Maharashtra | ಕಾಂಗ್ರೆಸ್ ನಾಯಕ ನಾನಾ ಪಟೋಲೆ ಪಾದ ತೊಳೆಯುವ ವೀಡಿಯೊ ವೈರಲ್: ‘ಇದು ಕಾಂಗ್ರೆಸ್ ಸಂಸ್ಕೃತಿ’ ಎಂದು ಬಿಜೆಪಿ ವ್ಯಂಗ್ಯ
‘ಕುಟುಂಬದವರೇ ಪೂಜೆ ಮಾಡಿದ್ದರು’ ಎಂದು ನಾನಾ ಪಟೋಲೆ ಸ್ಪಷ್ಟನೆ
Photo | NDTV
ಮುಂಬೈ: ಗುರು ಪೂರ್ಣಿಮೆಯ ಅಂಗವಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ನಾನಾ ಪಟೋಲೆ ಅವರ ಪಾದವನ್ನು ಇಬ್ಬರು ವ್ಯಕ್ತಿಗಳು ತೊಳೆದು ಪೂಜೆ ಸಲ್ಲಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಮಹಾರಾಷ್ಟ್ರದಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಉಲ್ಲೇಖಿಸಿ ಬಿಜೆಪಿ, "ಇದು ಕಾಂಗ್ರೆಸ್‌ನ ಸಂಸ್ಕೃತಿಯನ್ನು ತೋರಿಸುತ್ತದೆ" ಎಂದು ಟೀಕಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನಾನಾ ಪಟೋಲೆ, "ಪಾದಪೂಜೆ ಮಾಡಿದವರು ನನ್ನ ಕುಟುಂಬದ ಇಬ್ಬರು ಯುವ ಸದಸ್ಯರು. ನಾನು ಯಾರನ್ನೂ ಅದಕ್ಕೆ ಬಲವಂತಪಡಿಸಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ನಾನಾ ಪಟೋಲೆ ಸೋಫಾದ ಮೇಲೆ ಕುಳಿತಿದ್ದು, ಇಬ್ಬರು ವ್ಯಕ್ತಿಗಳು ಅವರ ಪಾದವನ್ನು ನೀರಿನಿಂದ ತೊಳೆದು ಪುಷ್ಪಾರ್ಚನೆ ಮಾಡುತ್ತಿರುವುದು ಕಾಣಿಸುತ್ತದೆ. ಅವರ ಪಾದದ ಬಳಿ ಹಣ್ಣುಗಳನ್ನು ಇರಿಸಿರುವ ದೃಶ್ಯವೂ ವಿಡಿಯೊದಲ್ಲಿ ದಾಖಲಾಗಿದೆ.
ವಿಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ನಾನಾ ಪಟೋಲೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ಸರಕಾರದ ಸಚಿವ ಹಾಗೂ ಬಿಜೆಪಿ ನಾಯಕ ಚಂದ್ರಶೇಖರ್ ಬವಾಂಕುಲೆ, "ಇದು ಕಾಂಗ್ರೆಸ್‌ನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಘಟನೆಗಳು ಟೀಕೆ ಮತ್ತು ನಕಾರಾತ್ಮಕ ಪ್ರಚಾರವನ್ನಷ್ಟೇ ಆಹ್ವಾನಿಸುತ್ತವೆ" ಎಂದು ಹೇಳಿದ್ದಾರೆ.
"ಇಂತಹ ಕೃತ್ಯಗಳಲ್ಲಿ ಭಾಗಿಯಾಗುವುದು ಕಾಂಗ್ರೆಸ್ ನಾಯಕರ ಸಂಸ್ಕೃತಿಯಾಗಿದೆ. ಇಂತಹ ಘಟನೆಗಳಿಂದ ಅವರು ಪಾಠ ಕಲಿಯಬೇಕಿತ್ತು. ಇಂತಹ ನಡೆಗಳಿಂದ ಟೀಕೆ ಮತ್ತು ನಕಾರಾತ್ಮಕ ಪ್ರಚಾರವನ್ನಲ್ಲದೆ ಬೇರೇನನ್ನೂ ಪಡೆಯಲು ಸಾಧ್ಯವಿಲ್ಲ" ಎಂದು ಅವರು ಟೀಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾನಾ ಪಟೋಲೆ, "ಗುರು ಪೂರ್ಣಿಮೆಯ ದಿನ ನನ್ನ ಕುಟುಂಬದ ಇಬ್ಬರು ಯುವ ಸದಸ್ಯರು ನನ್ನನ್ನು ಗುರು ಎಂದು ಭಾವಿಸಿ ಗೌರವದ ಸಂಕೇತವಾಗಿ ಪಾದಪೂಜೆ ಮಾಡಲು ಮುಂದಾದರು. ಇಂತಹ ಪದ್ಧತಿಯನ್ನು ಅನುಸರಿಸುವಂತೆ ನಾನು ಯಾರನ್ನೂ ಬಲವಂತಪಡಿಸಿಲ್ಲ" ಎಂದು ಹೇಳಿದ್ದಾರೆ.
ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದ ಅವರು, "ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಬಿಜೆಪಿಗೆ ಉಪನ್ಯಾಸ ನೀಡುವ ನೈತಿಕ ಹಕ್ಕಿಲ್ಲ. ದೇಣಿಗೆ ನಿಧಿಯ ಹಣವನ್ನು ಲೂಟಿ ಮಾಡುವವರು ನಮಗೆ ಸಲಹೆ ನೀಡುವ ಅಗತ್ಯವಿಲ್ಲ" ಎಂದು ಅವರು ರಾಮಮಂದಿರ ದೇಣಿಗೆ ನಿಧಿ ಕಳವು ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿದರು.
Nagpur,Maharashtra - A controversial video of former Maharashtra Congress president Nana Patole has gone viral on social media, showing him washing feet with milk.The clip has triggered a wave of anger against Patole, with many criticising the act as contrary to the ideology of… pic.twitter.com/jyiCznhXdg
— NextMinute News (@nextminutenews7) August 2, 2026