×
Ad

ನಗದು ಪತ್ತೆ ಪ್ರಕರಣ | ಆಂತರಿಕ ಸಮಿತಿ ವರದಿ ಪ್ರಶ್ನಿಸಿ ನ್ಯಾ.ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟ್‌

Update: 2025-08-07 12:21 IST

ನ್ಯಾಯಮೂರ್ತಿ ಯಶವಂತ್ ವರ್ಮಾ

ಹೊಸದಿಲ್ಲಿ : ನಗದು ಪತ್ತೆ ಪ್ರಕರಣದಲ್ಲಿ ಆಂತರಿಕ ತನಿಖಾ ಸಮಿತಿ ವರದಿ ಪ್ರಶ್ನಿಸಿ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಯಶವಂತ್ ವರ್ಮಾ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಸತ್ತಿಗೆ ಈ ತೀರ್ಪು ಹಾದಿಯಾಗಿದೆ.

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ. ಮಸಿಹ್ ಅವರ ಪೀಠವು ಆಂತರಿಕ ಸಮಿತಿಯ ರಚನೆ ಮತ್ತು ವಿಚಾರಣಾ ಕಾರ್ಯವಿಧಾನವು ಕಾನೂನುಬಾಹಿರವಲ್ಲ ಎಂದು ಅಭಿಪ್ರಾಯಪಟ್ಟಿದೆ.

ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಹುದ್ದೆಯಿಂದ ತೆಗೆದುಹಾಕುವಂತೆ ಶಿಫಾರಸು ಮಾಡಿದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಸಮಿತಿಯ ಶಿಫಾರಸನ್ನು ಪ್ರಶ್ನಿಸಿ ವರ್ಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಹಿಂದಿನ ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ವರ್ಮಾ ಅವರು ಆಂತರಿಕ ಸಮಿತಿಯ ರಚನೆಯು ಅಸಾಂವಿಧಾನಿಕ ಎಂದು ವಾದಿಸಿದ್ದರು. ಆರಂಭದಲ್ಲಿಯೇ ಅದನ್ನು ಏಕೆ ಆಕ್ಷೇಪಿಸಲಿಲ್ಲ ಎಂದು ನ್ಯಾಯಪೀಠ ಅವರಿಗೆ ಪ್ರಶ್ನಿಸಿತ್ತು.

ನ್ಯಾಯಮೂರ್ತಿ ವರ್ಮಾ ಅವರ ದಿಲ್ಲಿಯ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೇಳೆ ಭಾರಿ ಪ್ರಮಾಣದ ನಗದು ಪತ್ತೆಯಾಗಿತ್ತು. ಈ ಘಟನೆ ನಂತರ ಅವರನ್ನು ದಿಲ್ಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಭ್ರಷ್ಟಾಚಾರದ ಆರೋಪಗಳ ಹಿನ್ನಲೆಯಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News