ತ್ರಿಪುರಾ ವಿದ್ಯಾರ್ಥಿಯ ಹತ್ಯೆ ಪ್ರಕರಣ: ಡೆಹ್ರಾಡೂನ್ ಜಿಲ್ಲಾಧಿಕಾರಿ, ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ NHRC
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ | Photo Credit ; nhrc.nic.in
ಹೊಸದಿಲ್ಲಿ: ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಲ್ಲಿ ಇತ್ತೀಚೆಗೆ ನಡೆದಿದ್ದ ತ್ರಿಪುರ ವಿದ್ಯಾರ್ಥಿಯ ಜನಾಂಗೀಯ ಪ್ರೇರಿತ ಹತ್ಯೆ ಆರೋಪದ ಕುರಿತು ವಿವರಣೆ ಕೋರಿ ಡೆಹ್ರಾಡೂನ್ ಜಿಲ್ಲಾಧಿಕಾರಿ ಹಾಗೂ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿಗೊಳಿಸಿದೆ.
ಜನಾಂಗೀಯ ಹತ್ಯೆ ಆರೋಪದ ಕುರಿತು ತನಿಖೆ ನಡೆಸಬೇಕು ಹಾಗೂ ಕೈಗೊಂಡ ಕ್ರಮದ ಕುರಿತು ಇನ್ನು ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಡೆಹ್ರಾಡೂನ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.
ಉತ್ತರಾಖಂಡ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಬೇಕಾದ ಪ್ರಕರಣದ ವಿಚಾರಣೆಯ ಪ್ರತಿಯನ್ನು ನೀಡುವಂತೆಯೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.
“ಇದರೊಂದಿಗೆ, ಇಡೀ ರಾಜ್ಯದಾದ್ಯಂತ ಈಶಾನ್ಯ ಭಾರತ ಪ್ರಾಂತ್ಯದ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಗೊಳಿಸಬೇಕು ಎಂದು ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ” ಎಂದೂ ಈ ನೋಟಿಸ್ ನಲ್ಲಿ ಹೇಳಲಾಗಿದೆ.
ಡಿಸೆಂಬರ್ 9ರಂದು ಡೆಹ್ರಾಡೂನ್ ನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಅಂತಿಮ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ಏಂಜೆಲ್ ಚಕ್ಮಾ ಎಂಬ ವಿದ್ಯಾರ್ಥಿಯ ಮೇಲೆ ಕೆಲವು ಯುವಕರು ಚಾಕು ಹಾಗೂ ಬ್ರೇಸ್ ಲೆಟ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಏಂಜೆಲ್ ಚಕ್ಮಾ, ಡಿಸೆಂಬರ್ 26ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದನು. ಇದರ ಬೆನ್ನಿಗೇ, ಈ ಘಟನೆಯ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.