ರಾಜಸ್ಥಾನ| ಉಪಚುನಾವಣೆಯಲ್ಲಿ ಬಿಜೆಪಿ ‘ತಪ್ಪು ವಿಧಾನಗಳಿಂದʼ ಗೆಲ್ಲಬಹುದಿತ್ತು, ಆದರೆ ಜನರ ತೀರ್ಪಿಗೆ ಗೌರವ ಕೊಟ್ಟಿದ್ದೇವೆ: ಬಿಜೆಪಿ ಸಂಸದ ರಾಧಾ ಮೋಹನ್ ದಾಸ್
ರಾಧಾ ಮೋಹನ್ ದಾಸ್ ಅಗರ್ವಾಲ್ (Photo: Facebook)
ಜೈಪುರ: ರಾಜಸ್ಥಾನದ ಅಂತಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ತಪ್ಪು ವಿಧಾನಗಳನ್ನು ಬಳಸಿದ್ದರೆ ಸುಲಭವಾಗಿ ಗೆಲ್ಲಬಹುದಿತ್ತು, ಆದರೆ ಪಕ್ಷವು ಜನರ ಅಭಿಪ್ರಾಯವನ್ನು ಆಯ್ಕೆ ಮಾಡಿತು. ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿತು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ರಾಧಾ ಮೋಹನ್ ದಾಸ್ ಅಗರ್ವಾಲ್ ಮಂಗಳವಾರ ಹೇಳಿದ್ದಾರೆ ಎಂದು ವರದಿಯಾಗಿದೆ.
ನ. 14ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಮೋದ್ ಜೈನ್ 15,612 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮೋರ್ಪಾಲ್ ಸುಮನ್ ಅವರನ್ನು ಸೋಲಿಸಿದ್ದರು.
ಜೈಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗರ್ವಾಲ್, ಅಂತಾ ಉಪಚುನಾವಣೆ ಫಲಿತಾಂಶವು “ಬಿಜೆಪಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಬದ್ಧ” ಎಂಬುದಕ್ಕೆ ಪುರಾವೆಯಾಗಿದೆ ಎಂದು ಹೇಳಿದರು ಎಂದು The Wire ವರದಿ ಉಲ್ಲೇಖಿಸಿದೆ. “ಮತದಾರರ ಪಟ್ಟಿ, ಆಡಳಿತ ಯಂತ್ರ ಅಥವಾ ಇತರ ರಾಜಕೀಯ ಪ್ರಭಾವಗಳನ್ನು ಬಳಸಿಕೊಂಡು ಚುನಾವಣೆಯನ್ನು ತಿರುಚಿದ್ದರೆ, ಅಂತಾ ಕ್ಷೇತ್ರ ನಮ್ಮ ಕೈಯಲ್ಲೇ ಇರುತ್ತಿತ್ತು. ಆದರೆ ನಾವು ಜನರ ತೀರ್ಪನ್ನು ಸ್ವೀಕರಿಸಿದ್ದೇವೆ” ಎಂದು ಅವರು ಹೇಳಿದರು.
ಚುನಾವಣಾ ವ್ಯವಸ್ಥೆಯನ್ನು ದುರುಪಯೋಗದ ಆರೋಪಗಳನ್ನು ಮಾಡುತ್ತಿರುವ ವಿರೋಧಪಕ್ಷಗಳನ್ನೂ ಅಗರ್ವಾಲ್ ಟೀಕಿಸಿದರು. “ಅಂತಾ ಫಲಿತಾಂಶವೇ ವಿಮರ್ಶಕರಿಗೆ ಬಿರುಸಿನ ಉತ್ತರ” ಎಂದು ಅವರು ಪ್ರತಿಕ್ರಿಯಿಸಿದರು.
ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ದೊಡ್ಡ ಮಟ್ಟದ ಮತ ವಂಚನೆ ನಡೆದಿದೆ ಎಂದು ಕಾಂಗ್ರೆಸ್ ಪದೇ ಪದೇ ಆರೋಪಿಸುತ್ತಿದ್ದರೂ, ಚುನಾವಣಾ ಆಯೋಗವು ಈ ಆರೋಪಗಳನ್ನು ಖಂಡಿಸಿದೆ.