×
Ad

ದಿಲ್ಲಿ ವಿಧಾನಸಭಾ ಚುನಾವಣೆ | 13 ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳನ್ನು ಪಡೆದ ಕಾಂಗ್ರೆಸ್

Update: 2025-02-09 16:54 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: ಅರವಿಂದ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷ(ಆಪ್)ದ ಹಲವಾರು ಪ್ರಮುಖ ನಾಯಕರು ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಡೆದಿರುವ ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋಲನ್ನಪ್ಪಿದ್ದಾರೆ.

ಕೇಜ್ರಿವಾಲ್ ಹೊಸದಿಲ್ಲಿ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರೆ,ಮನೀಷ್ ಸಿಸೋದಿಯಾ ಜಂಗಪುರದಲ್ಲಿ,ಸೌರಭ ಭಾರದ್ವಾಜ ಗ್ರೇಟರ್ ಕೈಲಾಷ್‌ನಲ್ಲಿ,ಸೋಮನಾಥ ಭಾರ್ತಿ ಮಾಳವೀಯ ನಗರದಲ್ಲಿ ಮತ್ತು ದುರ್ಗೇಶ ಪಾಠಕ್ ರಾಜಿಂದರ್ ನಗರದಲ್ಲಿ ಸೋಲಿನ ರುಚಿಯನ್ನು ಕಂಡಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಯ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳನ್ನು ಗಳಿಸಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಒಟ್ಟು 70 ಸ್ಥಾನಗಳ ಪೈಕಿ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಿಜೆಪಿಯ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳನ್ನು ಕಬಳಿಸಿದ್ದಾರೆ.

2013ರಿಂದ ಹೊಸದಿಲ್ಲಿ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದ ಆಪ್ ಮುಖ್ಯಸ್ಥ ಕೇಜ್ರಿವಾಲ್‌ರನ್ನು ಬಿಜೆಪಿಯ ಪರ್ವೇಶ್ ವರ್ಮಾ 4,089 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ ತೃತೀಯ ಸ್ಥಾನಿ ಕಾಂಗ್ರೆಸ್ ಅಭ್ಯರ್ಥಿ ಸಂದೀಪ ದೀಕ್ಷಿತ 4,568 ಮತಗಳನ್ನು ಗಳಿಸಿದ್ದಾರೆ.

ಜಂಗಪುರದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿಸೋದಿಯಾರನ್ನು ಬಿಜೆಪಿಯ ತರ್ವಿಂದರ್ ಸಿಂಗ್ ಮಾರ್ವಾ ಅವರು ಕೇವಲ 675 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫರ್ಹಾದ್ ಸೂರಿ 7,350 ಮತಗಳನ್ನು ಪಡೆದಿದ್ದಾರೆ.

ಗ್ರೇಟರ್ ಕೈಲಾಷನಲ್ಲಿ ಆಪ್‌ನ ಭಾರದ್ವಾಜ್ ಬಿಜೆಪಿಯ ಶಿಕ್ಷಾ ರಾಯ್ ಅವರೆದುರು 3,188 ಮತಗಳಿಂದ ಸೋತಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗರ್ವಿತ್ ಸಿಂಘ್ವಿಯವರಿಗೆ 6,711 ಮತಗಳು ಬಿದ್ದಿವೆ.

ಮಾಳವೀಯ ನಗರದಲ್ಲಿ ಆಪ್ ಅಭ್ಯರ್ಥಿ ಸೋಮನಾಥ ಭಾರ್ತಿಯವರು ಬಿಜೆಪಿಯ ಸತೀಶ ಉಪಾಧ್ಯಾಯ ಎದುರು 2,131 ಮತಗಳಿಂದ ಸೋತಿದ್ದರೆ ಕಾಂಗ್ರೆಸ್‌ನ ಜಿತೇಂದ್ರ ಕುಮಾರ ಕೋಚಾರ್ 6,770 ಮತಗಳನ್ನು ಗಳಿಸಿದ್ದಾರೆ.

ಮದಿಪುರ(ಮೀಸಲು) ಕ್ಷೇತ್ರದಲ್ಲಿ ಡೆಪ್ಯೂಟಿ ಸ್ಪೀಕರ್ ಹಾಗೂ ಆಪ್‌ನ ಇನ್ನೋರ್ವ ನಾಯಕಿ ರಾಖಿ ಬಿರ್ಲಾ ಅವರು ಬಿಜೆಪಿಯ ಕೈಲಾಷ ಗಂಗ್ವಾಲ್ ಅವರಿಂದ 10,899 ಮತಗಳ ಅಂತರದಿಂದ ಸೋಲನ್ನಪ್ಪಿದ್ದಾರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಪಿ.ಪನ್ವಾರ್‌ಗೆ 17,958 ಮತಗಳು ಬಿದ್ದಿವೆ.

ರಾಜಿಂದರ್ ನಗರದಲ್ಲಿ ಬಿಜೆಪಿಯ ಉಮಂಗ್ ಬಜಾಜ್ ಅವರು ಆಪ್‌ನ ದುರ್ಗೇಶ ಪಾಠಕ್ ಅವರನ್ನು 1,231 ಮತಗಳಿಂದ ಸೋಲಿಸಿದ್ದರೆ,ಕಾಂಗ್ರೆಸ್ ಅಭ್ಯರ್ಥಿ ವಿನೀತ ಯಾದವ 4,015 ಮತಗಳನ್ನು ಗಳಿಸಿದ್ದಾರೆ.

ಆಪ್‌ನ ಸಂಗಮ ವಿಹಾರ ಶಾಸಕ ದಿನೇಶ ಮೊಹಾನಿಯಾ ಅವರು ಬಿಜೆಪಿಯ ಚಂದನ ಕುಮಾರ ಚೌಧರಿಯವರ ಎದುರು ಕೇವಲ 344 ಮತಗಳ ಅಂತರದಿಂದ ಸೋತಿದ್ದರೆ,ಕಾಂಗ್ರೆಸ್‌ನ ಹರ್ಷ ಚೌಧರಿ 15,683 ಮತಗಳನ್ನು ಗಳಿಸಿದ್ದಾರೆ. ಮೂರು ಬಾರಿಯ ಶಾಸಕ ಮೊಹಾನಿಯಾ 2016ರಲ್ಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲು ಸೇರಿದ್ದರಾದರೂ ಬಳಿಕ ಬಿಡುಗಡೆಗೊಂಡಿದ್ದರು.

ಬದ್ಲಿ,ಛತ್ತರ್‌ಪುರ,ಮೆಹರೌಲಿ,ನಾಂಗ್ಲೋಯ್ ಜಾಟ್,ತಿಮರ್‌ಪುರ ಮತ್ತು ತ್ರಿಲೋಕಪುರಿಗಳಲ್ಲಿಯೂ ಆಪ್ ಅಭ್ಯರ್ಥಿಗಳ ಸೋಲಿನ ಅಂತರಕ್ಕಿಂತ ಹೆಚ್ಚಿನ ಮತಗಳು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿದ್ದಿವೆ.

ಇಂಡಿಯಾ ಮೈತ್ರಿಕೂಟದ ಹೆಚ್ಚಿನ ಪಕ್ಷಗಳು ಆಪ್ ಮತ್ತು ಕಾಂಗ್ರೆಸ್ ನಡುವೆ ಮೈತ್ರಿಯನ್ನು ಬಯಸಿದ್ದರಿಂದ ಫಲಿತಾಂಶಗಳು ಅವು ಕೈಹಿಸುಕಿಕೊಳ್ಳುವಂತೆ ಮಾಡಿವೆ. ಟಿಎಂಸಿ ಮತ್ತು ಎಸ್‌ಪಿ ಕೂಡ ಆಪ್ ಪರವಾಗಿ ಪ್ರಚಾರ ನಡೆಸಿದ್ದವು. ಕನಿಷ್ಠ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆಪ್‌ನ ಗೆಲುವಿನ ಅವಕಾಶಗಳನ್ನು ತಪ್ಪಿಸಿರಬಹುದು,ಆದರೆ ಅದು ಸತತ ಮೂರನೇ ಸಲ ಶೂನ್ಯ ಸಾಧನೆಯನ್ನು ಮಾಡಿದ್ದು,ಅದರ ಮತಗಳಿಕೆ ಪ್ರಮಾಣ 2020ಕ್ಕಿಂತ ಕೊಂಚವೇ ಹೆಚ್ಚಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News