ನಂಜನಗೂಡು | ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಲಾರಿ; ಚಾಲಕ ಸ್ಥಳದಲ್ಲೇ ಮೃತ್ಯು, ಆರು ಮಂದಿಗೆ ಗಂಭೀರ ಗಾಯ
ನಂಜನಗೂಡು : ಮೈಸೂರಿನಿಂದ ಗುಂಡ್ಲುಪೇಟೆ ಬಳಿಯ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತಿದ್ದ ಕಾರಿನ ಮೇಲೆ ಟ್ಯಾಂಕರ್ ಲಾರಿ ಉರುಳಿ ಬಿದ್ದು ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟು, ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯ ಸಿಂಧುವಳ್ಳಿಪುರ ಗ್ರಾಮದ ಬಳಿ ಮಂಗಳವಾರ ಈ ದುರ್ಘಟನೆ ನಡೆದಿದೆ.
ಕಾರಿನಲ್ಲಿ ತೆರಳುತ್ತಿದ್ದ ಕುಟುಂಬಸ್ಥರು ಮೈಸೂರಿನ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟಿರುವ ಕಾರಿನ ಚಾಲಕನ ಮೃತದೇಹವನ್ನು ನಂಜನಗೂಡಿನ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆರು ಮಂದಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಂಜನಗೂಡಿನ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದರಾಜು, ಮಾದೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಘಾತಕ್ಕೆ ಕಾರಣವಾಗಿರುವ ಟ್ಯಾಂಕರ್ ಮತ್ತು ಜಖಂಗೊಂಡಿರುವ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.