×
Ad

ಎಪಿಎಂಸಿಗಳಲ್ಲಿ ಆರ್ಥಿಕ ಅಪರಾಧಗಳನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ : ಸಚಿವ ಶಿವಾನಂದ ಪಾಟೀಲ್

Update: 2025-01-29 19:41 IST

ಮೈಸೂರು : ಒತ್ತುವರಿಯಾಗಿರುವ ಎಪಿಎಂಸಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್‌ ಅವರು ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬುಧವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಪಿಎಂಸಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಯಾವ ಯಾವ ಎಪಿಎಂಸಿಗಳ ಎಷ್ಟು ಭೂಮಿ ಒತ್ತುವರಿ ಆಗಿದೆ ಎಂಬ ಮಾಹಿತಿ ಪಡೆದು, ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದರೆ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು. ಸರಕಾರದಿಂದ ಒತ್ತುವರಿ ಆಗಿದ್ದರೆ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಪಡೆಯಲು ತಕ್ಷಣ ಪತ್ರ ಬರೆಯಬೇಕು ಎಂದು ಸೂಚಿಸಿದರು. ರಾಷ್ಟೀಯ ಹೆದ್ದಾರಿ ನಿರ್ಮಾಣಕ್ಕೆ ನಂಜನಗೂಡು ಎಪಿಎಂಸಿಯ 12 ಗುಂಟೆ ಭೂಮಿಯನ್ನು ಬಳಕೆ ಮಾಡಿಕೊಂಡಿದ್ದರೂ ಇದುವರೆಗೆ ಪರಿಹಾರಕ್ಕೆ ಏಕೆ ಪ್ರಯತ್ನಿಸಿಲ್ಲ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ತರಾಟೆ ತೆಗೆದುಕೊಂಡರು.

ಟಿ.ನರಸೀಪುರದಲ್ಲಿ ಎಪಿಎಂಸಿ ಕಟ್ಟಡವನ್ನು ನಾಡಕಚೇರಿಗೆ ಬಾಡಿಗೆ ನೀಡಲಾಗಿದ್ದು, 22 ಲಕ್ಷ ರೂ. ಬಾಡಿಗೆ ಬರಬೇಕಾಗಿದೆ. ಆರಂಭದಿಂದಲೂ ಇದುವರೆಗೆ ಬಾಡಿಗೆ ಬಂದಿಲ್ಲ ಎಂಬ ವಿಷಯ ತಿಳಿದ ಸಚಿವರು, ಈ ಹಣ ಪಾವತಿಗೆ ಕಂದಾಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ವ್ಯವಹಾರ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಯಾವುದೇ ಉತ್ಪನ್ನದ ಬೆಲೆ ಕುಸಿದಾಗ ಸರಕಾರ ಬೆಲೆ ಸ್ಥಿರತೆಗೆ ಮಧ್ಯಪ್ರವೇಶ ಮಾಡಬೇಕು. ಆದ್ದರಿಂದ ಅಧಿಕಾರಿಗಳು ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಎಷ್ಟು ಕೃಷಿ ಭೂಮಿ ಇದೆ, ಯಾವ ಯಾವ ಬೆಳೆಯನ್ನು ಎಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹಾಗೂ ಇಳುವರಿ ಪ್ರಮಾಣ ಎಷ್ಟು ಎಂಬ ಮಾಹಿತಿ ಪ್ರತಿ ಎಪಿಎಂಸಿಗಳಲ್ಲಿ ಇರಬೇಕು ಎಂದು ಹೇಳಿದರು.

ಹಲವರು ಟ್ರೇಡ್ ಲೈಸೆನ್ಸ್ ಹೊಂದಿದ್ದರೂ ಖರೀದಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಬೇರೆ ಬೇರೆ ಉದ್ದೇಶಗಳಿಗೆ ಲೈಸೆನ್ಸ್ ಪಡೆದು ಐದು ವರ್ಷಗಳಿಂದ ಖರೀದಿ ಚಟುವಟಿಕೆಯಲ್ಲಿ ಭಾಗವಹಿಸದವರ ಲೈಸೆನ್ಸ್ ರದ್ದುಪಡಿಸಿ ಎಂದು ಸೂಚಿಸಿದರು.

ಆರ್ಥಿಕ ಅಪರಾಧಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಲ್ಲ ಎಪಿಎಂಸಿಗಳ ಆಡಿಟ್ ಮಾಡಿಸಿ ದುರ್ಬಳಕೆ ಕಂಡುಬಂದರೆ ಸಂಬಂಧಪಟ್ಟವರ ಮೇಲೆ ದೂರು ದಾಖಲು ಮಾಡಬೇಕು. ಎಪಿಎಂಸಿಗೆ ಬರಬೇಕಾದ ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಅಪರ ನಿರ್ದೇಶಕ ನಜೀಬುಲ್ಲಾಕಾನ್, ಅಧೀಕ್ಷಕ ಅಭಿಯಂತರ ರಘುನಂದನ್ ಮತ್ತಿತರರು ಉಪಸ್ಥಿತರಿದ್ದರು. ಮೈಸೂರು ಜಿಲ್ಲೆ ಎಂಟು, ಚಾಮರಾಜನಗರ ಜಿಲ್ಲೆಯ ನಾಲ್ಕು ಎಪಿಎಂಸಿಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News