×
Ad

ಅಂತರ್ ಧರ್ಮೀಯ ಜೋಡಿ ಎಂಬ ಕಾರಣಕ್ಕೆ ಜೈಲು ವಿಧಿಸುವಂತಿಲ್ಲ: ಮುಸ್ಲಿಂ ವ್ಯಕ್ತಿಗೆ ಸುಪ್ರೀಂ ಜಾಮೀನು

Update: 2025-06-11 09:53 IST

ಸುಪ್ರೀಂಕೋರ್ಟ್ | PTI

ಹೊಸದಿಲ್ಲಿ: ಎರಡು ಭಿನ್ನ ಧರ್ಮಗಳ ವಯಸ್ಕ ಜೋಡಿ ಪರಸ್ಪರ ಒಪ್ಪಿಕೊಂಡು ಪ್ರತ್ಯೇಕವಾಗಿ ವಾಸಿಸಿದರೆ ಅದನ್ನು ಸರ್ಕಾರ ಆಕ್ಷೇಪಿಸುವಂತಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಹಿಂದೂ ಯುವತಿಯನ್ನು ವಿವಾಹವಾದ ಆರೋಪದಲ್ಲಿ ಆರು ತಿಂಗಳ ಸೆರೆಮನೆ ವಾಸ ಅನುಭವಿಸಿದ ಮುಸ್ಲಿಂ ವ್ಯಕ್ತಿಗೆ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನು ಒಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ಉತ್ತರಾಖಂಡ ಹೈಕೋರ್ಟ್ 2025ರ ಫೆಬ್ರುವರಿಯಲ್ಲಿ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಪೀಠ ಸ್ವೀಕರಿಸಿದೆ. ಉತ್ತರಾಖಂಡ ಧರ್ಮ ಸ್ವಾತಂತ್ರ್ಯ ಕಾಯ್ದೆ-2018ರ ನಿಬಂಧನೆಗಳಡಿಯಲ್ಲಿ ಮತ್ತು ಭಾರತೀಯ ನ್ಯಾಯಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಲಾಗಿತ್ತು. ತನ್ನ ಧರ್ಮದ ಗುರುತಿಸುವಿಕೆಯನ್ನು ಮರೆಮಾಚಿ ವಂಚನೆಯಿಂದ ಹಿಂದೂ ಸಂಪ್ರದಾಯದ ಹಿಂದೂ ಯುವತಿಯನ್ನು ವಿವಾಹವಾಗಿದ್ದ ಆರೋಪದ ಮೇಲೆ ಸೆರೆಮನೆ ವಾಸ ವಿಧಿಸಲಾಗಿತ್ತು.

"ಮೇಲ್ಮನವಿದಾರ ಮತ್ತು ಆತನ ಪತ್ನಿ ಉಭಯ ಕುಟುಂಬಗಳ ಒಪ್ಪಿಗೆ ಹಾಗೂ ಆಶಯದ ಮೇರೆಗೆ ವಿವಾಹವಾಗಿ ಜೊತೆಗೆ ವಾಸವಿದ್ದರೆ ಅದನ್ನು ಪ್ರತಿವಾದಿಯಾಗಿರುವ ಸರ್ಕಾರ, ಆಕ್ಷೇಪಿಸುವಂತಿಲ್ಲ" ಎಂದು ಸ್ಪಷ್ಟಪಡಿಸಿದೆ. ಈ ಜೋಡಿ ತಮ್ಮ ಆಯ್ಕೆಯಂತೆ ಜೊತೆಗೆ ವಾಸವಾಗಿರುವುದಕ್ಕೆ ಅಪರಾಧ ಪ್ರಕ್ರಿಯೆಗಳು ಅಡ್ಡ ಬರುವಂತಿಲ್ಲ ಎಂದು ಹೇಳಿದೆ.

ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರ್ಟ್ ನಿರ್ದೇಶನ ನೀಡಿದ್ದು, ಈಗಾಗಲೇ ಚಾರ್ಜ್‍ಶೀಟ್ ನೀಡಿರುವ ಪ್ರಕರಣದಲ್ಲಿ ಆರು ತಿಂಗಳ ಕಾಲ ಅರ್ಜಿದಾರ ಜೈಲುವಾಸ ಅನುಭವಿಸಿರುವುದನ್ನು ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News