ಕೇರಳ | 6 ಗಂಟೆಯಲ್ಲಿ ಐವರ ಕೊಲೆ ; ರಾಜ್ಯವನ್ನೇ ತಲ್ಲಣಗೊಳಿಸಿದ ಹತ್ಯೆಯ ಕುರಿತು ಪೊಲೀಸರು ಹೇಳಿದ್ದೇನು?
Photo | indianexpress
ತಿರುವನಂತಪುರಂ: ಕೇರಳ ರಾಜ್ಯವನ್ನು ತಲ್ಲಣಗೊಳಿಸಿದ ಐವರ ಹತ್ಯೆ ಕುರಿತ ತನಿಖೆ ವೇಳೆ ಮಹತ್ವದ ಅಂಶಗಳು ಬಹಿರಂಗವಾಗಿದೆ. ಅಫನ್ ತನ್ನ ಕುಟುಂಬದ ಐವರನ್ನು ಕೊಲೆ ಮಾಡಲು ಆರ್ಥಿಕ ಸಂಕಷ್ಟ ಪ್ರಮುಖ ಕಾರಣವಾಗಿದ್ದರೂ, ವೈಯಕ್ತಿಕ ಕೊಲೆಗೆ ಬೇರೆಯದ್ದೇ ಪ್ರೇರಣೆಯಿದೆ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ.
►ಸರಣಿ ಹತ್ಯೆ :
ಐಶಾರಾಮಿ ಜೀವನ ನಡೆಸುತ್ತಿದ್ದ ಅಫನ್ ಆರ್ಥಿಕ ಸಂಕಷ್ಟದಿಂದ ಕುಟುಂಬಸ್ಥರಲ್ಲಿ ಸಾಲವನ್ನು ಕೇಳಿದ್ದಾನೆ. ಅಜ್ಜಿಯ ಬಳಿಯೂ ಒಡವೆಯನ್ನು ಕೊಡುವಂತೆ ಕೇಳಿದ್ದಾನೆ, ಚಿಕ್ಕಪ್ಪ, ಚಿಕ್ಕಮ್ಮನ ಬಳಿಯೂ ಸಾಲವನ್ನು ಕೇಳಿದ್ದಾನೆ. ಆದರೆ ಅವರು ಆತನಿಗೆ ಸಹಾಯಕ್ಕೆ ಮುಂದೆ ಬಂದಿರಲಿಲ್ಲ. ಇದರಿಂದ ಅಫನ್ ತನ್ನ ಅಜ್ಜಿ ಸಲ್ಮಾ ಬೀಬಿ(74), ಚಿಕ್ಕಪ್ಪ ಲತೀಫ್(60), ಚಿಕ್ಕಮ್ಮ ಶಾಹೀದಾ (56) ಗೆಳತಿ ಫರ್ಸಾನಾ (22) ಹಾಗೂ ಸಹೋದರ ಆಫ್ಸಾನ್(14)ನನ್ನು ಕೊಲೆ ಮಾಡಿದ್ದಾನೆ. ವೆಂಜರಮೂಡು ಹಾಗೂ ಪಾಂಗೊಡೆ ಎಂಬಲ್ಲಿ 6 ಗಂಟೆಯ ಅವಧಿಯಲ್ಲಿ ಐವರನ್ನು ಕೊಲೆ ಮಾಡಿದ್ದಾನೆ. ಆ ಬಳಿಕ ಸೋಮವಾರ ಸಂಜೆ ತಿರುವನಂತಪುರ ಪೊಲೀಸ್ ಠಾಣೆಗೆ ತೆರಳಿದ ಅಫನ್, ನಾನು ಮೂರು ಗ್ರಾಮಗಳಲ್ಲಿ ಆರು ಜನರನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ತಕ್ಷಣ ಆತನನ್ನು ವಶಕ್ಕೆ ಪಡೆದುಕೊಂಡು ಪೊಲೀಸರು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅಫನ್ ನಿಂದ ದಾಳಿಗೀಡಾಗಿದ್ದ ಆರು ಮಂದಿಯ ಪೈಕಿ ಐವರು ಮೃತಪಟ್ಟಿದ್ದರು. ಆದರೆ ಆತನ ತಾಯಿ ರೇಷ್ಮಾ(50) ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವುದು ಪತ್ತೆಯಾಗಿತ್ತು.
ಸೋಮವಾರ ಬೆಳಿಗ್ಗೆ ಅಫನ್ ತನ್ನ ತಾಯಿಯನ್ನು ಕತ್ತು ಹಿಸುಕಿ ಕೊಠಡಿಯೊಳಗೆ ಕೂಡಿ ಹಾಕಿ ಹೋಗಿದ್ದ. ಆ ಬಳಿಕ ಮನೆಗೆ ಮರಳಿದ ಆತ, ತನ್ನ ತಾಯಿ ಇನ್ನೂ ಜೀವಂತವಾಗಿರುವುದನ್ನು ಕಂಡು ಆಕೆಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಅವನು ಪ್ರಿಯತಮೆ ಮತ್ತು ಕಿರಿಯ ಸಹೋದರನನ್ನು ಹೊಡೆದು ಕೊಲೆ ಮಾಡಿ ವಿಷ ಸೇವಿಸಿದ್ದಾನೆ.
►ಕೊಲೆಗೆ ಕಾರಣವೇನು?
ಅಫನ್ ನನ್ನು ಚಿಕಿತ್ಸೆ ಬಳಿಕ ವಶಕ್ಕೆ ಪಡೆದುಕೊಂಡ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಿದ್ದಾರೆ. ಅಫನ್ ಕೃತ್ಯಕ್ಕೆ ಆರ್ಥಿಕ ಸಂಕಷ್ಟ ಪ್ರಮುಖ ಕಾರಣವಾಗಿದ್ದರೂ, ವೈಯಕ್ತಿಕ ಕೊಲೆಗೆ ಬೇರೆಯದ್ದೇ ಪ್ರೇರಣೆಯಿದೆ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ. ಅಫನ್ ತನ್ನ ಅಜ್ಜಿಯನ್ನು ಆಭರಣಗಳನ್ನು ಕೊಟ್ಟಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದರೆ, ಹಣಕಾಸಿನ ತೊಂದರೆ ವೇಳೆ ನನಗೆ ಸಹಾಯ ಮಾಡಿಲ್ವಲ್ಲ ಎಂದು ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕೊಲೆ ಮಾಡಿದ್ದಾನೆ. ನಂತರ ಪ್ರಿಯತಮೆ ಮತ್ತು 13 ವರ್ಷದ ಸಹೋದರನನ್ನು ನಾನಿಲ್ಲದೆ ಅವರು ಬದುಕುಳಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿರುವುದು ಬಯಲಾಗಿದೆ.
►ಪೊಲೀಸರು ಹೇಳಿದ್ದೇನು?
ಸರಣಿ ಕೊಲೆ ನಡೆಸಿದ ಅಫನ್ ನನ್ನು ವಿಚಾರಣೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ತಿರುವನಂತಪುರಂ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಕೆಎಸ್ ಸುದರ್ಶನ್, ಅಫನ್ ಕುಟುಂಬವು ಸಾಲದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿತ್ತು. 13 ಮಂದಿಗೆ 65 ಲಕ್ಷ ರೂ.ಸಾಲ ಮರು ಪಾವತಿ ಮಾಡಬೇಕಿರುವುದಕ್ಕೆ ಸಾಕ್ಷ್ಯವನ್ನು ನಾವು ಸಂಗ್ರಹಿಸಿದ್ದೇವೆ. ಆರ್ಥಿಕ ಬಿಕ್ಕಟ್ಟು ಹತ್ಯೆಗೆ ಹಿಂದಿನ ಪ್ರಮುಖ ಕಾರಣವೆಂದು ಪೊಲೀಸರು ಪತ್ತೆ ಹಚ್ಚಿದರೂ, ವೈಯಕ್ತಿಕ ಕೊಲೆಗೆ ವಿವಿಧ ಕಾರಣಗಳಿವೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ ಎಂದು ಹೇಳಿದ್ದಾರೆ.
ಅಫನ್ ತನ್ನ ಅಜ್ಜಿಯನ್ನು ಹತ್ಯೆಗೈದ ನಂತರ, ಅವರ ಬಳಿಯಿದ್ದ ಕೆಲವು ಒಡವೆಗಳನ್ನು ಕಳ್ಳತನ ಮಾಡಿದ್ದಾನೆ. ಚಿನ್ನವನ್ನು ಅಡವಿಟ್ಟು ಪಡೆದ ಹಣದಲ್ಲಿ 40 ಸಾವಿರ ರೂ. ಸಾಲವನ್ನು ಮರುಪಾವತಿ ಮಾಡಿದ್ದಾನೆ. ಅಫನ್ ಆರಂಭದಲ್ಲಿ ಇಡೀ ಕುಟುಂಬವನ್ನು ವಿಷ ಆಹಾರ ನೀಡಿ ಕೊಲೆ ಮಾಡುವುದಕ್ಕೆ ಯೋಚಿಸಿದ್ದ, ಆ ಬಳಿಕ ತನ್ನ ನಿರ್ಧಾರವನ್ನು ಬದಲಿಸಿದ್ದಾನೆ ಎಸ್ಪಿ ಸುದರ್ಶನ್ ಹೇಳಿದರು.
ಹತ್ಯೆಯ ನಂತರವೂ ಆತನಿಗೆ ಯಾವುದೇ ವಿಷಾದವಾಗಿಲ್ಲ. ಆದರೆ ಆತ ಈ ಹಿಂದೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿಲ್ಲ. ಆತನ ಮೊಬೈಲ್ ಫೋನ್ ಮೂಲಕ ಆತನ ಆನ್‌ಲೈನ್ ಚಟುವಟಿಕೆಯನ್ನು ಕೂಡ ಪರಿಶೀಲಾಗುವುದು ಎಂದು ಹೇಳಿದ್ದಾರೆ.
ಅಫನ್ ಕೃತ್ಯದ ವೇಳೆ ಮಾದಕದ್ರವ್ಯ ಸೇವಿಸಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಫನ್ ಕೂದಲು, ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪೊಲೀಸ್ ಠಾಣೆಗೆ ಶರಣಾದಾಗ ಅಫಾನ್‌ನ ಪಾದದಲ್ಲಿ ಕಂಡುಬಂದ ರಕ್ತದ ಕಲೆಗಳನ್ನೂ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮನೋ ವೈದ್ಯರು ಕೂಡ ಆತನ ಮಾನಸಿಕ ಸ್ಥಿತಿಗತಿ ಬಗ್ಗೆ ಪರೀಕ್ಷೆ ನಡೆಸಿದ್ದಾರೆ.
►ಐಶಾರಾಮಿ ಜೇವನ ಶೈಲಿ ಅಳವಡಿಸಿಕೊಂಡಿದ್ದ ಅಫನ್
ಅಫನ್ ಕುಟುಂಬ 65 ಲಕ್ಷ ರೂ. ಸಾಲವನ್ನು ಯಾಕೆ ಮಾಡಿದೆ ಎಂಬುವುದು ಇನ್ನು ಕೂಡ ತಿಳಿದು ಬಂದಿಲ್ಲ. ಆದರೆ ಅಫನ್ ಯಾವುದೇ ಆದಾಯವಿಲ್ಲದೆ ಐಶಾರಾಮಿ ಜೇವನ ನಡೆಸುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ಅಫನ್ ತಂದೆ ಅಬ್ದುಲ್ ರಹೀಂ ಸೌದಿ ಅರೇಬಿಯಾದಲ್ಲಿ ಸಾಲವನ್ನು ಮಾಡಿಕೊಂಡಿದ್ದರು. ಕೋವಿಡ್ ಬಳಿಕ ಅವರು ಮನೆಗೆ ಹಣವನ್ನು ಕಳುಹಿಸಿಲ್ಲ. ಯಾವುದೇ ಆದಾಯದ ಮೂಲವಿಲ್ಲದೆ ಅವರ ಕುಟುಂಬ ವರ್ಷಗಟ್ಟಲೆ ಸಾಲ ಮಾಡಿ ಬದುಕುತ್ತಿತ್ತು. ಪದವಿ ವ್ಯಾಸಂಗ ಮಾಡಿದ ಅಫನ್‌ಗೆ ಕೆಲಸ ಇರಲಿಲ್ಲ ಎಂದು ಸ್ಥಳೀಯ ನಿವಾಸಿ ಶಾಝಿ ಹೇಳಿದ್ದಾರೆ.