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ವಿ ಶೈಲೇಂದ್ರ, ಫಣೀಂದ್ರ, ಪ್ರಫುಲ್ಲ ಮಲ್ಲಾಡಿ, ಎಸ್.ಮಹದೇವಯ್ಯ, ಸೋಮಶೇಖರ್, ಸಂದೇಶ್ ಸ್ವಾಮಿ, ರೇವಣ್ಣ, ಮಂಗಳ, ಅನಿಲ್,ಸೋಮೇಖರ್ ಮುಂತಾದವರು ಭಾಗವಹಿಸಿದ್ದರು.