×
Ad

ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು ಸಲ್ಲಿಸಿದ ಸ್ನೇಹಮಯಿ ಕೃಷ್ಣ

Update: 2025-02-04 18:50 IST

ಸ್ನೇಹಮಯಿ ಕೃಷ್ಣ 

ಮೈಸೂರು: ಮುಡಾ ಪ್ರಕರಣದ ದೂರುದಾರ, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮೈಸೂರು ಲೋಕಾಯುಕ್ತ ಎಸ್ಪಿ ಅವರಿಗೆ ಮತ್ತೊಂದು ದೂರು ಸಲ್ಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಕುಟುಂಬಕ್ಕೆ ಕೆಸರೆ ಗ್ರಾಮದ 3.16 ಎಕರೆ ಜಾಗವನ್ನು ಅರಿಶಿನ ಕುಂಕುಮ ರೂಪದಲ್ಲಿ ಸಿದ್ದರಾಮಯ್ಯ ಪತ್ನಿಗೆ ಅವರ ಸೋದರ ಮಲ್ಲಿಕಾರ್ಜುನ್‌ ಸ್ವಾಮಿ ದಾನ ಮಾಡಿದಂತೆಯೇ, 1983ರಲ್ಲಿ ಆಲನಹಳ್ಳಿ ಸರ್ವೆ ನಂಬರ್‌ 113/4ರಲ್ಲಿ ಒಂದು ಎಕರೆ ಭೂಮಿ ಖರೀದಿ ಮಾಡಿದ್ದಾರೆ. ಆ ಭೂಮಿಗೆ 1996ರಲ್ಲಿ ಮುಡಾ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಡಿನೋಟಿಫೈ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಪ್ರಭಾವ ಬೀರಿ ಡಿನೋಟಿಫೈ ಮಾಡಲಾಗಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಇದೇ ಒಂದು ಎಕರೆ ಭೂಮಿಯನ್ನು ಮಲ್ಲಿಕಾರ್ಜುನ್‌ ಸ್ವಾಮಿ 2010ರ ಅಕ್ಟೋಬರ್​​ನಲ್ಲಿ ಸಿಎಂ ಪತ್ನಿಗೆ ದಾನ ಮಾಡಿದ್ದಾರೆ. ಆ ಭೂಮಿಯನ್ನು ಒಂದೇ ತಿಂಗಳಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೆಸರಿಗೆ ದಾನ ಮಾಡಲಾಗಿದೆ. ಬಳಿಕ ಭೂಮಿಯನ್ನು ಯತೀಂದ್ರ ಸಿದ್ದರಾಮಯ್ಯ ದಾನ ಪಡೆದ ನಾಲ್ಕು ತಿಂಗಳಲ್ಲೇ ಬೇರೆಯವರಿಗೆ ಮಾರಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಸಿದ್ದರಾಮಯ್ಯ ಎಲ್ಲಿಯೂ ದಾಖಲೆಗಳಲ್ಲಿ ತಿಳಿಸಿಲ್ಲ. ಹಾಗಾಗಿ, ಸಿದ್ದರಾಮಯ್ಯ ಕುಟುಂಬ, ಮಲ್ಲಿಕಾರ್ಜುನ ಸ್ವಾಮಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸ್ನೇಹಮಯಿ ಕೃಷ್ಣ ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮಲ್ಲಿಕಾರ್ಜುನ್‌ ಸ್ವಾಮಿ ಪದೇ ಪದೆ ಆಸ್ತಿಗಳನ್ನು ತಮ್ಮ ಸಹೋದರಿಗೆ ದಾನ ನೀಡುವುದು ಯಾಕೆ? ಅವರ ಬಳಿ ಎಷ್ಟು ಭೂಮಿ ಇದೆ, ಹಾಗೂ ಹೀಗೆ ದಾನ ಪಡೆದ ಭೂಮಿಯನ್ನು ತಕ್ಷಣ ಮಾರುವುದು ಯಾಕೆ? ಎಂಬ ಎಲ್ಲಾ ವಿಚಾರಗಳ ಬಗ್ಗೆ ಲೋಕಾಯುಕ್ತ ತನಿಖೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News