ಉದಯ ನಿಧಿ ಸ್ಟಾಲಿನ್ರ ‘ಸನಾತನ ವಿರೋಧಿ’ ಹೇಳಿಕೆ ವಿವಾದ| ನ್ಯಾಯಾಧೀಶರ ವೈಯಕ್ತಿಕ ನಂಬಿಕೆಯು ತೀರ್ಪಿನ ಮೇಲೆ ಪರಿಣಾಮ ಬೀರಬಾರದು: ಡಿಎಂಕೆ
ಉದಯಾನಿಧಿ ಸ್ಟಾಲಿನ್ | Photo Credit : PTI
ಚೆನ್ನೈ,ಜ.23: ಸನಾತನ ಧರ್ಮದ ಕುರಿತಾಗಿ ಉಪಮುಖ್ಯಮಂತ್ರಿ ಉದಯಾನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆಗಳು ದ್ವೇಷಭಾಷಣವೆಂಬ ಮದ್ರಾಸ್ ಹೈಕೋರ್ಟ್ನ ಅಭಿಪ್ರಾಯವನ್ನು ಡಿಎಂಕೆ ಗುರುವಾರ ವಿರೋಧಿಸಿದ್ದು, ನ್ಯಾಯಾಧೀಶರ ವೈಯಕ್ತಿಕ ನಂಬಿಕೆಗಳು ಅಥವಾ ಸಿದ್ಧಾಂತವು ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವವನ್ನು ಬೀರಬಾರದು ಎಂದು ಪ್ರತಿಪಾದಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಡಿಎಂಕೆ ವಕ್ತಾರ ಸರವಣನ್ ಅಣ್ಣಾ ದೊರೈ ಅವರು, ಮದ್ರಾಸ್ ಹೈಕೋರ್ಟ್ನ ಆದೇಶವು ‘ ಕೇಳಿರದಂತಹ ಯಾವುದೇ ವಿಷಯವನ್ನು ಖಂಡಿಸಬಾರದು’ ಎಂಬ ನ್ಯಾಯಶಾಸ್ತ್ರದ ಮೂಲಭೂತ ತತ್ವಕ್ಕೆ ಅನುಗುಣವಾಗಿಲ್ಲವೆಂದು ಹೇಳಿದ್ದಾರೆ.
ಸನಾತನ ಧರ್ಮದ ಕುರಿತು ಉಯಾನಿಧಿ ಸ್ಟಾಲಿನ್ ಅವರು ನೀಡಿದ್ದ ಹೇಳಿಕೆಗಳನ್ನು ಬಿಜೆಪಿ ನಾಯಕ ಅಮಿತ್ ಮಾಲವೀಯ ಅವರು ತಿರುಚಿದ್ದಾರೆಂದು ಆರೋಪಿಸಿ 2023ರಲ್ಲಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿಹಾಕಿದ ಬಳಿಕ ಡಿಎಂಕೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಶ್ರೀಮತಿ ಅವರು ಅವರು ಸ್ಟಾಲಿನ್ ಅವರ ಹೇಳಿಕೆಯು ದ್ವೇಷಭಾಷಣಕ್ಕೆ ಸಮನಾದುದಾಗಿದೆ ಎಂದರು.
‘‘ನಾವು ಡೆಂಗ್, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ (ಕೋವಿಡ್-19) ವೈರಸ್ ಅನ್ನು ವಿರೋಧಿಸುವುದು ಮಾತ್ರವಲ್ಲದೆ ಅವುಗಳ ಮೂಲೋತ್ಪಾಟನೆ ಮಾಡಬೇಕಾಗಿದೆ. ಅದೇ ರೀತಿ ಸನಾತನ (ಧರ್ಮ)ವನ್ನು ಕೇವಲ ವಿರೋಧಿಸುವುದು ಮಾತ್ರವಲ್ಲದೆ ಅದು ಕೂಡಾ ತೊಡೆದು ಹಾಕಬೇಕಾಗಿದೆ’’ ಎಂದು ಹೇಳಿದ್ದರೆನ್ನಲಾಗಿದೆ.
ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಸಂದರ್ಭದಲ್ಲಿ ಉದಯಾನಿಧಿ ಸ್ಟಾಲಿನ್ ಅವರು ಸಚಿವರಾಗಿದ್ದರು ಹಾಗೂ ಅವರು 2024ರ ಸೆಪ್ಟೆಂಬರ್ನಲ್ಲಿ ಉಪಮುಖ್ಯಮಂತ್ರಿ ಹುದ್ದೆಗೇರಿದ್ದರು.
ಸ್ಟಾಲಿನ್ ಈ ಹೇಳಿಕೆಯನ್ನು ಮಾಲವೀಯ ಅವರು ಖಂಡಿಸಿದ್ದು ಡಿಎಂಕೆ ನಾಯಕನು ಹಿಂದೂಗಳ ನರಮೇಧಕ್ಕೆ ಕರೆ ನೀಡಿದ್ದಾರೆಂದು ಆಪಾದಿಸಿದ್ದರು. ತಮಿಳುನಾಡಿನ ತಿರುಚ್ಚಿ ನಗರದ ಪೊಲೀಸರು ದ್ವೇಷಭಾಷಣದ ಆರೋಪದಲ್ಲಿ ಮಾಲವೀಯ ವಿರುದ್ಧ ಪ್ರಕರಣ ದಾಖಲಿಸಿದ್ದರು.
ದಯಾನಿಧಿ ಸ್ಟಾಲಿನ್ ಕುರಿತಾಗಿ ಹೈಕೋರ್ಟ್ ನೀಡಿದ ತೀರ್ಪು, ಡಿಎಂಕೆಯ ಸಂಕುಚಿತಹಾಗೂ ಹಿಂದೂವಿರೋಧಿ ಮನಸ್ಥಿತಿಗೆ ಬೀಸಿದ ಚಾಟಿಯಾಗಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಗುರುವಾರ ಪ್ರತಿಕ್ರಿಯಿಸಿದ್ದಾರೆ