×
Ad

ಧೀರೇಂದ್ರ ಕೃಷ್ಣ ಶಾಸ್ತ್ರಿಯ ಪ್ರಯಾಣಕ್ಕೆ ಸರ್ಕಾರಿ ವಿಮಾನ ಬಳಸಿದ ಛತ್ತೀಸ್‌ಗಢ ಸರ್ಕಾರ!

Update: 2025-12-30 18:12 IST

Photo Credit : X 

ಹೊಸದಿಲ್ಲಿ: ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಕಥಾವಾಚಕ ಧೀರೇಂದ್ರ ಕೃಷ್ಣಶಾಸ್ತ್ರಿ ಅವರನ್ನು ಛತ್ತೀಸ್‌ಗಢ ಸರ್ಕಾರದ ವಿಮಾನದಲ್ಲಿ ರಾಯ್‌ಪುರಕ್ಕೆ ಕರೆದೊಯ್ಯಲಾಗಿದೆ ಎಂಬ ಆರೋಪಗಳು ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿವೆ. ಇದು ಸಾರ್ವಜನಿಕ ಸಂಪತ್ತಿನ ಬಳಕೆಯ ಔಚಿತ್ಯ ಮತ್ತು ಆಡಳಿತಾತ್ಮಕ ಶಿಷ್ಟಾಚಾರದ ಕುರಿತು ಪ್ರಶ್ನೆಗಳು ಎದ್ದಿವೆ.

ವಿರೋಧ ಪಕ್ಷ ಕಾಂಗ್ರೆಸ್, ಶಾಸ್ತ್ರಿಗೆ ಸರ್ಕಾರಿ ವಿಮಾನ ಬಳಸಲು ಅವಕಾಶ ನೀಡಿರುವುದು ಯಾವ ನಿಯಮ ಹಾಗೂ ಶಿಷ್ಟಾಚಾರದ ಅಡಿಯಲ್ಲಿ ಎಂಬುದನ್ನು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಛತ್ತೀಸ್‌ ಗಢದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ, ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡು, ಧರ್ಮೋಪದೇಶಕರು ರಾಜ್ಯಕ್ಕೆ ಬಂದಾಗ ಅವರಿಗೆ ಗೌರವಪೂರ್ಣ ಸ್ವಾಗತ ನೀಡುವುದು ಸಂಪ್ರದಾಯ ಎಂದು ಹೇಳಿದ್ದಾರೆ.

Full View

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಧೀರೇಂದ್ರ ಕೃಷ್ಣ ಶಾಸ್ತ್ರಿ ಸರ್ಕಾರಿ ಜೆಟ್‌ ನಿಂದ ಇಳಿಯುವ ವೇಳೆ ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿ ಸೆಲ್ಯೂಟ್ ಮಾಡುವ ದೃಶ್ಯ ಕಾಣಿಸಿದೆ. ನಂತರ ಆ ಅಧಿಕಾರಿ ಬೆರೆಟ್ ಹಾಗೂ ಬೂಟುಗಳನ್ನು ತೆಗೆದು ಶಾಸ್ತ್ರಿಯ ಪಾದಗಳನ್ನು ಮುಟ್ಟಿರುವುದು ಕಂಡು ಬಂದಿದೆ. ಪಿಟಿಐ ವರದಿ ಪ್ರಕಾರ, ಶಾಸ್ತ್ರಿಯೊಂದಿಗೆ ವಿಮಾನದಿಂದ ಇಳಿದವರು ಛತ್ತೀಸ್‌ಗಢದ ಕ್ಯಾಬಿನೆಟ್ ಸಚಿವ ಗುರು ಖುಷ್ವಂತ್ ಸಾಹೇಬ್ ಎಂದು ತಿಳಿದು ಬಂದಿದೆ.

ಈ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್, ಇದನ್ನು “ರಾಜ್ಯ ಸರ್ಕಾರದ ಖಜಾನೆಯಿಂದ ನೇರ ಕಳ್ಳತನ ಹಾಗೂ ಸಾರ್ವಜನಿಕ ಸಂಪತ್ತಿನ ದುರುಪಯೋಗ” ಎಂದು ಆರೋಪಿಸಿದೆ. ಪಕ್ಷದ ಛತ್ತೀಸ್‌ಗಢ ಘಟಕದ ಸಂವಹನ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ, ಧಾರ್ಮಿಕ ವ್ಯಕ್ತಿಗೆ ಸರ್ಕಾರಿ ವಿಮಾನ ಸೌಲಭ್ಯ ನೀಡಿರುವುದು ಸಾರ್ವಜನಿಕ ಹಣದ ದುರುಪಯೋಗಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದ್ದಾರೆ.

ಇದೇ ವೇಳೆ, ಸಚಿವ ಗುರು ಖುಷ್ವಂತ್ ಸಾಹೇಬ್ ಅವರ ಅಧಿಕೃತ ಪ್ರಯಾಣ ವೇಳಾಪಟ್ಟಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ರಾಯ್‌ಪುರ–ಸತ್ನಾ ನಡುವಿನ ಸರ್ಕಾರಿ ವಿಮಾನ ಪ್ರಯಾಣ ಹಾಗೂ ಸತ್ನಾದಲ್ಲಿ ಅರ್ಧ ಗಂಟೆಯ ನಿಲುಗಡೆ ಕುರಿತು ಪ್ರಶ್ನೆ ಎತ್ತಿದೆ. ಸತ್ನಾ, ಶಾಸ್ತ್ರಿಯವರ ಬಾಗೇಶ್ವರ ಧಾಮದಿಂದ ಸುಮಾರು ಮೂರು ಗಂಟೆಗಳ ರಸ್ತೆ ಪ್ರಯಾಣದ ದೂರದಲ್ಲಿದೆ ಎಂದು ಪಕ್ಷ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸಾಹೇಬ್, ಶಾಸ್ತ್ರಿಯ ಪ್ರಯಾಣದ ಶಿಷ್ಟಾಚಾರದ ಪ್ರಶ್ನೆಗಳನ್ನು ತಪ್ಪಿಸಲು ಸತ್ನಾಕ್ಕೆ ತೆರಳಲಾಗಿದೆ ಎಂಬ ಆರೋಪವನ್ನು ಆಧಾರರಹಿತವೆಂದು ತಳ್ಳಿ ಹಾಕಿದ್ದಾರೆ.

ಭಿಲಾಯಿಯಲ್ಲಿ ನಡೆದ ಹನುಮಾನ್ ಕಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ವಿಜಯ್ ಶರ್ಮಾ, ಜನಸಮೂಹವನ್ನು ಸೆಳೆಯುವ ವ್ಯಕ್ತಿ ರಾಜ್ಯಕ್ಕೆ ಬಂದಾಗ ಅವರಿಗೆ ಗೌರವ ನೀಡುವುದು ಸಹಜ ಎಂದು ಪುನರುಚ್ಚರಿಸಿದರು.

ಈ ವಿವಾದ, ಧೀರೇಂದ್ರ ಕೃಷ್ಣ ಶಾಸ್ತ್ರಿ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಡುವಿನ ಹಿಂದಿನ ವಾಗ್ವಾದದ ಹಿನ್ನಲೆಯಲ್ಲಿ ಮತ್ತಷ್ಟು ಉಲ್ಬಣಗೊಂಡಿದೆ. ಬಘೇಲ್, ಶಾಸ್ತ್ರಿಯವರು ಮೂಢನಂಬಿಕೆಗಳನ್ನು ಪ್ರಚಾರ ಮಾಡುತ್ತಾರೆ ಎಂದು ಆರೋಪಿಸಿದ್ದರೆ, ಇದಕ್ಕೆ ಪ್ರತಿಯಾಗಿ ಶಾಸ್ತ್ರಿ ತೀವ್ರ ಪ್ರತಿಕ್ರಿಯೆ ನೀಡಿದ್ದರು.

ಮಧ್ಯಪ್ರದೇಶದ ಬಾಗೇಶ್ವರ ಧಾಮದ ಮುಖ್ಯಸ್ಥರಾಗಿರುವ ಧೀರೇಂದ್ರ ಶಾಸ್ತ್ರಿ, ‘ಪವಾಡ’ ಹಾಗೂ ‘ಚಿಕಿತ್ಸೆ’ಗಳ ಕುರಿತ ಹೇಳಿಕೆಗಳು, ಹಿಂದೂ ರಾಷ್ಟ್ರದ ಕರೆ ಮತ್ತು ‘ಲವ್ ಜಿಹಾದ್’ ಸಂಬಂಧಿತ ಹೇಳಿಕೆಗಳಿಂದ ಹಿಂದೆಯೂ ಹಲವು ಬಾರಿ ವಿವಾದಕ್ಕೆ ಒಳಗಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News