×
Ad

ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಸಚಿವ ಈಶ್ವರ್ ಖಂಡ್ರೆ ಚಾಲನೆ

Update: 2025-08-04 17:02 IST

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಗಜಪಯಣಕ್ಕೆ ಸೋಮವಾರ ವೀರನಹೊಸಹಳ್ಳಿಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡುವ ಮೂಲಕ ದಸರೆಗೆ ಮುನ್ನುಡಿ ಬರೆದರು.

ಮೊದಲ ತಂಡದ ಅಭಿಮನ್ಯು ಸಾರಥ್ಯದಲ್ಲಿ ಧನಂಜಯ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಮಹೇಂದ್ರ, ಕಾವೇರಿ, ಬಳ್ಳೆ‌ಲಕ್ಷ್ಮಿ ಆನೆಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು. ಸಚಿವ ಈಶ್ವರ್ ಖಂಡ್ರೆ ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು.

ದಸರಾ ಆಚರಣೆಯ ಮೊದಲ ಕಾರ್ಯಕ್ರಮ ಇದಾಗಿದ್ದು, ಇಂದಿನಿಂದ ದಸರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಂತಾಗಿದೆ. ಇದೇ ಮೊದಲ ಬಾರಿಗೆ ಬಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದು ಜಾತ್ರಾ ಮಹೋತ್ಸವದ ವಾತಾವರಣ ಸೃಷ್ಟಿಯಾಗಿತ್ತು.

ದಸರಾ ಗಜಪಯಣ ಆರಂಭ ಹಿನ್ನಲೆಯಲ್ಲಿ ವೀರನಹೊಸಹಳ್ಳಿ ಗ್ರಾಮ ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಮಾವುತರು ಮತ್ತು  ಮತ್ತು ಕುಟುಂಬದವರು ಗಜಯಪಯಣದೊಂದಿಗೆ ಮೈಸೂರಿನತ್ತ ಪ್ರಯಾಣ ಬೆಳೆಸಲು ಎಲ್ಲಾ ಸಾಮಾಗ್ರಿಗಳನ್ನು ಹೊತ್ತು ತಂದು ಸಿದ್ಧರಾಗಿದ್ದರು.

ಗಜಪಯಣದ ಬೀಳ್ಕೊಡಲು ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು. ವೀರಗಾಸೆ, ಕಂಸಾಳೆ, ಪಟದ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತದೊಂದಿಗೆ ಹಾಡಿಮಕ್ಕಳ ಅರಣ್ಯ ಕುಣಿತ ಕಣ್ಮನ ಸೆಳೆಯಿತು.

ಅರ್ಜುನ‌ ಪ್ರಶಸ್ತಿ ಪ್ರಧಾನ:

ಹಾಸನ ಜಿಲ್ಲೆಯಲ್ಲಿ ಕಾಡಾನೆ ಸೆರೆ ವೇಳೆ ಮೃತಪಟ್ಟ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಹೆಸರಿನ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಪ್ರಧಾನ‌ಮಾಡಲಾಯಿತು.

ಮೊದಲ ಸಾಲಿನ ಪ್ರಶಸ್ತಿಗೆ ಭೀಮ ಆನೆಯ ಮಾವುತ ಗುಂಡಣ್ಣ ಹಾಗೂ ಕಾವಾಡಿ ನಂಜುಡಸ್ವಾಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಡಿ.ಹರೀಶ್ ಗೌಡ ವಹಿಸಿದ್ದರು. ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಡಿ.ರವಿಶಂಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ , ಜಿ.ಪಂ.ಸಿಇಓ ಯುಕೇಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಎಸ್ಪಿ ವಿಷ್ಣುವರ್ಧನ್, ಹುಣಸೂರು ಉಪ ವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಮಂಜುನಾಥ್, ಡಿಸಿಎಫ್ ಪ್ರಭುಗೌಡ, ಮಾಲತಿ ಪ್ರಿಯಾ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಸಂಯೋಜಕ ಎನ್.ಭಾಸ್ಕರ್, ವಕೀಲ ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News