×
Ad

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ INDIA ಮೈತ್ರಿಕೂಟವನ್ನು ಮುನ್ನಡೆಸಲಿರುವ ತೇಜಸ್ವಿ ಯಾದವ್

Update: 2025-04-18 10:46 IST

Photo | X/@rajeshkrinc

ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನಲೆ ವಿಪಕ್ಷಗಳ INDIA ಮೈತ್ರಿಕೂಟದ ಸಮನ್ವಯ ಸಮಿತಿಯ ಮುಖ್ಯಸ್ಥರನ್ನಾಗಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು INDIA ಮೈತ್ರಿಕೂಟ ಘೋಷಿಸಿದೆ.

ಮೈತ್ರಿಕೂಟವು ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದರೂ ತೇಜಸ್ವಿ ಯಾದವ್ ಎಲ್ಲಾ ಮೈತ್ರಿ ಪಾಲುದಾರ ಪಕ್ಷಗಳನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ಮುನ್ನಡೆಸಲಿದ್ದಾರೆ. 

ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ -ಲೆನಿನಿಸ್ಟ್), ಲಿಬರೇಶನ್ (ಸಿಪಿಐ (ಎಂಎಲ್)), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಮತ್ತು ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ನಾಯಕರು ಗುರುವಾರ ಪಾಟ್ನಾದಲ್ಲಿ ಸಭೆ ನಡೆಸಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

2020ರಲ್ಲಿ ಮುಕೇಶ್ ಸಹಾನಿ ನೇತೃತ್ವದ ವಿಐಪಿ ಪಕ್ಷ ಟಿಕೆಟ್ ಹಂಚಿಕೆ ಬಗ್ಗೆ ಸಮಾಧಾನಗೊಂಡು ಮೈತ್ರಿಕೂಟವನ್ನು ತೊರೆದಿತ್ತು.

INDIA ಮೈತ್ರಿಕೂಟದ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಬಿಹಾರ ಉಸ್ತುವಾರಿ ಕೃಷ್ಣ ಅಲ್ಲವರು, ಚುನಾವಣಾ ಪ್ರಚಾರವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಯಾದವ್ ನೇತೃತ್ವದ ಸಮನ್ವಯ ಸಮಿತಿ ತೆಗೆದುಕೊಳ್ಳಲಿದೆ. ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆ, ಪ್ರಣಾಳಿಕೆ ರೂಪಿಸುವುದು, ಪಕ್ಷಗಳ ನಡುವೆ ಸಮನ್ವಯತೆ ತರುವುದು, ಮಾಧ್ಯಮ ಸಮನ್ವಯತೆ, ಮತದಾರರ ಪಟ್ಟಿ ಮತ್ತು ಚುನಾವಣಾ ಸಂಬಂಧಿತ ಎಲ್ಲಾ ಕಾರ್ಯಗಳನ್ನು ಸಮನ್ವಯ ಸಮಿತಿಯು ಮೇಲ್ವಿಚಾರಣೆ ಮಾಡಲಿದೆ. ಸಮನ್ವಯ ಸಮಿತಿಯು ಎಲ್ಲಾ ಮೈತ್ರಿ ಪಕ್ಷಗಳ ಸದಸ್ಯರನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಯಾದವ್ ಅವರು ಬುಧವಾರ ದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News