ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ದಿಲ್ಲಿ ಪೊಲೀಸರಿಂದ ಅನುಮತಿ; ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ CJP ಸಂಸ್ಥಾಪಕ ದಿಪ್ಕೆ
Photo credit : indianexpress
ಹೊಸದಿಲ್ಲಿ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರಿಗೆ ಶನಿವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ದಿಲ್ಲಿ ಪೊಲೀಸರು ಅನುಮತಿ ನೀಡಿದರು.
ಅಮೆರಿಕದಿಂದ ಆಗಮಿಸಿದ ದಿಪ್ಕೆ ಅವರು ವಲಸೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (IGI) ವಿಮಾನ ನಿಲ್ದಾಣದ ಟರ್ಮಿನಲ್–3ರಲ್ಲಿ ಕೆಲ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾದರು. ಬಳಿಕ CJP, ಪ್ರತಿಭಟನಾಕಾರರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಬಳಿ ಸೇರುವ ಬದಲು ನೇರವಾಗಿ ಜಂತರ್ ಮಂತರ್‌ಗೆ ಆಗಮಿಸುವಂತೆ ಮನವಿ ಮಾಡಿತು.
ಈ ನಡುವೆ, ದಿಪ್ಕೆ ಅವರು ಟರ್ಮಿನಲ್–3ರ ಗೇಟ್ ಸಂಖ್ಯೆ 16ರಿಂದ ಹೊರಬರುವ ನಿರೀಕ್ಷೆ ಇತ್ತು. ಆದರೆ ನಿರ್ಗಮನ ದ್ವಾರದ ಬಳಿ ವಾಹನವನ್ನು ಸ್ವೀಕರಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನೀಡದ ಕಾರಣ ಅವರ ನಿರ್ಗಮನದಲ್ಲಿ ವಿಳಂಬ ಉಂಟಾಯಿತು.
ತಮ್ಮ ಕಾರನ್ನು ಟರ್ಮಿನಲ್–3ರ ಹೊರಭಾಗದಲ್ಲಿರುವ ವಿವಿಐಪಿ ಪಾರ್ಕಿಂಗ್ ಪ್ರದೇಶಕ್ಕೆ ತರಲು ದಿಪ್ಕೆ ಅವರು ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆ ಜಿಎಂಆರ್‌ಗೆ ಮನವಿ ಮಾಡಿದ್ದರು. ಆದರೆ ಕಾರು ನಿಲ್ಲಿಸಿದ್ದ ಸಾಮಾನ್ಯ ಪಾರ್ಕಿಂಗ್ ಪ್ರದೇಶಕ್ಕೆ ತೆರಳಿ ವಾಹನವನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದರು ಎಂದು ದಿಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಳಿಕ ಶನಿವಾರ ಬೆಳಿಗ್ಗೆ 9.17ರ ಸುಮಾರಿಗೆ ಟರ್ಮಿನಲ್–3ರಿಂದ ಹೊರಬಂದ ದಿಪ್ಕೆ ಅವರನ್ನು ಕ್ಯಾಬ್ ನಲ್ಲಿ ಸ್ಥಳದಿಂದ ಕರೆದೊಯ್ಯಲಾಯಿತು.