Mysuru | ಪಬ್ ನಲ್ಲಿ ಬೆಂಕಿ ಅವಗಡ: ಇಬ್ಬರು ಮೃತ್ಯು, ಏಳು ಮಂದಿಗೆ ಗಂಭೀರ ಗಾಯ
ಮೈಸೂರು: ನಗರದ ದಟ್ಟಗಳ್ಳಿ ಬಳಿಯ ಪಬ್ ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಪಬ್ ಸಿಬ್ಬಂದಿಗಳಾದ ಸಾಹಿಲ್ ಮತ್ತು ಪ್ರಕಾಶ್ ಮೃತಪಟ್ಟವರು ಎಂದು ತಿಳಿದು ಬಂದಿದೆ.
ಸೋಮವಾರ ಮಧ್ಯಾಹ್ನ ಶಾರ್ಟ್ ಸರ್ಕೂಟ್ ನಿಂದ ಇದ್ದಕ್ಕಿದ್ದಂತೆ ಬೆಂಕಿ ಆವರಿಸಿಕೊಂಡಿದೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ದಟ್ಟ ಹೊಗೆ ತುಂಬಿಕೊಂಡಿದೆ. ಇದನ್ನು ಕಂಡ ಪಬ್ ಗೆ ಬಂದಿದ್ದ ಜನರು ಗಾಬರಿಗೊಂಡು ತಮ್ಮ ಜೀವ ಉಳಿಸಿಕೊಳ್ಳಲು ಪಬ್ ಮೇಲಂತಸ್ಥಿನಿಂದ ಕೆಳಕ್ಕೆ ಜಿಗಿದು ಪಾರಾಗಿದ್ದಾರೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪಬ್ ನ ಇಬ್ಬರು ಸಾವನ್ನಪ್ಪಿದ್ದು, 7 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಸುಂದರರಾಜ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.