AI ವೀಡಿಯೊ ಮೂಲಕ ಪ್ರಧಾನಿ ಮೋದಿ ತಾಯಿಗೆ ಕಾಂಗ್ರೆಸ್‌ನಿಂದ ಅವಮಾನ: ಬಿಜೆಪಿ ಆರೋಪ
Photo | indiatoday
ಪಾಟ್ನಾ: ಬಿಹಾರ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ AI-ರಚಿತ ವೀಡಿಯೊ ರಾಜಕೀಯ ವಲಯದಲ್ಲಿ ವಿವಾದಕ್ಕೆ ನಾಂದಿ ಹಾಡಿದೆ. 36 ಸೆಕೆಂಡುಗಳ ಕ್ಲಿಪ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿ ಹೀರಾಬೆನ್ ಮೋದಿಯನ್ನು ಹೋಲುವ ಪಾತ್ರಗಳು ಕನಸಿನಂತಿರುವ ಹಿನ್ನೆಲೆಯಲ್ಲಿ ಕಾಣಿಸಿಕೊಂಡಿವೆ.
“ಸಾಹಬ್ ನ ಕನಸಿನಲ್ಲಿ ಮಾತಾ ಕಾಣಿಸಿಕೊಳ್ಳುತ್ತಾರೆ” ಎಂಬ ಶೀರ್ಷಿಕೆಯಿಂದ ಪ್ರಕಟವಾದ ಈ ವೀಡಿಯೊವನ್ನು ಬಿಜೆಪಿ "ಅಸಹ್ಯಕರ ವೈಯಕ್ತಿಕ ದಾಳಿ" ಹಾಗೂ "ಚುನಾವಣೆಗೆ ಮುನ್ನ ಜನರ ಭಾವನೆಗಳನ್ನು ನೋಯಿಸಲು ಮಾಡಲಾದ ಪ್ರಯತ್ನ" ಎಂದು ಆರೋಪಿಸಿದೆ.
ಬಿಜೆಪಿ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಈ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ. "ಪ್ರಧಾನಿ ಮೋದಿ ಯಾವಾಗಲೂ ಕುಟುಂಬ ಜೀವನವನ್ನು ರಾಜಕೀಯದಿಂದ ಪ್ರತ್ಯೇಕವಾಗಿ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಇದೀಗ ಡೀಪ್ ಫೇಕ್ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ತಾಯಂದಿರನ್ನೇ ಅವಮಾನಿಸುವ ಹಾದಿ ಹಿಡಿದಿದೆ. ಇದು ರಾಜಕೀಯದ ಅತ್ಯಂತ ಕೀಳು ಹಂತ ಎಂದು ಅವರು ಟೀಕಿಸಿದ್ದಾರೆ. ಅವರು ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.
"ಕಾಂಗ್ರೆಸ್ ಈ ವೀಡಿಯೊ ಮೂಲಕ ಎಲ್ಲಾ ಮಿತಿಗಳನ್ನು ಮೀರಿ ಹೋಗಿದೆ. ಪ್ರಧಾನಿಯವರ ತಾಯಿಯನ್ನು ಗುರಿಯಾಗಿಸುವ ಮೂಲಕ ಪಕ್ಷವು ತನ್ನ ರಾಜಕೀಯ ದಿವಾಳಿತನವನ್ನು ತೋರಿಸಿದೆ. ಕ್ಷಮೆಯಾಚಿಸುವ ಬದಲು ಸುಳ್ಳು ಹೇಳಿ ಆರೋಪಿಗಳನ್ನು ಸಮರ್ಥಿಸುವ ನಾಚಿಕೆಗೇಡಿತನವನ್ನು ಮುಂದುವರಿಸುತ್ತಿದೆ," ಎಂದು ಬಿಜೆಪಿ ವಕ್ತಾರ ಶೆಹಝಾದ್ ಪೂನವಾಲಾ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.