ಮೈಸೂರು: ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ ನಿಧನ
ಮೈಸೂರು, ಜು.13: ಹಿರಿಯ ಪತ್ರಕರ್ತ, ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ (85) ರವಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇಂದು ಸಂಜೆ 4 ಗಂಟೆ ವರೆಗೆ ಲಲಿತಾದ್ರಿ ರಸ್ತೆಯ ಕೆ.ಸಿ. ಲೇಔಟ್ ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ಕೆ.ಬಿ.ಗಣಪತಿ ನಿಧನಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಮಧ್ಯಮ ಲೋಕದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಅವರು, ತಮ್ಮ ಗರಡಿಯಲ್ಲಿ ಅನೇಕ ಶ್ರೇಷ್ಠ ಪತ್ರಕರ್ತರನ್ನು ರೂಪಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ. ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲೆಂದು ಪ್ರಾರ್ಥಿಸುವೆ ಎಂದು ಸಂತಾಪ ಸಂದೇಶದಲ್ಲಿ ಕೇಂದ್ರ ಸಚಿವರು ಕಂಬನಿ ಮಿಡಿದಿದ್ದಾರೆ.
ಕೆ.ಬಿ.ಗಣಪತಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಸಂತಾಪ ಸೂಚಿಸಿದೆ.