ಬಿಹಾರ | ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದ ಬಾಲಕ 70 ದಿನಗಳ ಬಳಿಕ ಪ್ರತ್ಯಕ್ಷ!
ಸಾಂದರ್ಭಿಕ ಚಿತ್ರ | indiatoday
ಪಾಟ್ನಾ : ಬಿಹಾರದ ದರ್ಭಾಂಗದಲ್ಲಿ ಬಾಲಕನೋರ್ವ ನಾಪತ್ತೆಯಾಗಿದ್ದ. ಆತನ ಮೃತದೇಹ ಎಂದು ಇನ್ಯಾರದ್ದೋ ಮೃತದೇಹವನ್ನು ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು. ಘಟನೆ ನಡೆದು 70 ದಿನಗಳ ಬಳಿಕ ಮೃತಪಟ್ಟಿದ್ದಾನೆ ಎನ್ನಲಾದ ಬಾಲಕ ಸುರಕ್ಷಿತವಾಗಿ ಮನೆಗೆ ಮರಳಿದ್ದು, ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ.
ದರ್ಭಾಂಗದಲ್ಲಿ ಫೆಬ್ರವರಿ 8ರಂದು ಬಾಲಕ ನಾಪತ್ತೆಯಾಗಿದ್ದ. ಈ ಬಗ್ಗೆ ಬಾಲಕನ ಕುಟುಂಬ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿತ್ತು.
ಫೆಬ್ರವರಿ 28ರಂದು ತೀವ್ರವಾಗಿ ಗಾಯಗೊಂಡಿದ್ದ ಬಾಲಕನೋರ್ವ ರೈಲ್ವೆ ಹಳಿ ಮೇಲೆ ಬಿದ್ದುಕೊಂಡಿದ್ದ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬಾಲಕ ಮಾರ್ಚ್ 1ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದನು. ಮೃತದೇಹದ ಗುರುತು ಪತ್ತೆ ಹಚ್ಚುವಂತೆ ಬಾಲಕನ ಕುಟುಂಬಕ್ಕೆ ಸೂಚಿಸಲಾಯಿತು.
ಮೃತದೇಹ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ ಕುಟುಂಬ ಮೃತದೇಹದ ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿತು. ಆದರೆ ಪೊಲೀಸರು ನಿಮ್ಮ ಪುತ್ರ ಮೃತಪಟ್ಟಿದ್ದಾನೆ ಎಂದು ಮೃತದೇಹವನ್ನು ಸ್ವೀಕರಿಸುವಂತೆ ಬಾಲಕನ ಕುಟುಂಬಕ್ಕೆ ಒತ್ತಡ ಹೇರಿದೆ ಎಂದು ಆರೋಪಿಸಲಾಗಿದೆ.
ಘಟನೆಯು ದರ್ಭಾಂಗಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಾಲಕನ ಮೃತದೇಹವನ್ನು ಮುಂದಿಟ್ಟು ಸ್ಥಳೀಯರು ಪ್ರತಿಭಟನೆ ನಡೆಸಿದರು. ಪೊಲೀಸರ ಜೊತೆ ವಾಗ್ವಾದವೂ ನಡೆಯಿತು. ನಿರ್ಲಕ್ಷ್ಯದ ಆರೋಪದ ಮೇಲೆ ಸ್ಥಳೀಯ ಪೊಲೀಸ್ ಠಾಣೆಯ ಎಸ್ಎಚ್ಒ ಅವರನ್ನು ಮೇಲಾಧಿಕಾರಿಗಳು ಅಮಾನತುಗೊಳಿಸಿದ್ದರು.
ಕೊನೆಗೆ ಬಾಲಕನ ಮೃತದೇಹವನ್ನು ಅಂತ್ಯಸಂಸ್ಕಾರ ನಡೆಸಲಾಯಿತು. ಬಾಲಕನ ಕುಟುಂಬಕ್ಕೆ ಸರಕಾರದಿಂದ 4 ಲಕ್ಷ ರೂ. ಪರಿಹಾರ ಕೂಡ ನೀಡಲಾಯಿತು. ಆದರೆ, ಇದೆಲ್ಲಾ ನಡೆದ ಕೆಲ ದಿನಗಳಲ್ಲಿ ಬಾಲಕ ಜೀವಂತವಾಗಿ ಪತ್ತೆಯಾಗಿದ್ದಾನೆ.
ʼನನ್ನನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ. ಬಳಿಕ ನೇಪಾಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅಪಹರಣಕಾರರಿಂದ ತಪ್ಪಿಸಿಕೊಂಡು ಸ್ಥಳೀಯರ ಸಹಕಾರದಿಂದ ಪೋನ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿರುವುದಾಗಿʼ ಬಾಲಕ ಹೇಳಿಕೊಂಡಿದ್ದಾನೆ.
ವೀಡಿಯೊ ಕರೆ ಮೂಲಕ ಬಾಲಕನ ಗುರುತು ಪತ್ತೆ ಹಚ್ಚಿ ಬಾಲಕನನ್ನು ಮನೆಗೆ ವಾಪಾಸ್ಸು ಕರೆತರಲಾಯಿತು. ಇದೀಗ ಬಾಲಕ ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ. ಆತನ ಕುಟುಂಬವು ಈ ಬೆಳವಣಿಗೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಸರಕಾರದಿಂದ ಪಡೆದ ಧನ ಸಹಾಯದ ಮೊತ್ತವನ್ನು ವಾಪಾಸ್ಸು ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಈಗಾಗಲೇ ಅಂತ್ಯಸಂಸ್ಕಾರ ನಡೆಸಿರುವ ಮೃತದೇಹ ಯಾರದ್ದು ಎಂಬ ಪ್ರಶ್ನೆ ಮೂಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಭಾಂಗ ಎಸ್‌ಡಿಪಿಒ ಅಮಿತ್ ಕುಮಾರ್, ಜೀವಂತವಾಗಿ ಮರಳಿದ ಯುವಕನನ್ನು ವಿಚಾರಣೆ ನಡೆಲಾಗುತ್ತಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅಂತ್ಯಕ್ರಿಯೆ ಮಾಡಿದ ಮೃತದೇಹದ ಬಗ್ಗೆಯೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.