×
Ad

"ದೇಶದಲ್ಲಿ ಕಲಾತ್ಮಕ ಸ್ವಾತಂತ್ರ್ಯವಿದೆ": ಬ್ಯಾಟಲ್ ಆಫ್ ಗಲ್ವಾನ್ ಚಿತ್ರವನ್ನು ಟೀಕಿಸಿದ ಚೀನಾಕ್ಕೆ ಭಾರತ ತಿರುಗೇಟು

Update: 2025-12-30 20:17 IST

Photo Credit ; imdb.com

ಹೊಸದಿಲ್ಲಿ,ಡಿ.30: ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರವು ಸತ್ಯಗಳನ್ನು ತಿರುಚಿದೆ ಎಂದು ಚೀನಾದ ಮಾಧ್ಯಮಗಳು ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ‘ಕಲಾತ್ಮಕ ಸ್ವಾತಂತ್ರ’ವಿದೆ ಮತ್ತು ನಿರ್ಮಾಪಕರು ಈ ಸ್ವಾತಂತ್ರವನ್ನು ಬಳಸಿಕೊಂಡು ಚಲನಚಿತ್ರಗಳನ್ನು ನಿರ್ಮಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಭಾರತವು ಮಂಗಳವಾರ ಹೇಳಿದೆ ಎಂದು ಸರಕಾರಿ ಮೂಲಗಳು ತಿಳಿಸಿದವು.

ಚಿತ್ರವು 2020ರಲ್ಲಿ ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಭಾರತೀಯ ಮತ್ತು ಚೀನಿ ಪಡೆಗಳ ನಡುವೆ ನಡೆದಿದ್ದ ಘರ್ಷಣೆಗಳನ್ನು ಆಧರಿಸಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಯೊಂದಿಗೆ ಹೋರಾಡುತ್ತ ಹುತಾತ್ಮರಾಗಿದ್ದ 16 ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಲ್ಲ ಸಂತೋಷ ಬಾಬು ಅವರ ಪಾತ್ರವನ್ನು ನಿರ್ವಹಿಸಿದ್ದಾರೆ.

ಭಾರತವು ಅಭಿವ್ಯಕ್ತಿ ಸ್ವಾತಂತ್ರವನ್ನು ಹೊಂದಿರುವ ದೇಶವಾಗಿದೆ ಮತ್ತು ಸಿನಿಮೀಯ ಅಭಿವ್ಯಕ್ತಿಯು ಅದರ ಅವಿಭಾಜ್ಯ ಭಾಗವಾಗಿದೆ. ಈ ಕಲಾತ್ಮಕ ಸ್ವಾತಂತ್ರ್ಯದಂತೆ ಚಿತ್ರಗಳನ್ನು ನಿರ್ಮಿಸಲು ಭಾರತದ ಚಲನಚಿತ್ರ ನಿರ್ಮಾಪಕರು ಸ್ವತಂತ್ರರಿದ್ದಾರೆ. ಈ ನಿರ್ದಿಷ್ಟ ಚಿತ್ರದ ಬಗ್ಗೆ ಕಳವಳಗಳಿದ್ದವರು ಯಾವುದೇ ಸ್ಪಷ್ಟೀಕರಣಕ್ಕಾಗಿ ಭಾರತದ ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಬಹುದು. ಚಿತ್ರದಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಮೂಲಗಳು ಹೇಳಿದ್ದನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಚಿತ್ರದಲ್ಲಿ ಬಿಂಬಿಸಲಾಗಿರುವ 2020ರ ಘರ್ಷಣೆಗಳ ಘಟನಾವಳಿಗಳು ವಾಸ್ತವಗಳಿಗೆ ಅನುಗುಣವಾಗಿಲ್ಲ ಎಂದು ಚೀನಾದ ಸರಕಾರಿ ಸ್ವಾಮ್ಯದ ದೈನಿಕ ಗ್ಲೋಬಲ್ ಟೈಮ್ಸ್‌ನಲ್ಲಿಯ ಲೇಖನವೊಂದು ಆರೋಪಿಸಿದೆ. ಭಾರತೀಯ ಚಲನಚಿತ್ರಗಳು ಹೆಚ್ಚೆಂದರೆ ಮನರಂಜನೆ ಆಧಾರಿತ ಭಾವನಾತ್ಮಕ ಚಿತ್ರಣವನ್ನು ಒದಗಿಸುತ್ತವೆ. ಆದರೆ ಯಾವುದೇ ಸಿನಿಮೀಯ ಉತ್ಪ್ರೇಕ್ಷೆಯು ಇತಿಹಾಸವನ್ನು ಪುನಃ ಬರೆಯಲು ಅಥವಾ ಚೀನಾದ ಸಾರ್ವಭೌಮ ಭೂಪ್ರದೇಶವನ್ನು ರಕ್ಷಿಸುವ ಪಿಎಲ್‌ಎ ದೃಢಸಂಕಲ್ಪವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಲೇಖನದಲ್ಲಿ ಹೇಳಲಾಗಿದೆ.

ಗ್ಲೋಬಲ್ ಟೈಮ್ಸ್ ಲೇಖನವು ಗಲ್ವಾನ್ ಕಣಿವೆಯು ವಾಸ್ತವಿಕ ನಿಯಂತ್ರಣ ರೇಖೆಯ ಚೀನಿ ಪಾರ್ಶ್ವದಲ್ಲಿದೆ ಎಂಬ ಸುಳ್ಳು ಪ್ರತಿಪಾದನೆಯನ್ನು ಒಳಗೊಂಡಿದೆ. ಜೂನ್ 2020ರ ಘರ್ಷಣೆಗಳ ಹೊಣೆಗಾರಿಕೆಯನ್ನು ಭಾರತದ ಮೇಲೆ ಹೊರಿಸಿರುವ ಅದು, ಭಾರತೀಯ ಪಡೆಗಳು ಎಲ್‌ಎಸಿಯನ್ನು ಅತಿಕ್ರಮಿಸಿದ್ದವು ಮತ್ತು ಕಾದಾಟವನ್ನು ಪ್ರಚೋದಿಸಿದ್ದವು ಎಂದು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News