×
Ad

ಕ್ಷೇತ್ರದ ಜನರ ತೀರ್ಮಾನದಂತೆ ನನ್ನ ಮುಂದಿನ ನಡೆ, ಸದ್ಯ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ: ಶಾಸಕ ಜಿ.ಟಿ. ದೇವೇಗೌಡ

Update: 2025-07-09 17:22 IST

ಮೈಸೂರು: ನಾನು ಜೆಡಿಎಸ್ ನಲ್ಲಿ ಇರಬೇಕಾ ಬೇಡವಾ?  ಬಿಜೆಪಿಗೆ ಹೋಗಬೇಕಾ?  ಕಾಂಗ್ರೆಸ್ ಗೆ ಹೋಗ್ಬೇಕಾ? ಎಂದು ನನ್ನ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ. ಸದ್ಯ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದುಬಿಡು ಅಂತ ಕರೆದಿಲ್ಲ. ಡಿ.ಕೆ.ಶಿವಕುಮಾರ್ ಕೂಡ ಕರೆದಿಲ್ಲ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ನ ಯಾರೂ ಕರೆದಿಲ್ಲ. ಹಾಗಂತ ನಾನು ಯಾವ ಪಕ್ಷಕ್ಕೂ ಹೋಗಲ್ಲ ಎಂದರು.

ಸ್ವಪಕ್ಷದ ನಾಯಕರ ವಿರುದ್ಧವೂ ಹರಿಹಾಯ್ದ ಶಾಸಕ ಜಿ.ಟಿ ದೇವೇಗೌಡ,  ನಿನ್ನೆ ಮೊನ್ನೆ ಬಂದ ಶಾಸಕರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಮುಂದೆ ನಿಲ್ಲುವ ಶಕ್ತಿ ಇಲ್ಲದವರು ಕೂಡ ಏನೇನೋ ಮಾತನಾಡುತ್ತಿದ್ದಾರೆ. ನಾನು ದೇವೇಗೌಡರ ಜೊತೆ ಬಾವುಟ ಕಟ್ಟಿ ಪಕ್ಷ ಕಟ್ಟಿದವನು. ಮುಂದೆ ಏನು ಮಾಡಬೇಕು ಅಂತ ಕ್ಷೇತ್ರದ ಜನರು ಹೇಳುತ್ತಾರೆ. ಜನರು ಜೆಡಿಎಸ್ ಅಲ್ಲಿ ಇರು ಅಂದರೆ ಇರ್ತೀನಿ . ಕಾಂಗ್ರೆಸ್ ಗೆ ಹೋಗಿ ಅಂದರೆ ಹೋಗುತ್ತೇನೆ. ಬಿಜೆಪಿಗೆ ಹೋಗು ಅಂದರೂ ಹೋಗುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದರು.

ಬಿಜೆಪಿ ಜೆಡಿಎಸ್ ನಲ್ಲಿ ಸಮನ್ವಯ ಕೊರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡ, ನಾನು ಜೆಡಿಎಸ್ ಶಾಸಕ. ಚುನಾವಣೆ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು. ಪಕ್ಷಾಂತರ ಮಾಡಿಲ್ಲ. ಈ ಹಿಂದೆ 20 ತಿಂಗಳು ಯಡಿಯೂರಪ್ಪಗೆ ಅಧಿಕಾರ ಕೊಡಲಿಲ್ಲ ಅಂತ ಬೆಂಬಲ ನೀಡಿದ್ದೆ. ಇನ್ನು ನಮ್ಮ ಅವಧಿ 3 ವರ್ಷ ಇದೆ. ನನಗೆ ವಿರೋಧ ಪಕ್ಷದ ಸ್ಥಾನ ಕೊಡಲಿಲ್ಲ ಅಂತ ಬೇಸರವಿದೆ. ಹಿರಿಯನಾಗಿದ್ದು ನನಗೆ ಅವಕಾಶ ಕೊಡಲಿಲ್ಲ. ಸುರೇಶ್ ಬಾಬು ಗೆ ಕುಮಾರಸ್ವಾಮಿ ಅಧಿಕಾರ ಕೊಟ್ಟರು. ಸದ್ಯ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಈ ಹಿಂದೆ ದೊಡ್ಡ ನಾಯಕನ ಮುಂದೆ ನಾನು ಹೋರಾಟ ಮಾಡಿ ಗೆದ್ದು ಬಂದಿದ್ದೇನೆ. ಸಿದ್ದರಾಮಯ್ಯ ಅಂತ ನಾಯಕರ ಮುಂದೆ ಗೆದ್ದಿದ್ದೇನೆ. ಅರ್ಧದಲ್ಲಿ ಜೆಡಿಎಸ್ ಬಿಟ್ಟು ಯಾವ ಪಕ್ಷಕ್ಕೂ ನಾನು ಹೋಗಲ್ಲ. ನಾನು ನನ್ನ ಜೀವನದಲ್ಲಿ ಭ್ರಷ್ಟಾಚಾರ ಮಾಡಿಲ್ಲ, ಪಕ್ಷಾಂತರ ಮಾಡಿಲ್ಲ. ನನ್ನನ್ನ ಪಕ್ಷಾಂತರಿ ಎಂದು ಹೇಳುವ ತಾಕತ್ತು ಯಾರಿಗೂ ಇಲ್ಲ. ಮುಂದೆ ನನ್ನ ಕ್ಷೇತ್ರದ ಜನ ಹೇಳಿದ ಹಾಗೆ ಮಾಡುತ್ತೇನೆ ಎಂದರು.

ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನದ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ನಿಖಿಲ್ ನಟ ಕೂಡ ಹೌದು. 3 ಬಾರಿ ಚುನಾವಣೆ ಸೋತಿದ್ದಾನೆ.  ಈಗ ಆತನಿಗೂ ರಾಜಕೀಯದ ಅನುಭವ ಇದೆ. ದೇವೇಗೌಡರು ಕಟ್ಟಿದ್ದ ಜನತಾದಳವನ್ನು ಸದೃಢವಾಗಿ ಮುಂದೆ ತೆಗೆದುಕೊಂಡು ಹೋಗುವ ಗಟ್ಟಿ ನಾಯಕತ್ವ ನಿಖಿಲ್ ಗೆ ಇದೇ. ನಾನು ಪಕ್ಷದ ಕಾರ್ಯಕ್ರಮದಿಂದ ದೂರವಿದ್ದೇನೆ. ಶಾಸಕನಾಗಿ ನನ್ನ ಕೆಲಸ ಮಾತ್ರ ಮಾಡುತ್ತೇನೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News