ಆಸ್ಟ್ರೇಲಿಯಾದಲ್ಲಿ ಶೂಟೌಟ್: ಮೂವರು ಮೃತ್ಯು; ಓರ್ವನ ಸ್ಥಿತಿ ಗಂಭೀರ
Photo Credit : AP \ PTI
ಸಿಡ್ನಿ, ಜ.22: ಆಸ್ಟ್ರೇಲಿಯಾದ ನ್ಯೂ ಸೌತ್ವೇಲ್ಸ್ನಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಯುವತಿ ಸೇರಿದಂತೆ ಮೂವರು ಮೃತಪಟ್ಟಿದ್ದು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಳೆದ ವರ್ಷ ಡಿಸೆಂಬರ್ 14ರಂದು ಬಾಂಡಿ ಬೀಚ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರ ಗೌರವಾರ್ಥ ರಾಷ್ಟ್ರೀಯ ಶೋಕಾಚರಣೆಯ ದಿನದಂದೇ ಈ ದಾಳಿ ಸಂಭವಿಸಿದೆ. ನ್ಯೂ ಸೌತ್ವೇಲ್ಸ್ನ ಸೆಂಟ್ರಲ್ ವೆಸ್ಟ್ ಪ್ರದೇಶದ ಲೇಕ್ ಕಾರ್ಗೆಲಿಗೊ ನಗರದಲ್ಲಿ ಕಾರಿನಲ್ಲಿದ್ದ ಯುವತಿ ಹಾಗೂ ವ್ಯಕ್ತಿಯೊಬ್ಬನನ್ನು ಬಂದೂಕುಧಾರಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಯುವತಿ ಆತನ ಮಾಜಿ ಸ್ನೇಹಿತೆಯಾಗಿದ್ದಳು ಎಂದು ವರದಿಯಾಗಿದೆ. ಬಳಿಕ ಇತರ ಇಬ್ಬರ ಮೇಲೆಯೂ ಗುಂಡು ಹಾರಿಸಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಹಂತಕನ ಬಗ್ಗೆ ಸುಳಿವು ದೊರಕಿದ್ದು ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.