×
Ad

ಕ್ರಿಕೆಟಿಗರು ನನಗೆ ಬೆತ್ತಲೆ ಚಿತ್ರಗಳನ್ನು ಕಳಿಸುತ್ತಿದ್ದರು: ಆಘಾತಕಾರಿ ಅನುಭವವನ್ನು ಹಂಚಿಕೊಂಡ ಸಂಜಯ್ ಬಂಗಾರ್ ಪುತ್ರಿ

Update: 2025-04-19 20:49 IST

Credit: Instagram/anayabangar

ಹೊಸದಿಲ್ಲಿ: ತಾನು ಪುರುಷನಿಂದ ಮಹಿಳೆಯಾಗಿ ಲಿಂಗ ಪರಿವರ್ತನೆಗೊಂಡಾಗಿನಿಂದಿನ ಪಯಣದ ಕುರಿತು ಆಘಾತಕಾರಿ ಸಂಗತಿಗಳನ್ನು ಬಯಲು ಮಾಡಿರುವ ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ತರಬೇತುದಾರ ಸಂಜಯ್ ಬಂಗಾರ್ ಪುತ್ರಿ ಅನನ್ಯ, “ನನಗೆ ಬೆತ್ತಲೆ ಚಿತ್ರಗಳನ್ನು ಕಳಿಸುತ್ತಿದ್ದ ಕ್ರಿಕೆಟಿಗರು, ನನ್ನೊಂದಿಗೆ ಮಲುಗುವ ಬಯಕೆ ವ್ಯಕ್ತಪಡಿಸುತ್ತಿದ್ದರು” ಎಂದು ಆರೋಪಿಸಿದ್ದಾರೆ.

ಕ್ರಿಕೆಟ್ ಜಗತ್ತು ತುಂಬಾ ಅಸುರಕ್ಷಿತವಾಗಿದ್ದು, ಸಂಪೂರ್ಣ ಪುರುಷಾಹಂಕಾರದಿಂದ ತುಂಬಿದೆ ಎಂದು Lallantop ಯೂಟ್ಯೂಬ್ ಸಂದರ್ಶನದಲ್ಲಿ ಆರೋಪಿಸಿರುವ ಅನನ್ಯ, ನಾನು ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ, ಗೋಪ್ಯತೆ ಕಾಯ್ದುಕೊಳ್ಳಬೇಕಾದ ಪರಿಸ್ಥಿತಿಯಿತ್ತು ಎಂಬ ಸಂಗತಿಯತ್ತ ಬೆಳಕು ಚೆಲ್ಲಿದ್ದಾರೆ. “ನಾನು ಈಗಿನ ಪ್ರಖ್ಯಾತ ಆಟಗಾರರಾದ ಮುಶೀರ್ ಖಾನ್, ಸರ್ಫರಾಝ್ ಖಾನ್, ಯಶಸ್ವಿ ಜೈಸ್ವಾಲ್ ರಂಥವರೊಂದಿಗೆ ಆಟವಾಡಿದ್ದೇನೆ. ಆದರೆ, ನನ್ನ ತಂದೆ ಪ್ರಸಿದ್ಧ ವ್ಯಕ್ತಿಯಾಗಿದ್ದುದರಿಂದ, ನಾನು ನನ್ನ ಕುರಿತು ಗೋಪ್ಯತೆಯನ್ನು ಕಾಯ್ದುಕೊಳ್ಳಬೇಕಾಗಿತ್ತು” ಎಂದು ಅವರು ತಿಳಿಸಿದ್ದಾರೆ.

ನನ್ನ ನಿರ್ಧಾರದ ಕುರಿತು ನನಗೆ ಬೆಂಬಲ ದೊರೆಯಿತು ಎಂಬುದನ್ನು ಒಪ್ಪಿಕೊಂಡಿರುವ ಅನನ್ಯ, ನನ್ನ ನಿರ್ಧಾರಕ್ಕಾಗಿ ಕಿರುಕುಳವನ್ನೂ ಎದುರಿಸಬೇಕಾಯಿತು ಎಂದೂ ಹೇಳಿದ್ದಾರೆ. ಕೆಲವು ಕ್ರಿಕೆಟಿಗರು ಪದೇ ಪದೇ ತಮ್ಮ ನಗ್ನ ಚಿತ್ರಗಳನ್ನು ನನಗೆ ಕಳಿಸುತ್ತಿದ್ದರು. ಇನ್ನೂ ಕೆಲವರು ನನ್ನ ನಗ್ನ ಚಿತ್ರಗಳನ್ನು ತಮಗೆ ಕಳಿಸುವಂತೆ ಮನವಿ ಮಾಡುತ್ತಿದ್ದರು ಎಂದೂ ಆಕೆ ಬಹಿರಂಗಗೊಳಿಸಿದ್ದಾರೆ. “ಎಲ್ಲರೆದುರು ನನಗೆ ಬೈಯ್ಯುತ್ತಿದ್ದ ವ್ಯಕ್ತಿಯೇ, ನನ್ನ ಪಕ್ಕದಲ್ಲಿ ಬಂದು ಕುಳಿತು, ನನ್ನ ಭಾವಚಿತ್ರಗಳನ್ನು ಕೇಳಿದ್ದರು” ಎಂದೂ ಅವರು ಹೇಳಿದ್ದಾರೆ.

ನನ್ನ ಪರಿಸ್ಥಿತಿಯನ್ನು ಹಿರಿಯ ಕ್ರಿಕೆಟಿಗರೊಬ್ಬರಿಗೆ ಖಾಸಗಿಯಾಗಿ ತಿಳಿಸಿದಾಗ, ಅದಕ್ಕವರು, “ನಿನ್ನ ಕಾರಿನಲ್ಲಿ ಹೋಗೋಣ, ನಾನು ನಿನ್ನೊಂದಿಗೆ ಮಲಗಬೇಕು” ಎಂದು ಪ್ರತಿಕ್ರಿಯಿಸಿದ್ದರು ಎಂದು ಆಕೆ ಮತ್ತೊಂದು ಘಟನೆಯನ್ನು ಸ್ಮರಿಸಿದ್ದಾರೆ.

ತನ್ನ ಪಯಣದ ಕುರಿತು ಬೆಳಕು ಚೆಲ್ಲಿರುವ ಅನನ್ಯ, ನಾನು 8-9 ವರ್ಷದ ವಯಸ್ಸಿನಲ್ಲಿದ್ದಾಗ, ನಾನು ಸಹಜ ವ್ಯಕ್ತಿಯಾಗಿಲ್ಲ ಎಂಬ ಸಂಗತಿ ನನ್ನ ಅರಿವಿಗೆ ಬಂದಿತು. ನಾನು ನನ್ನ ತಾಯಿಯ ವಾರ್ಡ್ ರೋಬ್ ನಿಂದ ಬಟ್ಟೆಗಳನ್ನು ಧರಿಸಿ ನನ್ನನ್ನು ನಾನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದೆ ಹಾಗೂ ನಾನು ಬಾಲಕಿಯಾಗಬೇಕು ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ” ಎಂದು ತಿಳಿಸಿದ್ದಾರೆ.

ಈ ಹಿಂದೆ ಆರ್ಯನ್ ಆಗಿದ್ದ ಅನನ್ಯರ ಕ್ರಿಕೆಟ್ ವೃತ್ತಿ ಜೀವನವು 12 ವರ್ಷದವರಿದ್ದಾಗ ಆರಂಭಗೊಂಡಿತ್ತು. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯಮಗಳ ಪ್ರಕಾರ, ಲಿಂಗಪರಿವರ್ತನೆಗೊಂಡ ಮಹಿಳೆಯರು ಕ್ರಿಕೆಟ್ ಆಡದಂತೆ ನಿಷೇಧ ಹೇರಲಾಗಿದೆ.

ಮಹಿಳಾ ಕ್ರೀಡೆಗಳಲ್ಲಿ ಲಿಂಗಾಂತರಿ ಮಹಿಳೆಯರ ಅರ್ಹತೆಯನ್ನು ನಿರ್ಧರಿಸಲು ಹೊಸ ಮಾನದಂಡಗಳನ್ನು ನಿಗದಿಗೊಳಿಸಬೇಕು ಎಂದೂ ಅವರು ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ.

ಕಳೆದ ವರ್ಷ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದ ಅನನ್ಯ, ಲಿಂಗಾಂತರಿಗಳು ಕ್ರಿಕೆಟ್ ನಲ್ಲಿ ಪಾಲ್ಗೊಳ್ಳದಂತೆ ವಿಧಿಸಲಾಗಿರುವ ನಿಷೇಧದ ಕುರಿತು ನೋವು ತೋಡಿಕೊಂಡಿದ್ದರು.

“ನಾವು ನಮ್ಮ ಗುರುತು ಹಾಗೂ ವ್ಯಾಮೋಹದ ನಡುವೆ ಆಯ್ಕೆ ಮಾಡಿಕೊಳ್ಳುವಂತಹ ನೀತಿಗಳ ಅವಶ್ಯಕತೆಯಿಲ್ಲ. ಲಿಂಗಾಂತರಿ ಮಹಿಳೆಯರು ಸ್ಪರ್ಧಿಸುವ, ಆಟವಾಡುವ ಹಾಗೂ ಬೆಳೆಯುವ ಹಕ್ಕಿಗೆ ಅರ್ಹರಾಗಿದ್ದಾರೆ” ಎಂದು ಅವರು ತಮ್ಮ ಕಳೆದ ವರ್ಷದ ಪೋಸ್ಟ್ ನಲ್ಲಿ ಪ್ರತಿಪಾದಿಸಿದ್ದರು.

ಗಮನಾರ್ಹ ಸಂಗತಿಯೆಂದರೆ, ಮಾರ್ಚ್ 30, 2024ರವರೆಗೆ 29 ವಿವಿಧ ಕ್ರೀಡೆಗಳಲ್ಲಿ 600ಕ್ಕೂ ಹೆಚ್ಚು ಮಹಿಳಾ ಸ್ಪರ್ಧಿಗಳು 400ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ತಮ್ಮ ಲಿಂಗಾಂತರಿ ಮಹಿಳಾ ಪ್ರತಿಸ್ಪರ್ಧಿಗಳೆದುರು 890ಕ್ಕೂ ಹೆಚ್ಚು ಪದಕಗಳನ್ನು ಕಳೆದುಕೊಂಡಿದ್ದಾರೆ ಎಂಬ ಸಂಗತಿ ವಿಶ್ವ ಸಂಸ್ಥೆಯ ವರದಿಯಲ್ಲಿ ಬಹಿರಂಗಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News